ದಿನದ ಸುದ್ದಿ
ದೇವದಾಸಿ ಮಹಿಳೆಯರಿಗೆ ವಿವಿಧ ಯೋಜನೆಯಡಿ ಸಹಾಯಧನ
ಲಾಟರಿ ಮೂಲಕ ಅರ್ಹ ಫಲಾನುಭವಿಗಳ ಆಯ್ಕೆ
ಸುದ್ದಿದಿನ,ಬಾಗಲಕೋಟೆ: ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ದೇವದಾಸಿ ಪುನರ್ವಸತಿ ಯೋಜನೆಯಡಿ ದೇವದಾಸಿ ಮಹಿಳೆಯರಿಗೆ ವಿವಿಧ ಆದಾಯ ಉತ್ಪನ್ನಕರ ಚಟುವಟಿಕೆ ಕೈಗೊಳ್ಳಲು ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಕಿರಾಣಿ ಅಂಗಡಿ, ಹೈನುಗಾರಿಕೆ, ಪಾನ್‍ಶಾಪ್ ಸೇರಿದಂತೆ ಇತರೆ ಆದಾಯ ಉತ್ಪನ್ನಕರ ಚಟುವಟಿಕೆಗಳನ್ನು ಕೈಗೊಳ್ಳಲು 25 ಸಾವಿರ ಸಹಾಯಧನ ಹಾಗೂ 25 ಸಾವಿರ ಸಾಲ ರೂಪದಲ್ಲಿ ಸೇರಿದಂತೆ ಒಟ್ಟು 50 ಸಾವಿರ ರೂ.ಗಳ ನೀಡಲಾಗುತ್ತಿದೆ.
ಈ ಯೋಜನೆಯಡಿ ವಾರ್ಷಿಕ ಗುರಿ 141 ಇದ್ದು, ಒಟ್ಟು 190 ಅರ್ಜಿಗಳು ಸ್ವೀಕೃತಗೊಂಡಿದ್ದವು. ಅರ್ಹ ಫಲಾನುಭವಿಗಳ ಆಯ್ಕೆಯನ್ನು ಫಲಾನುಭವಿಗಳ ಸಮ್ಮುಖದಲ್ಲಿ ತಾಲೂಕಾವಾರು ಪ್ರತ್ಯೇಕ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಜಮಖಂಡಿ ತಾಲೂಕಿನಲ್ಲಿ 44, ಮುಧೋಳ 46, ಬೀಳಗಿ 15, ಬಾಗಲಕೋಟೆ 16, ಬಾದಾಮಿ 10 ಹಾಗೂ ಹುನಗುಂದ ತಾಲೂಕಿನಲ್ಲಿ 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ಬಳಕೆಯಾಗದ ಅನುದಾನದಲ್ಲಿ ಒಟ್ಟು 59 ಗುರಿ ನಿಗದಿಪಡಿಸಲಾಗಿದ್ದು, ಅದಕ್ಕಾಗಿ ಒಟ್ಟು 80 ಅರ್ಜಿಗಳು ಸ್ವೀಕೃತಗೊಂಡಿದ್ದವು. ಅವುಗಳನ್ನು ಸಹ ಲಾಟರಿ ಮೂಲಕ ತಾಲೂಕಾವಾರು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಪುನರ್ ವಸತಿ ಯೋಜನೆಯಡಿ 4 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎ.ಕೆ.ಬಸಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ದೇವದಾಸಿ ಪುನರ್ವಸತಿ ಅಧಿಕಾರಿ ಕೆ.ಕೆ.ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ ಚವ್ಹಾಣ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243