ದಿನದ ಸುದ್ದಿ
ಗಡಿ ಪ್ರದೇಶಗಳ ಅಭಿವೃದ್ಧಿ ಸರ್ಕಾರದ ಸಮಗ್ರ ರಕ್ಷಣಾ ಕಾರ್ಯತಂತ್ರದ ಪ್ರಮುಖ ಭಾಗ; ದೇಶದ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲವರ್ಧನೆ : ರಾಜನಾಥ್ ಸಿಂಗ್
ಸುದ್ದಿದಿನ ಡೆಸ್ಕ್ : ಗಡಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದು ಸರ್ಕಾರದ ಸಮಗ್ರ ರಕ್ಷಣಾ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಇದು ದೇಶದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಸಹಕಾರಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ಏರ್ಪಡಿಸಿದ್ದ ಗಡಿ ರಸ್ತೆಗಳ ಸಂಸ್ಥೆ – ಬಿ.ಆರ್.ಒ. ದ 63ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸಚಿವರು, ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರ ಜೀವನ ಮಟ್ಟ ಸಕಾರಾತ್ಮಕ ಬದಲಾವಣೆಗೆ ಇದು ನೆರವಾಗಲಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಉತ್ತರ ವಲಯದಲ್ಲಿ ಚೈನಾದ ಅಸ್ತಿತ್ವ ಹೆಚ್ಚಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಬಿ.ಆರ್.ಒ ಸಹ ತನ್ನ ಕಾರ್ಯ ಯೋಜನೆಯನ್ನು ಮುಂದುವರೆಸಬೇಕು. ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ತನ್ನ ಸಾಮರ್ಥ್ಯ ವೃದ್ಧಿಸಿಕೊಳಲು ಒತ್ತು ನೀಡಬೇಕೆಂದು ಸಲಹೆ ಮಾಡಿದರು. ಬದಲಾದ ಕಾಲ ಘಟ್ಟಕ್ಕೆ ಅನುಗುಣವಾಗಿ ರಕ್ಷಣಾ ಕಾರ್ಯತಂತ್ರವನ್ನು ಸಜ್ಜುಗೊಳಿಸಬೇಕು.
ಅದರ ಒಂದು ಭಾಗವಾಗಿ ಗಡಿ ಪ್ರದೇಶದ ಅಭಿವೃದ್ಧಿಯನ್ನು ನಿರಂತರವಾಗಿ ಮುಂದುವರೆಸಲಾಗುತ್ತಿದೆ. ಬಿ.ಆರ್.ಒ. ಸಹ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು, ಹಾಗೂ ಗಡಿ ಪ್ರದೇಶಗಳಲ್ಲಿ ಕ್ಷಿಪ್ರಗತಿಯಲ್ಲಿ ಮೂಲಸೌಕರ್ಯವನ್ನು ಬಲಪಡಿಸಬೇಕೆಂದು ರಾಜನಾಥ್ ಸಿಂಗ್ ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243