ದಿನದ ಸುದ್ದಿ

ದಾವಣಗೆರೆ ತಾಲೂಕು ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಯಲ್ಲಿ ಅವ್ಯವಹಾರ ; ಲೋಕಾಯುಕ್ತಕ್ಕೆ ದೂರು : ಡಾ. ಕೆ.ಎ. ಓಬಳೇಶ್

Published

on

ಸುದ್ದಿದಿನ,ದಾವಣಗೆರೆ : 2023-24ನೇ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಸುಮಾರು 87.45 ಲಕ್ಷ ಮೊತ್ತದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದರೊಂದಿಗೆ ದಾವಣಗೆರೆ ತಾಲ್ಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಭಂದಿತ ಅನುದಾನಕ್ಕೆ ಸಂಬಂಧಿಸಿದಂತೆ ನಡೆಸಿದ ಖರೀದಿ ವ್ಯವಹಾರದಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯಾದೇಶಕ್ಕೂ ಮುನ್ನವೇ ಜಿ.ಎಸ್.ಟಿ ಬಿಲ್ಲುಗಳನ್ನು ಪಡೆದಿರುವ ಪ್ರಕರಣ ನಡೆದಿದೆ ಈ ಬಗ್ಗೆಯೂ ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದರು.

2023-24ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ 4 ಹಂತದಲ್ಲಿ ರೂ. 5 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿತ್ತು ಇದರಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ ದಾವಣಗೆರೆ ಇವರಿಗೆ ಒಟ್ಟು 71 ಕಾಮಗಾರಿಗಳ ಕ್ರಿಯಾಯೋಜನೆಗೆ ರೂ.87.45 ಲಕ್ಷ ರೂಪಾಯಿಗಳ ಕಾರ್ಯಾದೇಶ ನೀಡಿದ್ದಾರೆ.

ಈ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳ ಕಡತವನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆದು, ಪರಿಶೀಲನೆ ಮಾಡಿ ನೋಡಿದಾಗ ಬರ ನಿವಾರಣೆಗೆ ತುರ್ತು ಕುಡಿಯುವ ನೀರು ಯೋಜನೆ ಅಡಿಯಲ್ಲಿ
ಬಿಡುಗಡೆಯಾದ ರೂ.87.45 ಲಕ್ಷ ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. 17-12-2024 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸದರಿ ಪ್ರಕರಣವನ್ನು ತನಿಖೆ ಮಾಡಿ, ಒಂದು ತಿಂಗಳ ಒಳಗಾಗಿ ತನಿಖಾ ವರದಿ ನೀಡುವಂತೆ ಮಾಹಿತಿ ಕೋರಲಾಗಿತ್ತು.

ಆದರೆ ಒಂದು ತಿಂಗಳು ಮುಕ್ತಾಯವಾದರೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ತನಿಖೆ ಕೈಗೊಂಡ ಬಗ್ಗೆಯಾಗಲೀ
ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆದ್ದರಿಂದ ಲೋಕಾಯುಕ್ತ ನ್ಯಾಯಾಧೀಕರಣಕ್ಕೆ ದಾವಣಗೆರೆ ತಾಲ್ಲೂಕಿಗೆ ಬಿಡುಗಡೆಯಾದ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿನ ಲೋಪದೋಷಗಳನ್ನು ಉಲ್ಲೇಖಿಸಿ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ವಂಚನೆ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದುರ್ಬಳಕೆ ಮಾಡಿಕೊಂಡ ಅನುದಾನ ಸಂಬಂಧಿಸಿದ ಅಧಿಕಾರಿಗಳಿಂದ ಹಿಂಪಡೆಯುವಂತೆ ದೂರು ನೀಡಲಾಗಿದೆ ಎಂದು ದಾಖಲೆ ಸಹಿತ ವಿವರ ನೀಡಿದರು.

ಹಾಗೆಯೇ ದಾವಣಗೆರೆ ತಾಲ್ಲೂಕು ಪಂಚಾಯಿತಿಯ 2022-
23ನೇ ಸಾಲಿನ ಅನಿರ್ಭಂದಿತ ಅನುದಾನಕ್ಕೆ ಸಂಬಂಧಿಸಿದಂತೆ ನಡೆಸಿದ ಖರೀದಿ ವ್ಯವಹಾರದಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯಾದೇಶಕ್ಕೂ ಮುನ್ನವೇ ಜಿ.ಎಸ್.ಟಿ ಬಿಲ್ಲುಗಳನ್ನು ಪಡೆದಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತಗೆ ದೂರು ನೀಡಲಾಗಿದೆ ಎಂದರು.

ದಾವಣಗೆರೆಯ ಜಿಲ್ಲಾ ಪಂಚಾಯಿತಿ ಕಛೇರಿಯು ಜಿಲ್ಲಾ ವ್ಯಾಪ್ತಿಯ ಎಲ್ಲಾ ಅಧೀನ ಕಛೇರಿಗಳಿಗೆ ಮಾದರಿಯಾಗಿರಬೇಕು. ಆದರೆ
ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿಯೇ ಸಾಕಷ್ಟು ವೈಫಲ್ಯಗಳು ಎದ್ದು ಕಾಣುತ್ತಿದ್ದು, ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಛೇರಿಗಳ ಸ್ಥಿತಿಗತಿ ಹೇಗೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version