ರಾಜಕೀಯ

ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆ : ಮೇ 23ರಂದು ಫಲಿತಾಂಶ

Published

on

ಸುದ್ದಿದಿನ,ನವದೆಹಲಿ: ಮುಂಬರುವ 17ನೇ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದೆ. ವಿವಿಧ ಹಂತಗಳಲ್ಲಿ ದೇಶಾದ್ಯಂತ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ದಿನಾಂಕಗಳನ್ನು ಪ್ರಕಟಿಸಿದೆ. ಏಪ್ರಿಲ್ 11ರಿಂದ 7 ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. 22 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರಾ, ದಿನಾಂಕಗಳನ್ನ ಘೋಷಿಸಿ, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಹಾಲಿ ಲೋಕಸಭೆಯ ಅವಧಿ ಜೂನ್ 3ರಂದು ಕೊನೆಗೊಳ್ಳಲಿದೆ.

ಲೋಕಸಭೆ ಚುನಾವಣೆ ಜೊತೆ ಜೊತೆಗೆ ಜಮ್ಮು ಕಾಶ್ಮೀರ, ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿಯೂ ವಿಧಾನಸಭಾ ಚುನಾವಣೆಗಳನ್ನು ಅವಧಿಗೆ ಮುನ್ನ ನಡೆಸುವುದಾಗಿ ಪ್ರಕಟಿಸಿದೆ.

2014ರಲ್ಲಿ 16ನೇ ಲೋಕಸಭೆ ಚುನಾವಣೆ ದಿನಾಂಕ ಮಾರ್ಚ್ 5ರಂದು ಪ್ರಕಟ ಮಾಡಲಾಗಿತ್ತು. ಒಟ್ಟು 9 ಹಂತಗಳಲ್ಲಿ ಏಪ್ರಿಲ್ 7 ರಿಂದ ಮೇ 12ರವರೆಗೆ ಚುನಾವಣೆ ನಡೆಸಲಾಗಿತ್ತು.

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯಲಿವೆ – ಏಪ್ರಿಲ್​ 18 (ಗುರುವಾರ) ಮತ್ತು ಏಪ್ರಿಲ್​ 23 (ಮಂಗಳವಾರ) ಚುನಾವಣಾ ದಿನಾಂಕಗಳು.

ವಿಶ್ವದಲ್ಲಿ ಭಾರತದಲ್ಲಿಯೇ ಅತ್ಯಧಿಕ ಮತದಾನ..!

ಪ್ರಸಕ್ತ 2019ನೇ ಸಾಲಿನಲ್ಲಿ ಇಡೀ ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 50 ರಾಷ್ಟ್ರಗಳಲ್ಲಿ ಸುಮಾರು 200 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಾರೆ ಎನ್ನಲಾಗಿದೆ.

ಭಾರತದಲ್ಲಿ 90 ಕೋಟಿ ಮತದಾರರು, ಇಂಡೋನೇಷ್ಯಾದಲ್ಲಿ 19 ಕೋಟಿ ಮತದಾರರು ಮತ್ತು ನೈಜೀರಿಯಾದಲ್ಲಿ 9 ಕೋಟಿ ಮತದಾರರು ತಮ್ಮ ನಾಯಕರನ್ನು ಚುನಾಯಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version