ದಿನದ ಸುದ್ದಿ

ದಾವಣಗೆರೆ | ಒಂದು ವರ್ಷದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ ; ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ಸಿಟಿ ಕಾಮಗಾರಿಗಳ ಲೋಕಾರ್ಪಣೆ

Published

on

ಸುದ್ದಿದಿನ,ದಾವಣಗೆರೆ : ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ (ಭೈರತಿ) ಲೋಕಾರ್ಪಣೆಗೊಳಿಸಿದರು.

ಮಂಗಳವಾರ ನಗರದಲ್ಲಿ ಸ್ಮಾರ್ಟ್ಸಿಟಿ ಲಿ., ವತಿಯಿಂದ ಪೂರ್ಣಗೊಳಿಸಲಾದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಲ್ಲಿ ಶೇ.70 ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಶೇ.30 ರಷ್ಟು ಕಾಮಗಾರಿಗಳನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳು ಇತ್ತೀಚಿಗೆ ಎಲ್ಲಾ ಜಿಲ್ಲೆಗಳ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸ್ಮಾರ್ಟ್ಸಿಟಿ ಕಾಮಗಾರಿಗಳನ್ನು ಇನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಕೈಗೆತ್ತಿಕೊಳ್ಳಲಾದ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ, ಇನ್ನು ಕೆಲವೇ ಕಾಮಗಾರಿಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ ಅವುಗಳನ್ನು ಪೂರ್ಣಗೊಳಿಸಲಾಗುವುದು.

ನಗರದೆಲ್ಲೆಡೆ ಸುರಕ್ಷತೆ, ನಿಯಂತ್ರಣ ಹಾಗೂ ಸಂಚಾರ ವ್ಯವಸ್ಥೆ ಸುಸೂತ್ರಗೊಳಿಸಲು ಐಸಿಟಿ ಯೋಜನೆಯಲ್ಲಿ ಸಿಸಿ ಕ್ಯಾಮರ ಅಳವಡಿಕೆ, ಪಿ.ಎ.ಎಸ್., ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಹಾಗೂ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳನ್ನು ರೂ.85.41 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ, ಇದರಿಂದ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ನೆರವಾಗಲಿದೆ ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದ 33 ಲಕ್ಷ ರೈತರಿಗೆ ರೂ.24 ಸಾವಿರ ಕೋಟಿ ಸಾಲ ಒದಗಿಸಲು ನಿರ್ಧರಿಸಲಾಗಿದೆ. ಇದರಲ್ಲಿ ವಿಶೇಷವಾಗಿ 03 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗುವುದು. ಸಾಲ ನೀಡುವ ಕುರಿತಂತೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲ, ಎಸ್‌ಸಿ-ಎಸ್‌ಟಿ ವರ್ಗದವರನ್ನು ಒಳಗೊಂಡಂತೆ ಯಾರಿಗೆ ಎಷ್ಟು ಸಾಲ ಒದಗಿಸಬೇಕು ಎಂಬುದರ ಕುರಿತು ನಿರ್ದೇಶನ ನೀಡಲಾಗಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ “ಯಶಸ್ವಿನಿ ಯೋಜನೆ”ಯನ್ನು ಪುನಃ ಜಾರಿ ಮಾಡುವುದರ ಕುರಿತು ಸಹಕಾರ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸೇರಿದಂತೆ ಇತರರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version