ದಿನದ ಸುದ್ದಿ
ಕ್ಯಾನ್ಸರ್ ಪೀಡಿತನಿಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿ
ಸುದ್ದಿದಿನ,ಧಾರವಾಡ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಅವಧಿಯಲ್ಲಿ ಬಿಡುವಿಲ್ಲದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ದೀಪಾಚೋಳನ್ ಹಾಗೂ ಅವರ ಸಿಬ್ಬಂದಿ ತಮ್ಮ ಕಾರ್ಯದೊತ್ತಡದ ಮಧ್ಯೆಯೂ ಮಾನವೀಯತೆಯಿಂದ ವೃದ್ಧೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಬೆಂಗಳೂರಿನಿಂದ ಔಷಧಿ ತರಿಸಿ ಕೊಟ್ಟಿದ್ದಾರೆ.
ನಗರದ ಚರಂತಿಮಠ ಗಾರ್ಡನ್ನಿನ ಜೈ ಜಿನೇಂದ್ರ ಕಾಲನಿಯ ನಿವಾಸಿ ಶಕುಂತಲಾ ಎಂಬ ವಯೋವೃದ್ಧ ಮಹಿಳೆಯೊಬ್ಬರು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಕ್ಯಾನ್ಸರ್ ಪೀಡಿತನಾಗಿರುವ ತನ್ನ 27 ವರ್ಷದ ಮೊಮ್ಮಗ ಸುನೀಲ ಅವಾರಿಗೆ ಔಷಧಿ ತೆಗೆದುಕೊಂಡು ಬರಲು ವಾಹನ ಪಾಸ್ ಪಡೆಯಲು ಬಂದಾಗ, ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ತನ್ನ ಸಮಸ್ಯೆಗಳನ್ನು ನಿವೇದಿಸಿಕೊಂಡಿದ್ದರು. ಆಗ ಜಿಲ್ಲಾಧಿಕಾರಿಗಳು ಪಾಸ್ ವಿತರಣೆ ವಿಭಾಗದ ಸಿಬ್ಬಂದಿಯನ್ನು ಕರೆದು ಈ ಅಜ್ಜಿಗೆ ಸಹಾಯ ಮಾಡಲು ಸೂಚಿಸಿದರು.
ಕ್ಯಾನ್ಸರ್ ಪೀಡಿತನಾಗಿರುವ ಮೊಮ್ಮಗನಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 30 ಸಾವಿರ ರೂ.ಮೌಲ್ಯದ ಔಷಧಿ,ಮಾತ್ರೆಗಳು ಬೇಕಾಗುತ್ತದೆ.ಕಿದ್ವಾಯಿಯಲ್ಲಿ ಈ ಮಾತ್ರೆಗಳು ಅಲ್ಲಿನ ವೈದ್ಯರಾದ ಡಾ.ಶ್ಯಾಮಸುಂದರ ಅವರ ಸಹಾಯದಿಂದ ತಮಗೆ ಉಚಿತವಾಗಿ ಸಿಗುತ್ತಿವೆ.ಪ್ರತಿ ತಿಂಗಳು ಆ ವೈದ್ಯರೇ ಬಸ್ ಚಾರ್ಜ್ ಸಹ ನೀಡಿ ಉಪಕರಿಸುತ್ತಿರುವುದನ್ಮು ವಿವರಿಸಿದ್ದಾಳೆ.
ಈಗ ತನಗೆ ಬಾಡಿಗೆ ಕಾರು ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಔಷಧಿ ತರುವ ಸಾಮರ್ಥ್ಯವೂ ಇಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ ಹೇಳಿದ್ದಾಳೆ. ಮಾನವೀಯತೆಯಿಂದ ಈ ಪ್ರಕರಣದಲ್ಲಿ ಸಹಾಯ ಮಾಡಲು ನಿರ್ಧರಿಸಿದ ಸಿಬ್ಬಂದಿ, ಅನಿವಾರ್ಯ ಕಾರಣದಿಂದ ಬೆಂಗಳೂರಿಗೆ ಹೋಗಲು ಪಾಸ್ ಕೇಳಲು ಬಂದ ಜಿಲ್ಲಾ ಖಜಾನೆಯ ಸಿಬ್ಬಂದಿಯೊಬ್ಬರ ಮೂಲಕ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಔಷಧಿ ತೋರಿಸಿಕೊಟ್ಟಿದ್ದಾರೆ.
ಉಚಿತ ಪರೀಕ್ಷೆ
ಔಷಧಿ ಬಂದ ನಂತರ ಅದನ್ನು ನೇರವಾಗಿ ರೋಗಿಗೆ ಕೊಡುವ ಮೊದಲು ರಕ್ತ ಪರೀಕ್ಷೆಯೊಂದು ಕಡ್ಡಾಯವಾಗಿತ್ತು. ಆಗ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಡಾ.ಉಮೇಶ ಹಳ್ಳಿಕೇರಿಯವರನ್ನು ಸಂಪರ್ಕಿಸಿದಾಗ ಅವರೂ ಕೂಡ ಉಚಿತವಾಗಿ ಪರೀಕ್ಷೆ ಮಾಡಿ ವರದಿ ನೀಡಿದ ನಂತರ , ಆ ವರದಿಯನ್ನು ಬೆಂಗಳೂರಿನ ತಜ್ಞ ವೈದ್ಯರಾದ ಡಾ.ಶಾಮಸುಂದರ್ ಅವರಿಗೆ ವಾಟ್ಸಪ್ ಮೂಲಕ ಕಳುಹಿಸಿ, ಅವರ ಸಲಹೆ ಪಡೆದ ನಂತರ ರೋಗಿಗೆ ಔಷಧಿ ತೆಗೆದುಕೊಳ್ಳಲು ಸಾಧ್ಯವಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅವರ ಕಚೇರಿಯ ಪಾಸ್ ವಿತರಣಾ ವಿಭಾಗದ ನೋಡಲ್ ಅಧಿಕಾರಿ ದೀಪಕ ಮಡಿವಾಳರ, ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ, ಕೆ.ಎ.ಜಂಗೂರ, ಧರಣೇಂದ್ರ ಕಸಮಾಳಗಿ, ಇಸ್ಮಾಯಿಲ್ ಮಳಲಿ, ಜಿ.ಬಿ.ಪಾಟೀಲ, ಅರವಿಂದ, ಸುನೀಲ ,ಅಶೋಕ ನಿಂಗೋಳಿ ಮತ್ತಿತರರು ಮುತುವರ್ಜಿ ವಹಿಸಿ ತನ್ನ ಮೊಮ್ಮಗನ ಚಿಕಿತ್ಸೆಗೆ ನೆರವಾಗಿದ್ದನ್ನು ಇಂದು ವಯೋವೃದ್ಧ ಅಜ್ಜಿ ಶಕುಂತಲಾ ಸ್ವತಃ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನದುಂಬಿ ಸ್ಮರಿಸಿ,ಕೃತಜ್ಞತೆ ಸಲ್ಲಿಸಿದಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243