ನೆಲದನಿ
ಸಾವಿನ ಹಾಡುಗಳು
ಮಾನವನ ಜೀವನದಲ್ಲಿ ಸಾವು ಅಂತಿಮವಾದುದು. ಅದು ಎಲ್ಲವನ್ನು ಮುಗಿಸಿಬಿಡುತ್ತದೆ. ಸಂಸ್ಕೃತಿಯೊಂದು ಸಾಧಿಸಿಕೊಂಡು ಬಂದಿರುವ ಸಮನ್ವಯವನ್ನು ಸಾವು ಬುಡಮೇಲು ಮಾಡುತ್ತದೆ. ಆಗ ಸಂಸ್ಕೃತಿಯ ನಿರ್ಮಾತೃಗಳು ಅಥವಾ ಅದರ ವಾಹಕರು ಕಳಕೊಂಡ ಸಮನ್ವಯವನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಗುತ್ತದೆ. ಇಂಥ ಪ್ರಯತ್ನಗಳ ಅಂಗವಾಗಿ ಸಾವಿನ ಸಂದರ್ಭದಲ್ಲಿ ಹಾಡುಗಳನ್ನು ಹೇಳಲಾಗುತ್ತದೆ. ಸಾವು ತಂದೊಡ್ಡುವ ಸಂಕಟಗಳನ್ನು ಮರೆಯಲು ಮನುಕುಲಕ್ಕೆ ಇಂಥ ಹಾಡುಗಳು ಅಗತ್ಯ.
ಈ ಬಗೆಯ ಸಾವಿನ ಹಾಡುಗಳಿಗೆ ಕಿವಿಗೊಡಲು ಕರಾವಳಿ ಕರ್ನಾಟಕಕ್ಕೆ ಹೋಗಬೇಕು. ಅಲ್ಲಿ ಅನೇಕ ಭೂತಗಳಿವೆ. ಒಂದು ಅಂದಾಜಿನ ಪ್ರಕಾರ ಅವುಗಳ ಸಂಖ್ಯೆ ಸಮಾರು 1000 ಕ್ಕೂ ಹೆಚ್ಚು. ನಂಬಿದವರಿಗೆ ಅವು ಕಣ್ಣಿಗೆ ಕಾಣುವ ದೈವಗಳು. ಈ ದೈವಗಳ ಕಥನಗಳನ್ನು ಪಾಡ್ದನಗಳೆಂದು ಕರೆಯುತ್ತಾರೆ. ಪಾಡ್ದನಗಳ ನಾಯಕರೆಲ್ಲ ಏನೋ ಸಾಧನೆ ಮಾಡಿ ಕೊನೆಗೆ ಒಂದಲ್ಲ ಒಂದು ರೀತಿಯಲ್ಲಿ ಸಾವನ್ನು ಅಪ್ಪುತ್ತಾರೆ. ಕಥಾ ನಾಯಕರ ಅಕಾಲಿಕ ಅಥವಾ ಆಕಸ್ಮಿಕ ಸಾವು ಜನಮನದ ಮೇಲೆ ಆಳವಾದ ಪರಿಣಾಮ ಉಂಟುಮಾಡುತ್ತದೆ.
ಪ್ರತಿ ವರ್ಷ ನಡೆಯುವ ನಿರ್ದಿಷ್ಟ ಭೂತವೊಂದರ ಆರಾಧನೆಯ ಸಂದರ್ಭದಲ್ಲಿ ನಾಯಕರ ಸಾವಿನ ಘಟನೆ ಪುನರಾವರ್ತನೆಗೊಳ್ಳುತ್ತದೆ. ಈ ಅರ್ಥದಲ್ಲಿ ಹೆಚ್ಚಿನ ಪಾಡ್ದನಗಳು ಸಾವಿನ ಹಾಡುಗಳಾಗಿವೆ. ಈ ಬಗೆಯ ಹಾಡುಗಳಲ್ಲಿ ಭೂಮಿಯ ಹುಟ್ಟಿನ ಮತ್ತು ಜನ ಸಮುದಾಯದ ಹುಟ್ಟಿನ ಬಗೆಗೂ ವಿವರ ಸಿಗುತ್ತವೆ. ಕರ್ನಾಟಕದ ಇತರೆಡೆಗಳಲ್ಲೂ ಇಂಥ ಕಥೆಗಳು ಹೇರಳವಾಗಿ ಸಿಗುತ್ತವೆ. ಶ್ರೀ ಎನ್.ಪಿ. ಶಂಕರನಾರಾಯಣ ರಾವ್ ಅವರು ಅಂಥದ್ದೊಂದು ಸುಂದರ ಕಾವ್ಯವನ್ನು ಬಹಳ ಹಿಂದೆಯೇ ಸಂಗ್ರಹಿಸಿಕೊಟ್ಟಿದ್ದಾರೆ (1994). ಕೊಡಗಿನ ‘ಫಣಿ ಎರವ’ ಎಂಬ ಹೆಸರಿನ ಬುಡಕಟ್ಟಿನ ಜನರು ಸಾವಿಗೆ ಸಂಬಂಧಿಸಿದ ಆಚರಣೆಗಳಲ್ಲಿ ‘ಚತ್ತವಂಡಪಾಟ್’ ಹಾಡುತ್ತಾರೆ-
“ಬಾ, ಬಾ, ಬಲನಾಡಿಗೆ ಬಾ, ಮೊದಲಲ್ಲಿ ಆಕಾಶ ಗಂಡಾಗಿ, ಭೂಮಿ ಹೆಣ್ಣಾಗಿ ಅಂಟಿಕೊಂಡು ಬಿದ್ದಿದೆ. ಇದನ್ನು ನೋಡಿ ನೂರ ನಾಲ್ಕು ದೆಯ್ಯಗಳು, ಬೈನಾಡಪ್ಪ ಏನು ಮಾಡುವುದೆಂದು ಯೋಚಿಸಿದರು. ಚಿನ್ನದ ಹಾರೆ ಗುದ್ದಲಿ ಮಾಡಿಕೊಂಡರು. ಗುಂಪುಗೂಡಿದರು.
ಹಾರೆ ಗುದ್ದಲಿಗಳಿಂದ ಜೋರಾಗಿ ಹೊಡೆದು ಭೂಮಿ ಆಕಾಶಗಳನ್ನು ಬೇರ್ಪಡಿಸಿದರು. ಆಕಾಶ ಅರ್ಧಗಾವುದ ಮೇಲೇರಿ ನಿಂತಿತು. ಭೂಮಿ ನಿಂತಲ್ಲೇ ನಿಂತಿತು. ಎರಡನೇ ಬಾರಿ ಗುದ್ದಿದಾಗ ಆಕಾಶ ಮತ್ತಷ್ಟು ಮೇಲೆ ಹಾರಿ ಹೋಯಿತು. ಭೂಮಿ ಅದುರ ತೊಡಗಿತು. ಆಕಾಶಕ್ಕೆ ಹಾರಿ ಹೋಗದೆ ಇರಲು, ಭೂಮಿಗೆ ಅದುರದೇ ಇರಲು ಈಗ ಅಪ್ಪಣೆ ಮಾಡಬೇಕು, ಕೆಲವು ಕಲ್ಲುಗಳನ್ನು ನೋಡಿದರು, ಅವು ಹುಳುಕು, ಒಡಕು, ಉಮ್ಮರ ಮಿಚ್ಚ ಎಂಬಲ್ಲಿ ಹಾಸುಗಲ್ಲು ಕಂಡರು. ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅಲ್ಲಿಗೆ ನೂರೊಂದು ಕಲ್ಲು ಕುಟಿಗರನ್ನು ಕೂಡಿಸಿದರು, ಹೂವು, ಹಣ್ಣು, ವೀಳ್ಯದೆಲೆ, ಕಾಯಿ, ಅಕ್ಕಿ ಇಟ್ಟು ಪೂಜಿಸಿ ದೀಪ ಬೆಳಗಿಸಿದರು. ಅಯಿಶೇ, ತೋಯಿಶೆ ನೀಡಿದರು. ಸುರಂಗಿ ಹೊಡೆದು ಮದ್ದು ಇಟ್ಟು ಕಲ್ಲು ಸಿಡಿಸಿದರು. ಆಗ ಭೂಮಿ ಆಕಾಶಗಳು ತತ್ತರಿಸುವಂತೆ ಕಲ್ಲುಗಳು ಒಡೆದುಕೊಂಡವು. ಆಕಾಶಕ್ಕೆ ಆರು ಶಾಸನ, ಭೂಮಿಗೆ ಮೂರು ಶಾಸನ ಹೀಗೆ ಒಟ್ಟು ಒಂಬತ್ತು ಶಾಸನ ಕೆತ್ತುವ ಕಾರ್ಯ ಕೈಗೊಂಡರು. ಆಗಲೂ ಪೂಜೆ ಸಲ್ಲಿಸಿ ಹಾರಿ ಹೋಗಬೇಡವೆಂದು ಆಕಾಶಕ್ಕೂ, ಅದುರ ಬೇಡವೆಂದು ಭೂಮಿಗೂ ಅಪ್ಪಣೆ ಮಾಡಿದ ಶಾಸನ ಕೆತ್ತಿದರು. ಆದರೆ ಆಕಾಶ ಹಾರಿಹೋಗುವುದು ನಿಲ್ಲಲಿಲ್ಲ. ಭೂಮಿ ಅದುರುವುದು ನಿಲ್ಲಲಿಲ್ಲ. ಎಲ್ಲರಿಗೂ ಚಿಂತೆಯಾಯಿತು.
ಆಗ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಯೋಚಿಸಿದರು. ಕೋಟೆಯಲ್ಲಿರುವ ಚಾತ್ತಾಂಗೋಟ್ಟು ಮುತ್ತಿಯಲ್ಲಿಗೆ ಹೋದರು. ಅವರು ಅಲ್ಲಿಗೆ ಹೋದಾಗ ಚಾತ್ತಾಂಗೋಟ್ಟು ಮುತ್ತಿ ಮೂರು ಕಡ್ಡಿಗಳನ್ನು ಅನಿಸಿ ನಿಲ್ಲಿಸಿ ಮೂರು ಮೊಟ್ಟೆಗಳನ್ನಿರಿಸಿದ್ದಳು. ಅವಳ ತಲೆ ಅಡಕೆ ಕಾಯಿನಂತಾಗಿ, ಕೈಕಾಲು ಏಡಿಯ ಕೈಕಾಲುಗಳಂತೆ ಸೊಟ್ಟ ಸೊಟ್ಟಾಗಿ ಹೋಗಿ, ಕುಂದಿ ಕೃಶಳಾಗಿ ಬಿದ್ದಿದ್ದಳು. ಅವರು ಅವಳನ್ನು “ಆಕಾಶ ಹಾರುವುದನ್ನು ಭೂಮಿ ಅದುರುವುದನ್ನು ನಿಲ್ಲಿಸಬೇಕು” ಎಂದು ಕೇಳಿಕೊಂಡರು. ಅವಳು ತನ್ನ ಸ್ಥಿತಿ ಹೇಳಿಕೊಂಡು “ನಾನೇ ಹೀಗಿರುವಾಗ, ನಾನು ಹೇಗೆ ಅಷ್ಟು ಬಲವಾದ ಆಕಾಶ ಭೂಮಿಗಳನ್ನು ಹಿಡಿತಕ್ಕೆ ತರಲಿ” ಎಂದು ನಿಟ್ಟುಸಿರು ಬಿಟ್ಟಳು.
ಈ ಮಾತು ಕೇಳಿ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಒಂದು ಕತ್ತಿ ತೆಗೆದುಕೊಂಡರು. ಅಲ್ಲಿದ್ದ ಮೂರು ಮೊಟ್ಟೆಗಳಲ್ಲಿ ಒಂದನ್ನು ಒಡೆದರು. ಕೂಡಲೆ ಹುಲ್ಲಗಾವಲುಗಳು, ಗಿಡಮರಗಳು ಎಲ್ಲ ಕಾಣಿಸತೊಡಗಿದವು. ಎರಡನೆಯ ಮೊಟ್ಟೆ ಒಡೆದಾಗ ನಾಲ್ಕು ಜಾತಿ, ನಲವತ್ತೆಂಟು ಕುಲ, ತೆವಳುವ ಹಾವು, ಹಾರುವ ಹಕ್ಕಿ ಎಲ್ಲ ತೋರಿಬಂದವು. ಕೊನೆಯ ಮೊಟ್ಟೆ ಒಡೆದಾಗ ಚಾತ್ತಾಂಗೋಟ್ಟು ಮುತ್ತಿಯು ಉದಯ ಸೂರ್ಯನಂತೆ ಮೇಲೆದ್ದು ಹಾರುತ್ತಾ ಚಾತ್ತಾಂಗೋಟ್ಟು ಶಿಖರದಲ್ಲಿ ಕುಳಿತು ನಾಲ್ಕು ದಿಕ್ಕಿಗೂ ನಾಲ್ಕು ಬಾರಿ ಕುಟುಕಿ, ನಾಲ್ಕು ಸುತ್ತು ಕುಣಿದು ಬಂದಳು. ತಕ್ಷಣ ಆಕಾಶದ ಹಾರಾಟ ನಿಂತಿತು. ಭೂಮಿಯು ಅದುರುವುದು ಕೊನೆಯಾಯಿತು.. ಅನಂತರ ಭೂಮಿಗೆ ಒಂದು ಮೊಲೆ ಒಂದು ಕಣ್ಣು ಇರಿಸಿದರು. ಹಾರಾಟ, ಅದುರಾಟ ನಿಂತೇ ಹೋಯಿತು.
ಎಂಥ ಅದ್ಭುತ ಕತೆಯಿದು! ತುಳು ಭಾಷೆಯಲ್ಲಿ ದೊರೆಯುವ ಕೋಟಿ-ಚೆನ್ನಯ ಪಾಡ್ದನದಲ್ಲಿಯೂ ಹಕ್ಕಿಗಳೆರಡು ಮೊಟ್ಟೆಗಳನ್ನು ರೆಕ್ಕೆಯಮೇಲಿರಿಸಿ ಸಾಗಿಸುವ ಸುಂದರ ವಿವರ ಸಿಗುತ್ತದೆ. ಹಕ್ಕಿ, ಆಕಾಶ ಮತ್ತು ಭೂಮಿ ಜನಪದರ ಕುತೂಹಲವನ್ನು ಮತ್ತೆ ಮತ್ತೆ ಕೆಣಕುತ್ತಾ ಬಂದಿದೆ. ಪ್ರಾಣದ ಹಕ್ಕಿ , ಆಕಾಶದ ಬದಲಾಗುವ ಬಣ್ಣ, ಸೂರ್ಯ-ಚಂದ್ರರು ಮತ್ತು ಅದರ ನಿರಂತರತೆ ಜನರ ಬದುಕು ಮತ್ತು ಚಿಂತನೆಯ ಮೇಲೆ ಗಾಢ ಪರಿಣಾಮ ಬೀರಿವೆ. ಭೂಮಿಯಾದರೂ ಅಷ್ಟೆ. ಅದು ಅನೇಕ ಬಗೆಯ ಪುರಾಣಗಳ, ವಿಧಿಯಾಚರಣೆಗಳ ಮತ್ತು ಕಲಾಕೃತಿಗಳ ಸೃಷ್ಟಿಗೆ ಕಾರಣವಾಗಿದೆ. ‘ಭೂಮಿ’ ಎಂಬ ಹೆಣ್ಣು ಮುಟ್ಟಾದಳೆಂದು ಭಾವಿಸಿಕೊಂಡು ಆಕೆಗೆ ತಿಂಡಿ ಕೊಟ್ಟು, ಎಣ್ಣೆ ಕೊಟ್ಟು ಸ್ನಾನ ಮಾಡಿಸಿ, ಮೂರು ದಿನ ‘ಮೈಲಿಗೆ’ ಆಚರಿಸುವ ಸಂಪ್ರದಾಯವು ಕರಾವಳಿ ಕರ್ನಾಟಕದಲ್ಲಿ ‘ಕೆಡ್ಡಾಸ’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಕೊಂತಿಪೂಜೆ, ಗೌರಿಪೂಜೆ, ಬಲೀಂದ್ರಪೂಜೆ ಮೊದಲಾದವು ಮೂಲತಃ ಕೃಷಿ ಭೂಮಿಯ ಆರಾಧನಾ ಕ್ರಮಗಳೇ ಆಗಿವೆ.
ಸತ್ತ ಅನಂತರ ಭೌತಿಕ ದೇಹವನ್ನು ತನ್ನೊಳಗೆ ಸೆಳೆದುಕೊಳ್ಳುವ ಭೂಮಿಯ ಬಗೆಗೆ ಆಳದಲ್ಲಿ ಒಂದು ಬಗೆಯ ಭಯವೂ ಈ ಬಗೆಯ ಕಥೆಗಳಲ್ಲಿ ಸೇರಿಕೊಂಡಂತಿದೆ. ನಮ್ಮ ಅನೇಕ ಜನಪದ ಮಹಾಕಾವ್ಯಗಳಲ್ಲಿ, ಕತೆಗಳಲ್ಲಿ ಭೂಮಿಯ ಇಂಥ ಭೀಭತ್ಸ ಮುಖದ ಚಿತ್ರವೂ ಇದೆ. ‘ಗುಳಿಗ’ ಎಂಬ ಹೆಸರಿನ ಭೂತಕ್ಕೆ ಸಂಬಂಧಿಸಿದ ಪಾಡ್ದನವೊಂದರಲ್ಲಿ ತಾಯಿಯ ಬಲದ ಮೊಲೆ ಒಡೆದು ಭೂಮಿಗೆ ಬೀಳುವ ಗುಳಿಗನು ಭೂಮಿಯ ಸ್ಪರ್ಶ ಆಗುತ್ತಲೇ ದೈತ್ಯಾಕಾರವಾಗಿ ಬೆಳದು, ತಾಯಿಯ ಎಡದ ಮೊಲೆಯನ್ನು ತಿನ್ನುವ ಭಯಾನಕ ಚಿತ್ರವಿದೆ.
ಮಾನವನು ಒಬ್ಬ ಅಥವಾ ಒಬ್ಬಳನ್ನು ಕಳೆದುಕೊಂಡಾಗ ಉಂಟಾಗುವ ಶೂನ್ಯವನ್ನು ತುಂಬಿಕೊಳ್ಳಲು ಕಟ್ಟಿಕೊಂಡ ಕಥೆಗಳನ್ನು ಹೇಳುವ ಹಾಡುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅಭ್ಯಾಸ ಮಾಡಿದರೆ ತುಂಬ ಪ್ರಯೋಜನವಿದೆ. ನಮ್ಮ ಹುಡುಗರು ಈ ಕುರಿತು ಸಂಶೋಧನೆ ಮಾಡಲಿ. ನಮ್ಮ ಕವಿಗಳು ಈ ಬಗೆಯ ಕಥನಗಳಿಗೆ ಕಿವಿಗೊಟ್ಟು ತಮ್ಮ ಕವಿತೆಗಳಿಗೆ ಹೊಸ ಶಕ್ತಿ ತಂದುಕೊಳ್ಳಲಿ
–ಪುರುಶೋತ್ತಮ ಬಿಳಿಮಲೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243