ದಿನದ ಸುದ್ದಿ
ಸಾಹಿತ್ಯ ಸಮ್ಮೇಳನ | ಡಾ.ಕಂಬಾರ ವಿರಚಿತ ‘ಶಿವರಾತ್ರಿ’ ನಾಟಕ ಯಶಸ್ವಿ ಪ್ರಯೋಗ
ಸುದ್ದಿದಿನ,ಧಾರವಾಡ,ರಂಗಾಯಣ ನಾಟಕ ವೇದಿಕೆ :84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ರಚಿತ ಶಿವರಾತ್ರಿ ನಾಟಕವನ್ನು, ಧಾರವಾಡದ ರಂಗಾಯಣ ಬಯಲು ರಂಗ ಮಂದಿರದಲ್ಲಿ ಕೊಪ್ಪಳದ ಶಿಕ್ಷಕರ ಕಲಾ ಸಂಘದ ಕಲಾವಿದರಿಂದ ಪ್ರದರ್ಶನಗೊಂಡು ರಂಗಾಸಕ್ತರ ಮನತಣಿಸುವಲ್ಲಿ ಯಶಸ್ವಿಯಾಯಿತು.
ದೇಶಿ ಭಾಷೆಯ ಸೊಗಡುಳ್ಳ ಈ ನಾಟಕದಲ್ಲಿ ಕಲ್ಯಾಣ ಕ್ರಾಂತಿಯ ವಿವಿಧ ಆಯಾಮಗಳನ್ನು ರಂಗನಟರು ಮನೋಜ್ಙವಾಗಿ ನಿರೂಪಿಸಿದರು. ಬಿಜ್ಜಳ ಮತ್ತು ಬಸವಣ್ಣನ ನಡುವೆ ಮನಸ್ತಾಪ ಉಂಟಾಗಿ ಸೂಳೆ ಸಾವಂತ್ರಿ ಮನೆಯಲ್ಲಿ ಚರ್ಚೆ ಸಾಗುತ್ತ, ಸೂಳೆ ಸಾವಂತ್ರಿಗೆ ಬಸವಣ್ಣನೆಂದರೆ ಭಕ್ತಿ. ಸೂಳೆ ಸಾವಂತ್ರಿಯು ತನ್ನ ವೇಶ್ಯೆ ಕಾಯಕದಿಂದ ಬಂದ ಹಣದಿಂದ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾಳೆ. ಇದನ್ನು ಬಸವಣ್ಣನವರು ಮೆಚ್ಚಿ ಆಕೆಯನ್ನು ತಾಯಿ ಎಂದು ಕರೆದು ನಮಸ್ಕರಿಸುತ್ತಾರೆ. ಕೊನೆಗೆ ಬಿಜ್ಜಳನ ಆಜ್ಙೆಯಂತೆ ಬಸವಣ್ಣನವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಕೂಡಲಸಂಗಮಕ್ಕೆ ಹೋಗುತ್ತಾರೆ. ಬಿಜ್ಜಳನು ಪಾಶ್ಚಾತಾಪದಿಂದ ಬಳಲುತ್ತ, ವೈರಿಗಳಿಂದ ಹತ್ಯೆಗೊಳಗಾಗುತ್ತಾನೆ.
ಬಸವಣ್ಣನವರ ಪಾತ್ರದಲ್ಲಿ ರಾಮಣ್ಣ ಶ್ಯಾವಿ, ಬಿಜ್ಜಳನ ಪಾತ್ರದಲ್ಲಿ ಮಂಜುನಾಥ ಪೂಜಾರ, ಜಗದೇವವಾಗಿ ನಾಗರಾಜನಾಯಕ ಡಿ.ಡೊಳ್ಳಿನ, ಹರಿಹರನಾಗಿ ಪ್ರಾಣೇಶ ಪೂಜಾರ, ಮಲ್ಲಿಬೊಮ್ಮಣ್ಣನಾಗಿ ಗುರುರಾಜ, ಸೂಳೆ ಸಾವಂತ್ರಿಯ ಪಾತ್ರದಲ್ಲಿ ಜಯಶ್ರೀ ಸಿಂಧನೂರ, ಹುಚ್ಚಿಯಾಗಿ ವಿಜಯಲಕ್ಷ್ಮೀ ಕೂಟಗಿ, ನಟಿಯಾಗಿ ಸುಮಾ ವೈಶಂಪಾಯನ, ಮುಗ್ಧ ಸಂಗಯ್ಯನಾಗಿ ದಯಾನಂದ ಸಾಗರ, ಕಲ್ಲಪ್ಪನ ಪಾತ್ರದಲ್ಲಿ ಮುಕುಂದ, ಮುದುಕಪ್ಪನಾಗಿ ಯೋಗಾನರಸಿಂಹ, ದಾಮೋದರನಾಗಿ ರಮೇಶ ಪೂಜಾರ, ಕಾಶವ್ವನ ಪಾತ್ರದಲ್ಲಿ ಅಂಜನಾದೇವಿ, ಕಾಮಾಕ್ಷಿಯಾಗಿ ಜ್ಯೋತಿ, ನಂದೀಶ ಮತ್ತು ಅಳ್ಳೂರಪ್ಪ ಕೋಟೆ ಅವರು ರಾಜಭಟರ ಪಾತ್ರವರ್ಗದಲ್ಲಿ ಅಭಿನಯಿಸಿ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.
ಫಕೀರಪ್ಪ ಗುಳದಳ್ಳಿ ಅವರು ಸಂಗೀತ ಸಂಯೋಜನೆ ಮಾಡಿದರು. ಉಪೇಂದ್ರ ಅವರು ನಿರ್ದೇಶಿಸಿದರು. ವಸ್ತ್ರ ವಿನ್ಯಾಸ, ಪ್ರಸಾದನವನ್ನು ರಮೇಶ ಬಾನವಳ್ಳಿ ನೆರವೇರಿಸಿದರು.