ದಿನದ ಸುದ್ದಿ
ವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ
ದಾವಣಗೆರೆ, ಸುದ್ದಿದಿನ;ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಸ್.ಸುರೇಶ್ ಅವರನ್ನು ತಕ್ಷಣವೇ ವಜಾಗೊಳಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಪ್ರಭಾರ ಪ್ರಾಂಶುಪಾಲ ಎಸ್. ಸುರೇಶ್ ಇವರು ವಿಶ್ವವಿದ್ಯಾಲಯಕ್ಕೆ ದಿನಾಂಕ: 31-05-2025 ರ ವೇಳೆಗೆ 11 ವರ್ಷ 5 ತಿಂಗಳು 11 ದಿನಗಳ ಕಾಲ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವಂತೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿರುತ್ತಾರೆ. ಅಧಿಕೃತ ದಾಖಲೆಗಳೊಂದಿಗೆ ಕುಲಸಚಿವರು, ದಾವಣಗೆರೆ ವಿಶ್ವವಿದ್ಯಾಲಯ ಇವರಿಗೆ ದೂರು ನೀಡಿ ನಿಗಧಿತ ಕಾಲವಾಧಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕುಲಸಚಿವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಲಾಗಿತ್ತು.
ದೂರಿನ ವಿಷಯವು ಸುದ್ದಿದಿನ ಆನ್‌ಲೈನ್ ಪೋರ್ಟಲ್‌ನಲ್ಲಿ ಪ್ರಸಾರಗೊಂಡ ನಂತರ ಎಚ್ಚೆತ್ತುಕೊಂಡ ಕುಲಸಚಿವರು ಪರಿಶೀಲನೆ ಮಾಡಿ ತಕ್ಷಣವೇ ಎಸ್.ಸುರೇಶ್ ಅವರನ್ನು ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕೈಗೊಂಡ ಕುಲಸಚಿವ ಎಸ್.ಬಿ ಘಂಟಿ ಅವರ ಕ್ರಮಕ್ಕೆ ವಕೀಲ ಡಾ.ಕೆ.ಎ.ಓಬಳಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದು, ಅಧಿಕಾರದ ಆಸೆಗೆ ಸುಳ್ಳು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.