ದಿನದ ಸುದ್ದಿ

ದಾವಣಗೆರೆ ಜಿಲ್ಲಾ ಪಂಚಾಯತ್ ನಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರೋ ಅಧಿಕಾರಿ ಬಸವರಾಜ್ : ಅಧಿಕಾರ ದುರ್ಬಳಕೆ ಆರೋಪ ; ವರ್ಗಾವಣೆ ಆದೇಶ ನೀಡಿದ ಸಿಎಂಗೆ ಕಿಂಚಿತೂ ಬೆಲೆಕೊಡದ‌ ಇಲಾಖೆ..! ಓದಿ ಈ ಸ್ಟೋರಿ

Published

on

~ಸುದ್ದಿದಿನ.ಕಾಂ ವಿಶೇಷ

ಸುದ್ದಿದಿನಡೆಸ್ಕ್:ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಿಖಿತ ಆದೇಶಕ್ಕೆ ಬೆಲೆ ಕೊಡದ ಅಧಿಕಾರಿಶಾಹಿ ವರ್ಗ ಜನಸಾಮಾನ್ಯರ ಕುಂದು ಕೊರತೆಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದಾಗಿ ವಕೀಲರಾದ ಡಾ.ಕೆ.ಎ.ಓಬಳೇಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಚಾರವನ್ನು ಹತ್ತಿಕ್ಕುವ ಉದ್ದೇಶದಿಂದಾಗಿ ಯಾವುದೇ ಸರ್ಕಾರಿ ನೌಕರನು ಸುದೀರ್ಘ ಅವಧಿಯವರೆಗೆ ಒಂದೇ ಕಛೇರಿ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬಾರದು ಎಂಬ ಕಾನೂನು ಜಾರಿಗೆ ತರಲಾಗಿದೆ. ಆದರೆ ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ್ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ದಾವಣಗೆರೆ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಸವರಾಜ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಅಧಿಕಾರ ಭದ್ರತೆಯ ಕಾರಣದಿಂದಾಗಿ ಹಲವಾರು ಕಾನೂನುಬಾಹಿರ ಚಟುವಟಿಗಳಲ್ಲಿ ಭಾಗಿಯಾಗಿರುತ್ತಾರೆ. ಹೀಗಾಗಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಇವರಿಗೆ ಸಾರ್ವಜನಿಕರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಲವಾರು ದೂರು ನೀಡಿದ ಕಾರಣ, ಸದರಿ ದೂರುಗಳ ಆಧಾರದ ಮೇಲೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದಿನಾಂಕ: 10-10-2023ರ ತಮ್ಮ ಪತ್ರದ ಮೂಲಕ ‘ಶ್ರೀ ಬಸವರಾಜ್, ಸಹಾಯಕ ನಿರ್ದೇಶಕರು, ದಾವಣಗೆರೆ ಜಿಲ್ಲಾ ಪಂಚಾಯತ್ ಕಾರ್ಯಲಯದಲ್ಲಿ ಕಳೆದ 23 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳಿಗೆ ಅನವಶ್ಯಕವಾಗಿ ತೊಂದರೆ ನೀಡುವುದು, ಅಧಿಕಾರ ದುರ್ಬಳಕೆ ಮತ್ತು ಸಾರ್ವಜನಿಕರಿಂದ ದೂರುಗಳ ಹಿನ್ನೆಲೆಯಲ್ಲಿ ಇವರನ್ನು ಬೇರೆ ಜಿಲ್ಲೆಗೆ ವರ್ಗಾಹಿಸುವಂತೆ’ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವಿನಂತಿಸಿರುತ್ತಾರೆ.

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ರವನ್ನು ಆಧರಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದಿನಾಂಕ:09-11-2023ರ ಪತ್ರದ ಮೂಲಕ ‘ ಬಸವರಾಜ್, ಸಹಾಯಕ ನಿರ್ದೇಶಕರು, ದಾವಣಗೆರೆ ಜಿಲ್ಲಾ ಪಂಚಾಯತ್ ಕಾರ್ಯಾಲಯ ಇವರನ್ನು ಅಧಿಕಾರ ದುರ್ಬಳಕೆ ಮತ್ತು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗೆ ವರ್ಗಾಹಿಸಲು’ ಸೂಚಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರಿಗೆ ಲಿಖಿತ ಆದೇಶ ಹೊರಡಿಸಿರುತ್ತಾರೆ.

ಕರ್ನಾಟಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ಧರಾಮಯ್ಯನವರು ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಬಸವರಾಜ್ ಎಂಬುವವರನ್ನು ಬೇರೆ ಜಿಲ್ಲೆಗೆ ವರ್ಗಾಹಿಸುವಂತೆ ಸಾರ್ವಜನಿಕ ದೂರುಗಳು ಹಾಗೂ ಆಡಳಿತದ ಹಿತದೃಷ್ಟಿಯಿಂದ ಆದೇಶ ಹೊರಡಿಸಿ 2 ವರ್ಷಗಳು ಕಳೆಯುತ್ತ ಬಂದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿ ಆದೇಶವನ್ನು ಗಾಳಿಗೆ ತೂರಿರುತ್ತಾರೆ.

ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆದ ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರಾದ ಡಾ.ಕೆ.ಎ.ಓಬಳೇಶ್ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿ ಆದೇಶ ಪತ್ರವನ್ನು ಹೀಗೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳು ಜನಸಾಮಾನ್ಯರ ಮನವಿ, ದೂರುಗಳಿಗೆ, ಕುಂದು-ಕೊರತೆಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿಗಳ ಆದೇಶವನ್ನು ನಿರ್ಲಕ್ಷ್ಯಕ್ಕೆ ಒಳಪಡಿಸಿ, ಕರ್ತವ್ಯ ಲೋಪದ ಆರೋಪ ಹೊತ್ತಿರುವ ಅಧಿಕಾರಿಯ ಪರವಾಗಿ ನಿಂತಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರಿಗೆ ಪತ್ರ ಬರೆದು, ತಮ್ಮ ಈ ನಡೆಗೆ ಸ್ಪಷ್ಟನೆ ನೀಡುವಂತೆ ಕೋರಿರುತ್ತಾರೆ.

ಈ ಬಗ್ಗೆ ಸುದ್ದಿದಿನ.ಕಾಂ(www.suddidina.com) ನೊಂದಿಗೆ ಮಾಹಿತಿ ಹಂಚಿಕೊಂಡಿರುವ ಡಾ.ಕೆ.ಎ.ಓಬಳೇಶ್ ಅವರು ಒಂದು ತಿಂಗಳ ಒಳಗಾಗಿ ಮುಖ್ಯಮಂತ್ರಿ, ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಗಳು ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಹೋದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಲಾಗುವುದು ಎಂಬುದಾಗಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version