ದಿನದ ಸುದ್ದಿ

ಖ್ಯಾತ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ನಿಧನ ; ಒಡನಾಡಿಗಳ ನುಡಿ ನಮನ

Published

on

ಸುದ್ದಿದಿನ ಡೆಸ್ಕ್ : ಖ್ಯಾತ ಸಮಾಜವಾದಿ ಚಿಂತಕ, ಬರಹಗಾರ , ವಿಮರ್ಶಕ, “ಗಾಂಧಿ ಕಥನ” ದ ಕರ್ತೃ ಡಿ.ಎಸ್.ನಾಗಭೂಷಣ (70) ಅವರು ಶಿವಮೊಗ್ಗದಲ್ಲಿ ರಾತ್ರಿ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಇಂದು, ಮೇ 19 ರ ಸಂಜೆ 5 ಗಂಟೆಗೆ ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಿ.ಎಸ್.ನಾಗಭೂಷಣ ಅವರ ಒಡನಾಡಿಗಳಾದ, ಶ್ರೀಪಾದ್ ಯ, ದಿನೇಶ್ ಅಮೀನ್ ಮಟ್ಟು, ರಾಘವೇಂದ್ರ, ಸಾಗರ ಸೇರಿದಂತೆ ಹಲವು ನುಡಿ ನಮನ ಸಲ್ಲಿಸಿದ್ದಾರೆ.


  • ಶ್ರೀಪಾದ್ ಭಟ್, ಚಿಂತಕರು

ಡಿ. ಎಸ್. ನಾಗಭೂಷಣ ನಿಧನರಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಡಿ. ಎಸ್. ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು.

ಎಪ್ಪತ್ತರ ದಶಕದ ನಮ್ಮ ಬಾಲ್ಯದ ದಿನಗಳಲ್ಲಿ
ಆಕಾಶವಾಣಿಯಲ್ಲಿದ್ದ ಡಿ. ಎಸ್. ಎನ್ ಓದುತ್ತಿದ್ದ ಪ್ರದೇಶ ಸಮಾಚಾರ ಜನಪ್ರಿಯವಾಗಿತ್ತು. ಹಾಗೆಯೇ ಲೋಹಿಯಾ, ಕುವೆಂಪು, ಜಿಎಸ್ ಎಸ್, ಗಾಂಧಿ ಕುರಿತ ಅವರ ಆಳವಾದ ಓದು, ಗ್ರಹಿಕೆ ಮತ್ತು ವಿಚಾರ ಮಂಡನೆ ಬೆರಗುಗೊಳಿಸುತ್ತಿತ್ತು. ಪ್ರತಿಭಾವಂತ ಲೇಖಕ. ವಸ್ತುನಿಷ್ಠವಾಗಿ ಬರೆಯುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಡಿ. ಎಸ್. ಎನ್
he is one of the best reader.

1990ರಲ್ಲಿ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ನೆಪದಲ್ಲಿ ಲೇಖಕರಿಗೆ ತುಮಕೂರಿನಲ್ಲಿ ಒಂದು ಅಭಿನಂದನೆ, ಚರ್ಚೆ ಗೋಷ್ಠಿಯಿತ್ತು. ನಾನು ಮೊದಲ ಬಾರಿಗೆ ಡಿ. ಎಸ್. ಎನ್ ರನ್ನು ಮಾತನಾಡಿಸಿದ್ದು ಅಲ್ಲಿ. ಆ ಸಮಾರಂಭಕ್ಕೆ ಬರಲು ಒಪ್ಪಿಕೊಂಡು ನಂತರ ಕೈ ಕೊಟ್ಟ ಲಂಕೇಶ್ ರನ್ನು ಶರ್ಟಿನ ತೋಳು ಮೇಲೇರಿಸಿಕೊಳ್ಳುತ್ತಾ ಟೀಕಿಸುತ್ತಿದ್ದ ಆ ದೃಶ್ಯ ನಿನ್ನೆ, ಮೊನ್ನೆ ನಡೆದಂತಿದೆ.

ಆದರೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಂದರ್ಭದಲ್ಲಿ ಚಂಡಿ ಹಿಡಿದು ಹಠದಿಂದ ವರ್ತಿಸುವ ಅವರ ಇನ್ನೊಂದು ಮುಖ ಅನೇಕ ಸಂದರ್ಭಗಳಲ್ಲಿ ಎದುರುಗಿರುವವರನ್ನು ಪರಚುತ್ತಿತ್ತು, ಗಾಯಗೊಳಿಸುತ್ತಿತ್ತು.
ತನ್ನದೇ ಸತ್ಯ ಎಂಬ ಧೋರಣೆ ಜಗಳಗಳಿಗೆ ಕಾರಣವಾಗಿದ್ದು ಲೆಕ್ಕವೇ ಇಲ್ಲ.

ನಾವು ಸ್ನೇಹಿತರು ‘ಇದೊಂದು ವಿಷಯದಲ್ಲಿ ಡಿ.ಎಸ್.ಎನ್ ಪ್ರಬುದ್ದರಾಗಿದ್ದರೆ ಎಷ್ಟು ಚಂದ’ ಎಂದು ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಬದುಕು ಹಾಗೆಲ್ಲಾ ಚೆಂದವಾಗಿ ಇರಲು ಬಿಡುವುದಿಲ್ಲ. ಡಿ. ಎಸ್. ಎನ್ ರವರಿಗೆ ಈ ಫೋಟೋ ತೋರಿಸಿ ಹೀಗೆ ಇರಬೇಕಿತ್ತು ಸರ್ ನೀವು ಎಂದು ಎಷ್ಟೋ ಬಾರಿ ಹೇಳಬೇಕೆಂದುಕೊಂಡಿದ್ದೆ. ಹೇಳಲಿಲ್ಲ. ತಮ್ಮ ಬದುಕಿನ ಪಯಣ ಮುಗಿಸಿ ಎದ್ದು ನಡೆದ ಡಿ. ಎಸ್. ಎನ್ ಗೆ ನಮನಗಳು.


  • ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

ನೇರ, ನಿಷ್ಠುರ , ಪ್ರಾಮಾಣಿಕ, ಜಾತ್ಯತೀತ, ಸಿದ್ದಾಂತ ಬದ್ದ…ಎಂಬೀತ್ಯಾದಿ ವಿಶೇಷಣಗಳನ್ನು ಅಳುಕಿಲ್ಲದೆ ಬಳಸಲು ಸಾಧ್ಯವಿರುವ ನಮ್ಮ ನಡುವಿನ ಒಂದು ಕೈಬೆರಳೆಣಿಕೆಯ ವ್ಯಕ್ತಿಗಳಲ್ಲಿ ಡಿ.ಎಸ್.ನಾಗಭೂಷಣ್ ಒಬ್ಬರಾಗಿದ್ದರು.

ತರಗತಿಗಳಲ್ಲಿ ಎಂದೂ ಪಾಠ ಮಾಡದೆ ಇದ್ದರೂ ನನ್ನಂತಹ ಸಾವಿರಾರು ಕಿರಿಯರಿಗೆ ಅವರು ಬದುಕಿನ ಶಾಲೆಯ ಮೇಷ್ಟ್ರು ಆಗಿದ್ದರು. ಅವರ ಪ್ರತಿಯೊಂದು ಜಗಳ,‌ ಮುನಿಸುಗಳಲ್ಲಿ ಕಲಿಯುವ ಪಾಠ ಇತ್ತು.

ಹೆಚ್ಚು ಪರಿಚಯವೇ ಇಲ್ಲದ ದಿನಗಳಲ್ಲಿ ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ದೆಹಲಿಯಲ್ಲಿದ್ದಾಗ ನನಗೆ ಪೋನ್ ಮಾಡಿ ಅವರ‌ ಪುಸ್ತಕಕ್ಕೆ ಬೆನ್ನುಡಿ ಬರೆಸಿದ್ದರು. ಅವರ ಕೋರಿಕೆಯನ್ನು ಕೇಳಿದಾಗಲೇ ಆಘಾತಕ್ಕೀಡಾಗಿದ್ದ ನಾನು ಒಲ್ಲೆ‌ ಎಂದಾಗ ಗದರಿಸಿ ಬರೆಸಿದ್ದರು.

ಅದರ ನಂತರ ನಿರಂತರವಾಗಿ ನನ್ನ ಮತ್ತು ಅವರ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಲೇ ಇತ್ತು. ಇದೇ ವೇಳೆ ಅವರ ‘ಆದೇಶ’ಗಳನ್ನು ಗಳನ್ನು ನಾನು ವಿಧೇಯನಾಗಿ ಪಾಲಿಸುತ್ತಲೇ ಹೋಗುತ್ತಿದ್ದೆ.

ದೆಹಲಿಯಿಂದ ಬಂದ ನಂತರ ಬಹುಷ: ನಾನು ಭಾಗವಹಿಸಿದ್ದ ಮೊದಲ ಕಾರ್ಯಕ್ರಮ ಅವರೇ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ಸಮಾಜವಾದಿ ಶಿಬಿರ ಆಗಿತ್ತು.

ಹೊಸಮನುಷ್ಯ ಪತ್ರಿಕೆಗೆ ಮೂರೋ ನಾಲ್ಕೋ ದೀರ್ಘ ಲೇಖನಗಳನ್ನು ಬರೆಸಿದ್ದರು. ಅವರೇ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆಸಿ‌ ಮಾತನಾಡಿಸುತ್ತಿದ್ದರು. ಅವುಗಳೆಲ್ಲ ಅವರು ನೀಡುತ್ತಿದ್ದ ‘ಆದೇಶ’ಗಳೇ ಆಗಿರುತ್ತಿದ್ದವು. ವಿಧೇಯ ಶಿಷ್ಯನ ರೀತಿ ನಾನು ತಲೆಯಾಡಿಸುತ್ತಿದ್ದೆ. ನನ್ನೊಳಗೆ ಅವರ ಬಗ್ಗೆ ಇದ್ದ ಗೌರವ ಇದಕ್ಕೆ ಕಾರಣ.

ಅಪ್ಪಟ ಲೋಹಿಯಾವಾದಿಯಾಗಿದ್ದ ಡಿಎಸ್ ಎನ್ ಕೇವಲ ಭಾಷಣ ಮಾಡಿಲ್ಲ, ಬರೆದು ಸಾಲು ಸಾಲು ಪುಸ್ತಕಗಳನ್ನು ಪ್ರಕಟಿಸಿದ್ದರು.‌ ಅವೆಲ್ಲವೂ ಲೋಹಿಯಾವಾದ ಪಾಠಕ್ಕೆ ಪಠ್ಯಗಳಂತಿವೆ.

ಲೋಹಿಯಾ ಅವರಂತೆ ಕೊನೆಯ ವರೆಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅಂತರ ಇಟ್ಟುಕೊಂಡೇ ಬದುಕಿದರು. ಇದೇ ಕಾರಣದಿಂದಾಗಿ ಇತ್ತೀಚಿನ ವರೆಗೆ ಬಿಜೆಪಿಯನ್ನು ವಿರೋಧಿಸಬೇಕಾಗಿರುವಷ್ಟು ವಿರೋಧಿಸುತ್ತಿರಲಿಲ್ಲ.

ನಾನು ಮುಖ್ಯಮಂತ್ರಿ ಕಚೇರಿ ಸೇರಿದ ನಂತರ ಉದ್ದೇಶಪೂರ್ವಕವಾಗಿ ನನ್ನೊಡನೆ ಕಾಂಗ್ರೆಸ್ ಬಗ್ಗೆ ಕಟುವಾಗಿ ಮಾತನಾಡುತ್ತಿದ್ದರು. ನಾನು ಅಷ್ಟೇ ಕಟುವಾಗಿ ಬಿಜೆಪಿ, ಆರ್ ಎಸ್ ಎಸ್ ಗಳನ್ನು ಟೀಕಿಸುತ್ತಿದ್ದೆ. ನಮ್ಮ ನಡುವಿನ ಬಹುತೇಕ ಕೋಳಿಜಗಳಗಳಿಗೆ ಇದೇ ಕಾರಣವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ವಿಷಯದ ಚರ್ಚೆಗಳನ್ನು ನಡೆಸುತ್ತಿರಲಿಲ್ಲ.

ಹಣಕಾಸಿನ ವ್ಯವಹಾರದಲ್ಲಿ ಅವರಷ್ಟು ಪ್ರಾಮಾಣಿಕ, ನಿಷ್ಠುರರ ವ್ಯಕ್ತಿಗಳನ್ನೇ ನಾನು ಕಂಡಿಲ್ಲ, ಬಹುಷ: ಕಾಣಲು ಸಾಧ್ಯವೇ ಇಲ್ಲವೇನೋ? ಹೊಸ‌ಮನುಷ್ಯ ವಿಶೇಷಾಂಕಕ್ಕೆ ಲೇಖನಗಳನ್ನು ಬರೆದಾಗ ತಪ್ಪದೆ ಸಂಭಾವನೆ ಕೊಡುತ್ತಿದ್ದರು. ವಿಶೇಷಾಂಕಕ್ಕೆ ಜಾಹೀರಾತಿನಿಂದ ಬಂದಿರುವ ಹಣ ಮತ್ತು ಖರ್ಚಾಗಿರುವ ಹಣವನ್ನು ಲೆಕ್ಕ‌‌ಮಾಡಿ ಲೇಖಕರಿಗೆ ಹಂಚುತ್ತಿದ್ದರು.

‘ಸಾರ್, ಪತ್ರಿಕೆ ನಡೆಸುವುದು ಕಷ್ಟ ಇದೆ, ಉಳಿದ ಹಣ ಇಟ್ಕೊಳ್ಳಿ’ ಎಂದರೆ ಒಪ್ಪುತ್ತಿರಲಿಲ್ಲ. ಕೊನೆಗೆ ಪುಸ್ತಕ ಕಳಿಸಿ ಎಂದು ಹೇಳಿದಾಗ‌ ಲೆಕ್ಕಹಾಕಿ ಅಷ್ಟೇ ಬೆಲೆಯ ಪುಸ್ತಕ ಕಳಿಸಿದ್ದರು. ಇಂತಹ ನಿಷ್ಠುರ ಪ್ರಾಮಾಣಿಕತೆಯನ್ನು ಸಣ್ಣ ಪತ್ರಿಕೆಗಳು ಬಿಡಿ ದೊಡ್ಡ ಪತ್ರಿಕೆಗಳಿಂದಲೂ ನಿರೀಕ್ಷಿಸಲು ಸಾಧ್ಯ ಇಲ್ಲ.

ನಾಗಭೂಷಣ್ ಅವರಿಂದ ಕಲಿಯಬೇಕಾದ ಹಲವಾರು ಪಾಠಗಳಿವೆ, ಅವುಗಳಲ್ಲಿ ಎಂದೂ ಬತ್ತಿಹೋಗದ ಹಾಗೆ ಕಾಪಿಟ್ಟುಕೊಂಡ ಬಂದಿದ್ದ ಅವರ ಜೀವನೋತ್ಸಾಹವೂ ಒಂದು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೂ ಅದೆಂದೂ ಅವರ ಓದು-ಬರವಣಿಗೆಗಳಿಗೆ ಅಡ್ಡಿಯಾಗಿರಲಿಲ್ಲ.

ನಾಗಭೂಷಣ್ ಅವರ ಬದುಕಿನ ಯಶಸ್ಸಿನಲ್ಲಿ
ಈ ಕಪ್ಪು ಹುಡುಗನ ಪ್ರೀತಿಗೆ ಬಿದ್ದು ಕೊನೆಯ ವರೆಗೂ ಅದನ್ನು ನಿಭಾಯಿಸಿದ ಸವಿತಾ ನಾಗಭೂಷಣ್ ಪಾತ್ರ ದೊಡ್ಡದು. ಗಂಡನ‌ ಆರೈಕೆಗಾಗಿ ಸ್ವಯಂನಿವೃತ್ತಿ ಪಡೆದು ತಾಯಿಯಂತೆ ಸಲಹಿದ್ದಾರೆ. ಒಂದು ರೀತಿಯಲ್ಲಿ ಇಬ್ಬರೂ ಪರಸ್ಪರರಿಗೆ ಮಕ್ಕಳಂತಿದ್ದರು. ಅನಿವಾರ್ಯವಾದ ಅಗಲಿಕೆಯ ದಿನಗಳಲ್ಲಿ ಹೇಗೆ ಬದುಕಬೇಕೆಂಬುದನ್ನು ನಾಗಭೂಷಣ್ ಖಂಡಿತ ಹೇಳಿಕೊಟ್ಟು ಹೋಗಿರುತ್ತಾರೆ, ಹಾಗೆಯೇ ಅವರು ಬದುಕಲಿ, ನಾಗಭೂಷಣ್ ಅವರನ್ನು ಪ್ರೀತಿಸುವವರೆಲ್ಲರೂ ಸವಿತಾ ಅವರ ಜೊತೆಯಲ್ಲಿಯೂ ಇರುತ್ತಾರೆ.

ನಾಲ್ಕು ದಿಕ್ಕುಗಳಿಂದಲೂ ನಿರಾಶೆ ,ಹತಾಶೆ, ಸೋಲುಗಳ ಕಾರ್ಮೋಡ ಆವರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲರೂ ಡಿಎಸ್ ಎನ್ ಅವರ ನಿಷ್ಠುರತೆ, ಪ್ರಾಮಾಣಿಕತೆ, ಬದ್ಧತೆಯ ಜೊತೆಗೆ ಒಂದೆರಡು ಬೊಗಸೆ ಅವರಲ್ಲಿದ್ದ ಜೀವನೋತ್ಸಾಹವನ್ನು ಪಡೆದುಕೊಳ್ಳಲು ಸಾಧ್ಯವಾದರೆ ನಮ್ಮ ಬದುಕು ಅರ್ಥಪೂರ್ಣವಾದೀತು,‌ ಅವರ ಹಾಗೆ.

ಪ್ರೀತಿಯ ಮೇಸ್ಟ್ರೇ, ನಿಮ್ಮೆಲ್ಲ ಪ್ರೀತಿ,‌ ಜಗಳ, ಕಾಳಜಿ, ನಂಬಿಕೆಗಳನ್ನು ಸದಾ ನೆನಪಲ್ಲಿಟ್ಟುಕೊಳ್ಳುವೆ. ಬದುಕು ಹೇಗಿರಬೇಕೆನ್ನುವುದನ್ನು ಬದುಕಿ ತೋರಿಸಿದ್ದೀರಿ.

ನಿಮಗೆ ಗೌರವಾದರದ ವಿದಾಯ…


  • ಎಂ ರಾಘವೇಂದ್ರ, ಪತ್ರಕರ್ತರು, ಸಾಗರ

ಬಿಟ್ಟು ಹೋಗಿರುವ ಆಸ್ತಿ ಕರಗುವುದಿಲ್ಲ…
( ಈ ಕ್ಷಣಕ್ಕೆ ಸಿಕ್ಕಿರುವವು ಇವು ಇನ್ನೂ ಸುಮಾರಿವೆ. )
ಹಿರಿಯ ಲೇಖಕರು,ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ನಮ್ಮನ್ನು ಅಗಲಿದ್ದಾರೆ.ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭ್ಯವಾಗಿದೆ.ನೇರ ನಡೆ,ನುಡಿ,ನಿಷ್ಠುರ ವ್ಯಕ್ತಿ ತ್ವದ ಡಿಎಸ್ ಎನ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ,ಪ್ರಾಮಾಣಿಕತೆಗೆ ಮಾದರಿಯಾಗಿದ್ದರು.

ಸಾಹಿತ್ಯ, ಸಂಸ್ಕೃತಿ,ಕಲೆ,ರಾಜಕೀಯದ ಕುರಿತು ಅಪಾರವಾದ ತಿಳವಳಿಕೆ,ಪಾಂಡಿತ್ಯ ಹೊಂದಿದ್ದ ನಾಗಭೂಷಣ್ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು.
ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ಈಚೀನ ವರ್ಷಗಳಲ್ಲಿ ಗಾಂಧೀವಾದದ ಕಡೆ ಹೆಚ್ಚು ಒಲವು ತೋರಿದ್ದರು.ಜಾಗತೀಕರಣ ತಂದಿರುವ ವಿಸ್ಮೃತಿಗಳನ್ನು ಎದುರಿಸಲು ಗಾಂಧೀ ಪ್ರತಿಪಾದಿಸಿದ ಸರಳ,ಸಭ್ಯ ,ಕಡಿಮೆ ಅವಶ್ಯಕತೆಗಳ ಬದುಕು ನಮ್ಮದಾಗಬೇಕು ಎಂದು ಬಯಸಿದ್ದರು.

ಪ್ರತಿವರ್ಷ ಅಕ್ಟೋಬರ್ ನಲ್ಲಿ ಲೋಹಿಯಾ ಪ್ರತಿಷ್ಠಾನದ ಮೂಲಕ ಕುಪ್ಪಳ್ಳಿಯಲ್ಲಿ ಅವರು ಆಯೋಜಿಸುತ್ತಿದ್ದ ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಜನರಲ್ಲಿ ಗಾಂಧಿ,ಲೋಹಿಯಾ.ಅಂಬೇಡ್ಕರ್, ಜೆ.ಪಿ.ಚಿಂತನೆಯನ್ನು ತಲುಪಿಸಲು ಉತ್ಸುಕರಾಗಿದ್ದರು.ಮೇಲ್ನೋಟಕ್ಕೆ ಒರಟು ಸ್ವಭಾವದವರಂತೆ ಕಾಣುತ್ತಿದ್ದ ಡಿಎಸ್ ಎನ್ ಆಳದಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಬಲಪಂಥೀಯ ರಾಜಕಾರಣದ ದೋಷಗಳನ್ನು ಗುರುತಿಸಿ ಟೀಕಿಸುವಷ್ಟೆ ಪ್ರಖರತೆಯನ್ನು ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತೂ ತೋರುತ್ತಿದ್ದರು.
ನಾಗಭೂಷಣ್ ರ ಎಲ್ಲ ಸಮಾಜಮುಖಿ ಕೆಲಸಗಳ ಹಿಂದೆ ಗಟ್ಟಿಯಾಗಿ ನಿಂತವರು ಅವರ ಪತ್ನಿ ಕವಯತ್ರಿ ಸವಿತಾ ನಾಗಭೂಷಣ. ಈ ಹೊತ್ತಿನಲ್ಲಿ ನಾವು ಸವಿತಾ ಅವರ ಜೊತೆ ನಿಲ್ಲಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version