ದಿನದ ಸುದ್ದಿ

ಖಾಸಗಿ ಶಾಲೆಗಿಂತಲೂ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ : ಡಿಸಿಎಂ ಗೋವಿಂದ ಕಾರಜೋಳ

Published

on

ಸುದ್ದಿದಿನ,ದಾವಣಗೆರೆ: ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ ಹೇಳಿದರು.

ನ್ಯಾಮತಿಯಲ್ಲಿ ಶನಿವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಾಗೂ ವಿವಿಧ ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಶಾಲೆಯ ಸುಮಾರು 34 ಸಾವಿರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.

ಇಂದಿನ ದಿನಗಳಲ್ಲಿ ಪೋಷಕರು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಲು ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಯಾಗಿದೆ ಎಂದ ಅವರು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸಾರ್ವಜನಿಕರು ಬೆಂಬಲಿಸಬೇಕು ಎಂದರು.

ಕೊರೋನಾ ಭಯದಲ್ಲಿ ಕೂಡ ನಮ್ಮ ಕರ್ನಾಟಕ ವಸತಿ ಶಿಕ್ಷಣ ಪಿಯುಸಿ ಮಕ್ಕಳು ಶೇ. 86 ರಷ್ಟು ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ ಪಿಯುಸಿ ಸರಾಸರಿ ಶೇ.61 ರಷ್ಟಿದ್ದರೆ, ವಸತಿ ಶಿಕ್ಷಣ ಇಲಾಖೆ ಶೇ. 86 ರಷ್ಟು ಇದ್ದು, ಸರಾಸರಿ ಶೇ. 25 ರಷ್ಟು ಹೆಚ್ಚಾಗಿದೆ. ಅದೇ ರೀತಿ ಎಸ್‍ಎಸ್‍ಎಲ್‍ಸಿ ಮಕ್ಕಳು ಶೇ. 95 ರಷ್ಡು ಮಕ್ಕಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಸರಾಸರಿ 79 ರಷ್ಟು ಇದ್ದರೆ, ವಸತಿ ಶಿಕ್ಷಣ ಇಲಾಖೆ ಶೇ. 91 ರಷ್ಟಿದೆ ಎಂದು ತಿಳಿಸಿದರು.

ಹೊನ್ನಾಳಿ-ನ್ಯಾಮತಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಅಭಿವೃದ್ಧಿ ಕೆಲಸಗಳಿಗೆ ರೂ. 80 ಕೋಟಿ ಹಣವನ್ನು ಕೊರೊನಾ ಸಂಕಷ್ಟದಲ್ಲಿಯೂ ತರಲಾಗಿದೆ. ಇದರಿಂದ ಶಾಸಕ ರೇಣುಕಾಚಾರ್ಯ ಅವರ ಸಾಮಾಜಿಕ ಕಳಕಳಿ ದೊಡ್ಡಮಟ್ಟದಲ್ಲಿರುವುದು ತಿಳಿದುಬರುತ್ತದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version