ದಿನದ ಸುದ್ದಿ

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿ ದೇವರಾಜು ಅರಸು ಅವರದ್ದು : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು : ಸಾಮಾಜಿಕ ಬದಲಾವಣೆ ಮೂಲಕ ಜನಪರ ಆಡಳಿತಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಭದ್ರ ಬುನಾದಿ ಹಾಕಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಿದ್ದ ದಿವಂಗತ ದೇವರಾಜ ಅರಸು ಅವರ 42ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾವನೂರು ಆಯೋಗ ರಚನೆ ಮೂಲಕ ಹಿಂದುಳಿದ ವರ್ಗಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟ ದಿಟ್ಟನಾಯಕ ಎಂದು ಹೇಳಿದರು.

ಅನೇಕ ಬದಲಾವಣೆಗಳ ಮೂಲಕ ಆಡಳಿತಕ್ಕೆ ಹೊಸ ದಿಕ್ಕು ತೋರಿದರು. ಭೂಸುಧಾರಣಾ ಕಾಯ್ದೆಯನ್ನು ಸಮಪರ್ಕವಾಗಿ ಜಾರಿಗೆ ತಂದು ಭೂರಹಿತ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದಾರೆ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಅವರ ಪುಣ್ಯಸ್ಮರಣೆಯನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರ ರಾಜೀನಾಮೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ವಿಶೇಷ ತನಿಖಾ ತಂಡ ಇದರ ಬಗ್ಗೆ ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಆರ್. ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ನಾಡಿನ ಅನೇಕ ಗಣ್ಯರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದು ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version