ನೆಲದನಿ
ನುಡಿಯ ಒಡಲು 13 | ಒಳನುಡಿ : ನುಡಿಯೊಳಗಿನ ನುಡಿ ಉಪನುಡಿಯಲ್ಲ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು ಶಿವಮೊಗ್ಗ
ಭಾಗ-01
ನುಡಿಯರಿಮೆಯ ಯಾವುದೇ ತರಬೇತಿ ಇಲ್ಲದೆಯೂ ಎಷ್ಟೋ ಮಂದಿ ‘ಒಳನುಡಿ’ (ಉಪಭಾಷೆ)ಗಳನ್ನು ಗುರುತಿಸಬಲ್ಲರು. ಪ್ರತಿ ನುಡಿಸಮುದಾಯದ ಜನರಾಡುವ ಮಾತುಗಳಲ್ಲಿಯೇ ಆಯಾ ನುಡಿಯೊಳಗಿನ ವ್ಯತ್ಯಾಸಗಳು ಎಂತಹವು ಎಂಬುದು ಎದ್ದುಕಾಣುವುದಕ್ಕೆ ಮುಖ್ಯ ಕಾರಣವೇ ಇದು.
ಆದರೆ ಈ ವ್ಯತ್ಯಾಸಗಳು ಯಾವ ಬಗೆಯವು? ಅವುಗಳ ರಾಚನಿಕ ಸ್ವರೂಪ ಎಂತಹದು? ನುಡಿಯ ಯಾವ ಯಾವ ನೆಲೆಯಲ್ಲಿ ಇಂತಹ ವ್ಯತ್ಯಾಸಗಳನ್ನು ಗುರುತಿಸಬಹುದು? ಈ ಎಲ್ಲ ವ್ಯತ್ಯಾಸಗಳನ್ನು ಬಿಡಿಸಿ ನೋಡುವ ಮಾನದಂಡಗಳಾವವು? ಎಂಬೆಲ್ಲ ಕೇಳ್ವಿಗಳಿಗೆ ಉತ್ತರಿಸಲು ಒಂದು ಮಟ್ಟದ ನುಡಿಯರಿಮೆಯ ತರಬೇತಿ ಅತ್ಯಂತ ಜರೂರಿನದು ಎಂಬ ಸಂಗತಿಯನ್ನು ನಾವು ಮನಗಾಣಬೇಕಿದೆ.
ದಿಟ ತಮ್ಮ ಮಾತುಗಳಿಗೆ ಹೊರತಾದ ಬೇರೊಂದು ಬಗೆಯ ಉಚ್ಚಾರಣೆಯನ್ನು ಕೇಳಿದೊಡನೆ, ಸಾಮನ್ಯ ನುಡಿಯಿಗರಲ್ಲಿ ಪ್ರಚೋದನೆ ಉಂಟಾಗುತ್ತದೆ. ಈ ಪ್ರಚೋದನೆ ಇಂತಹ ಬೇರೆ ಬಗೆಯ ಮಾತುಗಳ ಗುಣಗಳನ್ನು ಗುರುತಿಸುವಂತೆ ಒತ್ತಾಯಿಸುತ್ತದೆ. ಇಂತಹ ಒತ್ತಾಯಕ್ಕೆ ರಾಜಕೀಯ ಕಾರಣಗಳು ಇರುತ್ತವೆ. ಪರಿಣಾಮವಾಗಿ ಆಡುನುಡಿ ಮತ್ತು ಬರಹನುಡಿಗಳು ಎಂಬಿತ್ಯಾದಿ ತಪ್ಪಿರಿವಿನ ಬಗೆಗಳು ಹುಟ್ಟಿಕೊಳ್ಳುತ್ತವೆ.
ನುಡಿಯರಿಮೆಯ ನಿಲುವುಗಳಿಗೆ ಹೊರತಾದ, ಸಾಮಾಜಿಕ, ಸಾಂಸ್ಕೃತಿಕ ನಿಲುವುಗಳೇ ಇಂತಹ ವಿಂಗಡನೆಗೆ ಕಾರಣವಾಗುತ್ತವೆ. ಹಾಗೂ ಇದರ ಪರಿಣಾಮಗಳು ಮೇಲು-ಕೀಳು ಎಂಬ ಡೈಕಾಟಮಿಗಳ ಹುಟ್ಟಿಗೆ ಕಾರಣವಾಗುತ್ತವೆ. ಹಾಗಾಗಿ ನುಡಿ ಮತ್ತು ಒಳನುಡಿಗಳು ಎಂಬ ಬಗೆಗಳು ನೆಲೆಗೊಳ್ಳುತ್ತವೆ. ಅಷ್ಟೆಯಲ್ಲದೇ ಅವುಗಳ ನಡುವೆ ಸಾಮಾಜಿಕ ಅಸಮಾನ ನೆಲೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಅಸಮಾನ ನೆಲೆಗಳು ನಿರಂತರವಾಗಿ ನೆಲೆನಿಲ್ಲಲು ಅಧಿಕಾರ ಸಂಬಂಧಗಳೂ ಕೈ ಜೋಡಿಸುತ್ತವೆ ಎಂಬುದನ್ನು ಗಮನಿಸಲೆಬೇಕಾದ ಸಂಗತಿ. ಪರಿಣಾಮವಾಗಿ ಕೆಲವು ಪ್ರತಿಷ್ಠಿತ ಒಳನುಡಿಗಳಾಗಿ ಮತ್ತೆ ಕೆಲವು ಅಪ್ರತಿಷ್ಠಿತ ಒಳನುಡಿಗಳಾಗಿ ರೂಪುಗೊಳ್ಳುತ್ತವೆ.
ಒಳನುಡಿಗಳನ್ನು ನುಡಿಯರಿಮೆಯ ನೆರವಿನಿಂದ ಓದುವುದರಿಂದ ಕೊನೆಪಕ್ಷ ಎರಡು ಬಗೆಯ ತಿಳುವಳಿಕೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆ ಎರಡೂ ತಿಳಿವುಗಳಾವವು ಎಂದರೆ;
1. ಕಾಲದಿಂದ ಕಾಲಕ್ಕೆ ನುಡಿ ಬದಲಾವಣೆ ಹೇಗೆ ಆಗುತ್ತದೆ ಹಾಗೂ ಅಂತಹ ಬದಲಾವಣೆಗಳು ಹೇಗಿರುತ್ತವೆ ಎಂಬ ಸಂಗತಿಗಳು ಪರಿಚಯವಾಗುತ್ತವೆ.
2. ನುಡಿ ಬಳೆಕೆಗೂ ಮತ್ತು ಸಾಮಾಜಿಕ ಅನನ್ಯತೆಗಳ ನಡುವೆ ಯಾವ ಬಗೆಯ ಅಂತರ್ಸಂಬಂಧವಿರುತ್ತದೆ ಎಂಬ ದಿಟದ ನೆಲೆಗಳು ಇಂತಹ ಓದಿನಿಂದ ತಿಳಿಯುತ್ತವೆ.
ಈ ಎರಡೇ ಸಂಗತಿಗಳು ಮಾತ್ರವಲ್ಲ ಇನ್ನೂ ಹಲವು ಬಗೆಯ ತಿಳಿವಳಿಕೆಗಳು ಈ ಒಳನುಡಿ ಓದಿನಿಂದ ಸಿಗುತ್ತವೆ; ಒಳನುಡಿಗಳ ಸುತ್ತ ಸುತ್ತಿಕೊಂಡಿರುವ ತಿಳಿವಳಿಕೆಗಳು ಹೇಗೆ ತಪ್ಪರಿವಿನಿಂದ ಕೂಡಿರುತ್ತವೆ, ಮತ್ತು ಇಂತಹ ನುಡಿಬಗೆಗಳು ಸಾಮಾಜಿಕ ಅಸಹನೆಯ ರೂಪಕಗಳಾಗಿ ಹೇಗೆ ನೆಲೆನಿಲ್ಲುತ್ತವೆ ಮುಂತಾದ ಸಂಗತಿಗಳು ಇಲ್ಲಿ ನಿಚ್ಚಳಗೊಳ್ಳುತ್ತವೆ. ನುಡಿ ಬಗೆಗಳು ಇಲ್ಲವೇ ಸಾಮಾಜಿಕ ವೈವಿಧ್ಯತೆ ಎನ್ನುವುದು ಅಸಮಾನತೆಯನ್ನು ಹುಟ್ಟಿಸುವ ನೆಲೆಗಳಲ್ಲ.
ಬದಲಾಗಿ ಸಮುದಾಯಗಳಲ್ಲಿ ಹುದುಗಿರುವ ಗುರುತಿನ ಬಗೆಗಳಾಗಿರುತ್ತವೆ. ಸಾಂಸ್ಕ್ರುತಿಕ ರಾಜಕಾರಣದ ಮಸಲತ್ತಿನಿಂದ ಸಮುದಾಯ ಹಾಗೂ ಸದಸ್ಯರ ನಡುವಿನ ಇಂತಹ ಅಸಮಾನ ನೆಲೆಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತಲೆಯಿವೆ. ಈ ವ್ಯತ್ಯಾಸ ಇಲ್ಲವೇ ಬೇರೆತನಗಳು ವ್ಯಕ್ತಿ ಮತ್ತು ಸಮುದಾಯಗಳ ಸ್ವಾಯತ್ತತೆಯ ಗುರುತು (ಅಟಾನಮಿ ಆಫ್ ಐಡೆಂಟಿಟಿ) ಗಳಾಗಿ ರೂಪುಗೊಳ್ಳಬೇಕು, ಹೊರತು ಅಸಮಾನ ನೆಲೆಗಳಾಗಿಯಲ್ಲ. ಹಾಗಾಗಿ ಲೋಕ ಹೆಸರುವಾಸಿ ನುಡಿಯರಿಗ ಫರ್ಡಿನಾಂಡ್ ಡಿ. ಸಸ್ಯೂರ್ ಪರಿಚಯಿಸಿದ ‘ಡಿಫರನ್ಸ್’ ಎಂಬ ಅರಿಮೆಪದಕ್ಕೆ ನುಡಿ ಹಾಗೂ ಸಂಸ್ಕೃತಿ ಓದುಗಳಲ್ಲಿ ಅಷ್ಟೊಂದು ಮಹತ್ವ ಸಿಕ್ಕಿರುವುದಕ್ಕೇನು ಕಾರಣ ಹಾಗಾದರೆ? ಆದ್ದರಿಂದ ಇಂತಹ ಸ್ವಾಯತ್ತತೆಯ ನೆಲೆಗಳು ವ್ಯಕ್ತಿ ಇಲ್ಲವೇ ಸಮುದಾಯದ ಗುರುತಿನ ರೂಪಕವಾಗಬೇಕಾದ ಅಗತ್ಯವಿದೆ.
ಬದಲಾಗಿ ಅವುಗಳ್ಳನ್ನೂ ಕೂಡ ಅಧಿಕಾರ ಸಂಬಂಧದ ರಚನೆಯಾಗಿ ರೂಪುಗೊಳ್ಳಿಸುವುದಲ್ಲ. ಎತ್ತುಗೆಗಾಗಿ ನೋಡಿ, ಕನ್ನಡದ ಬೇರೆ ಬೇರೆ ಒಳನುಡಿ ಇಲ್ಲವೇ ನುಡಿಬಗೆಗಳಿಗೆ ಇರುವ ಸ್ವಾಯತ್ತತೆ ಹಾಗೂ ವೈವಿಧ್ಯತೆಯನ್ನು ನಿರಾಕರಿಸಿ, ಅವುಗಳೆಲ್ಲವನ್ನೂ ಪ್ರಮಾಣ ಕನ್ನಡದ ವಿರೂಪಗಳೆಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಸ್ವಾಯತ್ತತೆ ಮತ್ತು ವೈವಿಧ್ಯತೆಗಳು ನುಡಿ ಸಮುದಾಯದ ಪರಸ್ಪರ ನಂಟಿನ ನೆಲೆಗಳಾಗದೇ, ಅವೆರಡೂ ನುಡಿ ಸಮುದಾಯದ ವಿನ್ಯಾಸವನ್ನೇ ವಿರೋಧಾತ್ಮಕ ನೆಲೆಯಲ್ಲಿ ಗುರುತಿಸುವ ಮಾನದಂಡಗಳಾಗಿವೆ.
ಯಾವುದೇ ಪ್ರದೇಶ, ಜಾತಿ, ವರ್ಗ, ಧರ್ಮ ಎಂಬಿತ್ಯಾದಿ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳು ಎಂತಹದೇ ಪ್ರಾಬಲ್ಯವನ್ನು ಹೊಂದಿದ್ದರೂ, ಅವುಗಳು ಮಾತನಾಡುವ ನುಡಿಯೂ ಒಂದು ಒಳನುಡಿಯೇ ಆಗಿರುತ್ತದೆ. ಹಾಗಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನೇ ಮುಂದಿಟ್ಟುಕೊಂಡು ಒಳನುಡಿಗಳಲ್ಲಿ ಒಂದು ಮೇಲು ಮತ್ತೊಂದನ್ನು ಕೀಳಾಗಿ ಕಾಣುವ ಬಗೆಗಳು ಏಕೆ? ಮತ್ತು ಹೇಗೆ ಮುಂಚೂಣೆಗೆ ಬಂದಿವೇ? ಈ ಕೇಳ್ವಿಗಳು ಅತ್ಯಂತ ತೊಡಕಿನವಾದರೂ, ಅವುಗಳನ್ನು ಅರಿಯಲು ಬೇಕಾಗುವ ಒಂದಿಷ್ಟು ವಿವರಗಳನ್ನು ಈ ಮುಂದಿನ ಚರ್ಚೆಗಳಲ್ಲಿ ಕಾಣುತ್ತೇವೆ.
ನುಡಿ ಮತ್ತು ಒಳನುಡಿ: ಇವುಗಳ ದಿಟ ಚಹರೆಗಳೆಂತಹವು?
ಇಂಗ್ಲಿಶಿನ ಡಯಲೆಕ್ಟ್ ಎಂಬ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ‘ಉಪಭಾಷೆ’ ಅನ್ನುವ ಅರಿಮೆಪದವನ್ನು ಬಳಸುತ್ತಾರೆ. ಡಯಲೆಕ್ಟ್ ಎಂಬುದು ಗ್ರೀಕಿನ ಡಯಲೆಕ್ಟೋಸ್ (dialektos) ಎಂಬ ಪದದಿಂದ ಹುಟ್ಟಿದೆ. ನುಡಿಯರಿಗರು ಇದನ್ನು ಎರಡು ಬಗೆಯಲ್ಲಿ ನಿರ್ವಚಿಸಿರುವುದನ್ನು ನೋಡಬಹುದು. ನುಡಿಯೊಳಗೆಯೇ ಇರುವ ಆಯಾ ನುಡಿಯ ಬೇರೆ ಬೇರೆ ಬಗೆಗಳನ್ನೇ ಉಪಭಾಷೆ ಎಂದು ಕರೆಯುತ್ತಾರೆ. ಈ ವಾದದ ಪ್ರಕಾರ ಈ ನುಡಿ ಬಗೆಗಳ ಲಕ್ಷಣಗಳು ಆ ನುಡಿ ಸಮುದಾಯದ ಯಾವುದೇ ಒಂದು ನಿರ್ದಿಷ್ಟ ಗುಂಪನ್ನು ಪ್ರತಿನಿಧಿಸುತ್ತವೆ.
ಅಂದರೆ ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಇನ್ನೂ ಮುಂತಾಗಿ ಅವುಗಳನ್ನು ಹೆಸರಿಸುವುದೇ ಮೊದಲ ಬಗೆಯ ನಿರ್ವಚನೆಯಾಗಿದೆ. ಸಾಮಾಜಿಕ, ಪ್ರಾದೇಶಿಕ ನಂಟನ್ನು ಹೊಂದಿರುವ ಇಂತಹ ಯಾವುದೇ ನುಡಿ ಬಗೆಗಗಳು ರಾಜ್ಯ ಇಲ್ಲವೇ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಒಂದು ಪ್ರಮಾಣ ನುಡಿಯಾಗಿ ಗುರುತಿಸಿಕೊಳ್ಳುತ್ತವೆ. ಹಾಗೂ ಅಂತಹ ನುಡಿಗಳ ಅಧೀನ ರೂಪಗಳೇ ಈ ಉಪಭಾಷೆಗಳೆಂದು ಮತ್ತೊಂದು ಬಗೆಯ ನಿರ್ವಚನೆ ಹೇಳುತ್ತದೆ.
ಈ ಎರಡೂ ಪ್ರಕಾರದ ನುಡಿಯರಿಗರು ತಮ್ಮ ಉಪಭಾಷೆಯ ಬಗೆಗಿನ ನಿರ್ವಚನೆಗೆ ಬಳಸಿಕೊಳ್ಳುವ ಮಾನದಂಡಗಳು ಮಾತ್ರ ಒಂದೇ ಬಗೆಯ ಮಾನದಂಡಗಳಾಗಿವೆ ಎಂಬುದು ಮಾತ್ರ ಗಮನಾರ್ಹ. ಆ ಮಾನದಂಡಗಳನ್ನು ಉಲಿ, ಪದ, ಸೊಲ್ಲರಿಮೆ ಎಂಬಿತ್ಯಾದಿಯಾಗಿ ಗುರುತಿಸಬಹುದು. ದಿಟ ಇದೇ ನೆಲೆಗಳ ಮೂಲಕ ನುಡಿ ಬಗೆಗಳ ಕುರುಹುಗಳನ್ನು ಗುರುತಿಸುತ್ತಾರೆ. ಆದರೆ ಇದೇ ಕುರುಹುಗಳು ನುಡಿಯ ರಾಚನಿಕ ವಿಕಲ್ಪಗಳನ್ನೂ ಗುರುತಿಸುವ ಇಲ್ಲವೇ ನೋಡುವ ಕ್ರಮಗಳೂ ಆಗಿರುತ್ತವೆ ಎಂಬುದು ಅತ್ಯಂತ ಮಹತ್ವದ ಸಂಗತಿ ಎಂಬುದು ಈ ನಿರ್ವಚನಕಾರರಿಗೆ ಯಾಕೆ ಹೊಳೆಯಲಿಲ್ಲ.?
ನುಡಿಯರಿಮೆಯನ್ನು ಕೂಡ ಸಾಮಾಜಿಕ ಅಸಮಾನತೆಯನ್ನು ಹುಟ್ಟುಹಾಕಲು ಒಂದು ಮಾನದಂಡವನ್ನಾಗಿ ಬಳಸಿಕೊಂಡರೆ, ಅದನ್ನು ಓದುವ ಅಗತ್ಯವಾದರು ಯಾಕೆ? ಎಂಬ ಕೇಳ್ವಿಗಳು ಸಹಜವಾಗಿಯೇ ಎದುರಾಗುತ್ತವೆ. ನುಡಿಯರಿಮೆ ಇಲ್ಲವೇ ಇನ್ನ್ಯಾವುದೇ ಓದಿನ ವಲಯವಾದರೂ ಅವುಗಳ ಗುರಿಗಳು ಸಮುದಾಯದ ಅರಿವಿನ ನೆಲೆಗಳನ್ನು ಹಿಗ್ಗಿಸುವ ಮಾನದಂಡಗಳಾಗಬೇಕಾದ ಜರೂರಿದೆ. ಇಂತಹ ಅರಿವಿನ ವಲಯಗಳನ್ನೇ ಬಳಸಿಕೊಂಡು ಸಮುದಾಯಗಳನ್ನು ನರಕದ ಕೂಪಕ್ಕೆ ತಳ್ಳುವುದಕ್ಕಲ್ಲ ಎಂಬ ದಿಟವನ್ನು ನಾವು ಮನಗಾಣಬೇಕಿದೆ.
ಇದುವರೆಗೂ ಬಳಕೆಯಲ್ಲಿದ್ದ ಉಪಭಾಷೆ ಎಂಬ ಪದಕ್ಕೆ ಬದಲಾಗಿ ‘ಒಳನುಡಿ’ ಎನ್ನುವ ಅರಿಮೆಪದವನ್ನು ಬಳಸಲಾಗುತ್ತಿದೆ. ಈ ಹೊಸ ಅರಿಮೆಪದವನ್ನು ಮೊದಲು ಪರಿಚಯಿಸಿದವರು ಡಿ.ಎನ್.ಶಂಕರ ಭಟ್ಟ ಅವರು. ಒಳನುಡಿ ಎಂಬುದು ನುಡಿಯ ನೆಲೆಯಿಂದಲೂ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ. ಆದರೆ ಉಪಭಾಷೆ ಎಂಬ ಪದದಲ್ಲೇ ಅಧೀನ ನೆಲೆಯನ್ನು ಸೂಚಿಸುವ ತಿರುಳಿದೆ. ಈ ತಿರುಳೇ ಸಾಮಾಜಿಕ ಅಸಮಾನತೆಯನ್ನು ಸೂಚಿಸುತ್ತದೆ.
ಹಾಗಾಗಿ ಇದು ಕೇವಲ ಪದಗಳಲ್ಲಾದ ಬದಲಾವಣೆ ಮಾತ್ರವೆಂದು ತಿಳಿಯಬಾರದು. ಲೋಕವನ್ನು ನೋಡುವ ಬಗೆಯಲ್ಲಿಯೇ ಹುದಿಗಿರುವ ಅಸಮಾನ ನೆಲೆಗಳನ್ನು ಅರಿಯುವ ಬಗೆಯೂ ಇದಾಗಿದೆ. ಏಕೆಂದರೆ ಉಪಭಾಷೆ ಇಲ್ಲವೇ ಒಳನುಡಿ ಎಂಬುದು ಅಧೀನ ಇಲ್ಲವೇ ಇನ್ನೊಂದರ ವಿರೂಪವೆಂದಲ್ಲ. ಬದಲಾಗಿ ನುಡಿಯ ವೈವಿಧ್ಯತೆಯನ್ನು ಹಾಗೂ ಸಾಂಸ್ಕøತಿಕ ಬಹುಳತೆಯನ್ನೂ ತೋರಿಸುವ ಮಾನದಂಡಗಳಾಗಿವೆ.
ಒಂದೇ ನುಡಿಯನ್ನು ಈರ್ವ ನುಡಿಯಿಗರು ಒಂದೇ ಬಗೆಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಅಷ್ಟೇಯಲ್ಲ ಒಂದೇ ವ್ಯಕ್ತಿ ಅದೇ ನುಡಿಯನ್ನು ಎಲ್ಲ ಸನ್ನಿವೇಶದಲ್ಲೂ ಒಂದೇ ರೀತಿಯಲ್ಲಿ ಮಾತನಾಡಲಾರ ಹಾಗಾಗಿ ನುಡಿಬಗೆಗಳನ್ನು ಸನ್ನಿವೇಶ, ಕಾಲ, ಪ್ರದೇಶ ಹಾಗೂ ಸಾಮಾಜಿಕ ನೆಲಯಿಂದ ಬೇರ್ಪಡಿಸುತ್ತಾರೆಂದು ಕಾಣುತ್ತದೆ. ಉಪಭಾಷೆ ಇಲ್ಲವೇ ಒಳನುಡಿ ಎಂಬ ನೆಲೆಗಳು ಕೇವಲ ನುಡಿಬಗೆಗಳು ಮಾತ್ರವೇ (ಲ್ಯಾಂಗ್ವೇಜ್ ವೆರೈಟಿ) ಹೊರತು ಬೇರೆನೂ ಅಲ್ಲ. ನುಡಿಯೊಂದು ಬೆಳೆದುಬಂದ ಬಗೆ, ಅದು ಸಮಾಜದಲ್ಲಿ ವ್ಯವರಿಸುವ ರೀತಿ, ವ್ಯಕ್ತಿ ವಿಶಿಷ್ಟತೆಯನ್ನು ತೋರಿಸುವ ಕ್ರಮಗಳು, ಗ್ರಹಿಕೆಗಳು ಹಾಗೂ ಸಾಂಸ್ಕøತಿಕ ನಿಲುವುಗಳನ್ನು ಅರಿಯಲು ಈ ನುಡಿಬಗೆಗಳು ನೆರವಾಗುತ್ತಿವೆ.
ಒಂದು ಗುಂಪಿನ ಇಲ್ಲವೇ ಒಂದು ಪ್ರದೇಶದ ಇಲ್ಲವೇ ಒಂದು ಕಾಲಕ್ಕೆ ಸೇರಿದ ಜನರಾಡುವ ಯಾವುದೇ ನುಡಿ ಬಗೆಯನ್ನು ಒಳನುಡಿಯೆಂದು ಕರೆಯುತ್ತಾರೆ. ಉಲಿ, ಪದ, ಸೊಲ್ಲರಿಮೆಗಳನ್ನು ಆಧರಿಸಿಕೊಂಡು ಒಳನುಡಿಗಳ ಗುಣಗಳನ್ನು ಗುರುತಿಸುತ್ತಾರೆ. ಹಾಗೂ ಇದೇ ಗುಣಗಳು ಅದೇ ನುಡಿಯ ಇನ್ನೊಂದು ಬಗೆಯ ಒಳನುಡಿಯನ್ನು ಹುಟ್ಟುಹಾಕಲು ಕಾರಣವಾಗುತ್ತವೆ ಎಂಬುದು ಗಮನಾರ್ಹ. ಅಂದರೆ ನುಡಿ ಇಲ್ಲವೇ ಒಳನುಡಿ ಎಂದು ಗುರುತಿಸಲು ಇವರು ಮಾನದಂಡಗಳು ಬೇರೆ ಬೇರೆಯಲ್ಲ ಎಂಬುದನ್ನು ಇದು ಒತ್ತಿ ಹೇಳುತ್ತದೆ. ಹಾಗೇನೆ ಪ್ರತೀ ನುಡಿಸಮುದಾಯದ ಪ್ರತೀ ವ್ಯಕ್ತಿಯು ಮಾತನಾಡುವ ನುಡಿಯ ವಿವರಗಳು ಒಂದಿಲ್ಲ ಒಂದು ರೀತಿಯಲ್ಲಿ ಭಿನ್ನವಾಗಿಯೇ ಇರುತ್ತವೆ.
ಅಂದರೇನಾಯ್ತು ಯಾವುದೇ ಒಂದು ಪ್ರದೇಶದ ಇಲ್ಲವೇ ಗುಂಪಿನ ಜನರಾಡುವ ಮಾತಿಗೆ ಒಂದು ನಿರ್ದಿಷ್ಟ ಸ್ವರೂಪವಿರುತ್ತೆ ಎಂದು ಹೇಳುವುದಾದರೂ ಹೇಗೆ? ಇದೊಂದು ವಿತಂಡವಾದದಂತೆ ಕಂಡರೂ ಈ ನಿಲುವುಗಳನ್ನು ಅಲ್ಲಗಳಿಯುವುದಕ್ಕೆ ಸಾಧ್ಯವಿಲ್ಲ. ಒಂದುವೇಳೆ ಈ ನಿಲುವುಗಳನ್ನು ಅಲ್ಲಗಳಿಯಬೇಕೆಂದರೆ, ನುಡಿ ಹಾಗೂ ಒಳನುಡಿಗಳ ನಡುವೆ ದಿಟವಾಗಿಯೂ ಅಂತರಗಳಿವೆ ಎಂಬುದನ್ನು ಸಾಬೀತಪಡಿಸಲು, ಆ ನುಡಿ ಮತ್ತು ಅದರ ಒಳನುಡಿಯನ್ನು ನಿರ್ವಹಿಸುವ ಅಂತರ್ನಿಹಿತ ರಾಚನಿಕ ನಿಯಮಗಳ ಸ್ವರೂಪವನ್ನು ಬಿಡಿಸಿ ನೋಡಬೇಕಾಗುತ್ತದೆ. ಆವಾಗ ನುಡಿಯೊಂದರ ಅಖಂಡತೆ ಎಂಬುದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬಹುದು. ಈ ಕೆಳಗಿನ ಚಿತ್ರಗಳ ಮೂಲಕ ಈ ವಾದ ಸರಣಿಯನ್ನು ಇನ್ನಷ್ಟು ನಿಚ್ಚಳಗೊಳಿಸಬಹುದು;
ನುಡಿ = ಒಳನುಡಿಗಳ ಅಖಂಡತೆ ಹಾಗೂ ಒಳನುಡಿ = ವ್ಯಕ್ತಿನುಡಿಗಳ ಅಖಂಡತೆ
ನುಡಿ
| | |
ಒಳನುಡಿ ಒಳನುಡಿ ಒಳನುಡಿ
| | |
ವ್ಯಕ್ತಿನುಡಿ ವ್ಯಕ್ತಿನುಡಿ ವ್ಯಕ್ತಿನುಡಿ
- ಚಿತ್ರ – 1
ಪ್ರತಿಯೊಬ್ಬರೂ ಮಾತನಾಡುವುದು ಒಳನುಡಿಯನ್ನೇ ಎಂಬ ವಾಸ್ತವ ಸಂಗತಿ ಈ ವಿವರಣೆಗಳಿಂದ ತಿಳಿಯುತ್ತದೆ. ಹಾಗಾಗಿ ಒಳನುಡಿ ಎಂದರೆ ಗ್ರಾಮ್ಯ, ವಿರೂಪಗೊಂಡ ರೂಪ ಹಾಗೂ ಕೆಳದರ್ಜೆಯದು ಎಂಬ ನಿಲುವುಗಳು ಎಂತಹ ತಪ್ಪು ಗ್ರಹಿಕೆಗಳು ಅನ್ನುವುದು ಇದರಿಂದ ಮನದಟ್ಟವಾಗುತ್ತದೆ.
ಒಳನುಡಿಗಳು: ಕೆಲವು ತಪ್ಪುಗ್ರಹಿಕೆಗಳು
ಲೋಕದ ಜನರಾಡುವ ಯಾವುದೇ ನುಡಿಯನ್ನು ನೋಡಿದರೂ, ಅದು ಹಲವು ಬಗೆಗಳಲ್ಲಿ ನೆಲೆಗೊಂಡಿರುತ್ತದೆ. ಸಾಮಾಜಿಕ, ಪ್ರಾದೇಶಿಕ, ಚಾರಿತ್ರಿಕ, ಸಾಹಿತ್ಯಕ ಎಂಬಿತ್ಯಾದಿಯಾಗಿ ಆ ಬಗೆಗಳನ್ನು ಗುರಿತಿಸಬಹುದು. ಅಂದರೇನಾಯ್ತು ಪ್ರತಿಯೊಂದು ನುಡಿಯು ಏಕರೂಪಿಯಲ್ಲ ಅದು ಬಹುರೂಪಿಯಾಗಿರುತ್ತದೆ ಎಂದಾಯ್ತು. ಹಾಗಾಗಿ ಬಹುಳತೆಯೇ ನುಡಿಯ ಬಹುಮುಖ್ಯ ಲಕ್ಷಣಗಳಲ್ಲೊಂದು ಎಂಬ ಸಂಗತಿ ಇದರಿಂದ ನಿಚ್ಚಳವಾಗಿ ಕಾಣುತ್ತದೆ.
ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಕವಾಗಿ ಈಗಾಗಲೇ ಸಮುದಾಯದೊಳಗೆ ನೆಲೆನಿಂತಿರುವ ಅಸಮಾನ ನಿಲುವುಗಳು ನುಡಿಯೊಳಗೆಯೂ ಒಂದು ಶ್ರೇಣೀಕರಣವನ್ನು ಹುಟ್ಟು ಹಾಕುತ್ತವೆ. ಇಂತಹ ನಿಲುವುಗಳೇ ಒಳನುಡಿಗಳ ನಡುವಿನ ಭಿನ್ನತೆಯನ್ನು ಚಹರೆಗಳನ್ನಾಗಿ ಗುರುತಿಸದೇ, ಕೇವಲ ಸಾಮಾಜಿಕ ಭೇದಗಳನ್ನಾಗಿ ಗುರುತಿಸುತ್ತವೆ.
ಭಿನ್ನತೆ ಎಂಬುದು ಯಾವುದೇ ವಸ್ತು, ವಿಷಯ, ಮನೋಧರ್ಮಗಳ ನಡುವೆ ಇರುವ ವ್ಯತ್ಯಾಸವನ್ನು ತೋರಿಸುವುದಾಗಿದೆ ಹೊರತಾಗಿ ತರತಮ ನೆಲೆಗಳನ್ನು ಹುಟ್ಟು ಹಾಕುವುದಲ್ಲ. ಇಂತಹ ಭಿನ್ನತೆಯ ತತ್ವವನ್ನು ಸಸ್ಯೂರ್ ಹುಟ್ಟು ಹಾಕಿದನು. ಇದೊಂದು ಸಾಂಸ್ಕೃತಿಕವಾಗಿ ಕ್ರಾಂತಿಕಾರಿ ಬೆಳವಣಿಗೆಯೆಂದೇ ಹೇಳಬೇಕು. ಏಕೆಂದರೆ, ಅದುವರೆಗೂ ಸಂಸ್ಕೃತಿ ಓದಿನಲ್ಲಿ ಭಿನ್ನತೆಯನ್ನು ತರತಮದ ನೆಲೆಯನ್ನಾಗಿ ನಿರ್ವಚಿಸುತ್ತಿದ್ದರು.
ಆದರೆ ಸಸ್ಯೂರ್‍ನ ಪ್ರಕಾರ ಎರಡು ವಸ್ತು, ವಿಷಯ, ಪದಗಳ ನಡುವಣ ಭಿನ್ನತೆಯೇ ಅವುಗಳ ಅಸ್ತಿತ್ವ ಹಾಗೂ ಸ್ವಾಯತ್ತತೆಯನ್ನು ಗುರುತಿಸುವ ನೆಲೆಗಳಾಗಿರುತ್ತದೆ. ಹಾಗಾಗಿ ನುಡಿಯಲ್ಲಿ ನೆಲೆನಿಂತಿರುವ ಇಂತಹ ನುಡಿಯ ಭಿನ್ನತೆಗಳು ಸಾಂಸ್ಕತಿಕ ಕೀಳರಿಮೆಯ ಸೂಚಕಗಳಾಗದೇ, ಸಾಮಾಜಿಕ-ಸಾಂಸ್ಕೃತಿಕ ಬಹುಳತೆಯ ರೂಪಕಗಳೆಂಬುದು ನಿಚ್ಚಳವಾಗಿ ಕಾಣುತ್ತದೆ.
ಇದನ್ನೇ ಅಮೇರಿಕದ ಹೆಸರುವಾಸಿ ನುಡಿಯರಿಗ ವಿಲಿಯಂ ಲೆಬೋ, “ರೂಲ್ಸ್ ಫಾರ್ ರಿಚ್ಯುವೆಲ್ ಇನ್‍ಸಲ್ಟ್ಸ್” ಎಂದು ಕರೆದಿರಬಹುದು. ನುಡಿಯರಿಮೆಯ ಪ್ರಕಾರ ಒಳನುಡಿಯೆಂದರೆ ಅದೊಂದು ನುಡಿಬಗೆ ಮಾತ್ರ. ಆದರೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯಗಳು, ತಮ್ಮ ನುಡಿಬಗೆಗಳಿಗೆ ಹೊರತಾದ ನುಡಿಬಗೆಗಳನ್ನು ಈ ಕೆಳ್ಕಂಡಂತೆ ಗುರುತಿಸಿದ್ದಾರೆ.
- ವಿರೂಪಗೊಂಡ ಭಾಷಿಕ ರೂಪಗಳು
- ಸಾಮಾಜಿಕ ಅಂಚಿನಲ್ಲಿರುವ ಹಾಗೂ ಅಲಕ್ಷಿತ ಸಮುದಾಯಗಳ ಭಾಷೆ
- ಗ್ರಾಮ್ಯ ನುಡಿಗಳು
- ಒಳನುಡಿ ಎನ್ನುವುದೇ ಒಂದು ಸಾಮಾಜಿಕ ಕಳಂಕ
- ಪಾರಂಪರಿಕವಾಗಿ ಹೀನ ಸ್ಥಿತಿಯಲ್ಲಿರುವ ಭಾಷೆಗಳು
- ಯಾವುದೇ ಪ್ರದೇಶ / ಜನಾಂಗದವರ ಭಾಷೆಗೆ ಅಧೀನವಾಗಿರುವ ಭಾಷೆ
ಒಳನುಡಿ ಹಾಗೂ ಒಳನುಡಿಗಳ ಬಗೆಗಳನ್ನು ಕುರಿತು ಓದುವ ವಲಯವೇ ಒಳನುಡಿ ಓದು (ಡಯಲೆಕ್ಟಾಲಜಿ). ಹಾಗಾದರೆ ಒಳನುಡಿ ಹಾಗೆಂದರೇನು ಎಂಬ ಕೇಳ್ವಿ ಇಲ್ಲಿ ಎದುರಾಗುತ್ತದೆ. ಸಾಮಾನ್ಯ ಜನರ ಪ್ರಕಾರ, ಒಳನುಡಿಯೆಂದರೆ ಅದೊಂದು ಕೆಳಮಟ್ಟದ, ಕೆಳದರ್ಜೆಯ, ಗಾಂಪ [ಗ್ರಾಮ್ಯ] ರೂಪವೆಂದೇ ಪರಿಗಣಿಸಲಾಗುತ್ತದೆ. ಇಂತಹ ನುಡಿ ಬಗೆಗಳು ಕೂಲಿ, ವ್ಯವಸಾಯ, ಕಾರ್ಮಿಕ, ಹಿಂದೂಳಿದ ಹಾಗೂ ತಳಸಮುದಾಯಗಳೊಂದಿಗೆ ನಂಟನ್ನು ಹೊಂದಿರುತ್ತವೆ. ಮತ್ತು ಈ ನುಡಿ ಬಗೆಗಳು ಪ್ರತಿಷ್ಠೆಯ ಕೊರತೆಯಿಂದಲೂ ಬಳಲುತ್ತವೆ. ಇದು ಆರೋಪವಲ್ಲ ಇದು ವಾಸ್ತವ ಸಂಗತಿ.
1. ಯಾವುದೇ ಸಾಮಾಜಿಕ ಅಂತಸ್ತನ್ನು ಹೊಂದಿರದ, ಬರಹದ ಸವಲತ್ತನ್ನು ಪಡೆದುಕೊಳ್ಳದ ಅಂದರೆ ಲಿಪಿ ವ್ಯವಸ್ಥೆಯಿಂದ ವಂಚಿತವಾಗಿರುವ ಹಾಗೂ ಅಂಚಿಗೆ ತಳ್ಳಲ್ಪಟ್ಟಂತಹ ಜನರಾಡುವ ನುಡಿಬಗೆಗಳನ್ನು ಒಳನುಡಿಯೆಂದು ಕರೆಯುತ್ತಾರೆ.
2. ಪ್ರಮಾಣ ನುಡಿಯ ನಿಯಮಗಳನ್ನು ಉಲ್ಲಂಘಿಸಿ (ಹೊರಪದರ ರಚನೆಗಳಕ್ಕಿಂತ ಬೇರೆಯಾದ ರಾಚನಿಕ ವ್ಯವಸ್ಥೆಯನ್ನು ಹೊಂದಿದಂತೆ ಕಾಣುವ) ಬೌದ್ಧಿಕ ಕಸುವಿಲ್ಲದ ಇಲ್ಲವೇ ಬುದ್ಧಿಭ್ರಮಣೀತ ರೂಪಗಳನ್ನು ಒಳಗೊಂಡಿರುವ ನುಡಿಯೇ ಒಳನುಡಿ.
ಪ್ರತಿಯೊಬ್ಬರು ಕೂಡ ಒಂದಲ್ಲೊಂದು ಒಳನುಡಿಯಲ್ಲಿಯೇ ಮಾತಾಡುತ್ತಾರೆ. ಹಾಗಾಗಿ ಇವುಗಳಲ್ಲಿಯೇ ಯಾವುದೇ ಒಂದನ್ನು ಮೇಲು ಎಂದು ಮತ್ತು ಇನ್ನೂಳಿದ ಎಲ್ಲ ಒಳನುಡಿಗಳನ್ನು ಕೀಳು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅಧಿಕಾರ ಸಂಬಂಧ ಹಾಗೂ ಸಾಮಾಜಿಕ ಪ್ರಾಬಲ್ಯದ ನಂಟನ್ನು ಹೊಂದಿರುವ ಯಾವುದೇ ಗುಂಪು, ಪ್ರದೇಶ, ಜಾತಿಗಳು ಮಾತುನಾಡುವ ನುಡಿಬಗೆಯೊಂದನ್ನು ಮಾತ್ರ ಮೇಲು ಎಂದು ಪರಿಗಣಿಸಲಾಗುತ್ತದೆ.
ಉಳಿದವುಗಳನ್ನು ಕೆಳಮಟ್ಟದವು ಎಂದು ಒಪ್ಪಿಸಲಾಗಿರುತ್ತದೆ. ನುಡಿಯರಿಮೆಯ ಪ್ರಕಾರ ಯಾವ ನುಡಿಯೂ ಮೇಲುವಲ್ಲ ಕೀಳುವಲ್ಲ ಎಂಬುದು ಮಾತ್ರ ದಿಟ. ಈಗಾಗಲೇ ಚರ್ಚಿಸಿದಂತೆ, ಒಳನುಡಿ ಎಂಬುದು ಯಾವುದೇ ಒಂದು ನುಡಿಯ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪಂಗಡಗಳು ಮಾತ್ರ.
ಅಂದರೆ ಮೈಸೂರು ಕನ್ನಡ, ಬಾಗಲಕೋಟೆ ಕನ್ನಡ, ಗುಲಬರ್ಗಾ ಕನ್ನಡ, ಬೀದರ ಕನ್ನಡ, ಕುಂದಾಪುರ ಕನ್ನಡ ಮುಂತಾದವುಗಳನ್ನು ಪ್ರಾದೇಶಿಕವಾಗಿ, ಹರಿಜನ ಕನ್ನಡ, ಗೌಡ ಕನ್ನಡ, ಲಿಂಗಾಯತ ಕನ್ನಡ, ಹವ್ಯಕ ಎಂಬಿತ್ಯಾದಿಗಳನ್ನು ಜಾತಿ ಇಲ್ಲವೇ ಜಾಮಾಜಿಕ ಒಳನುಡಿಗಳೆಂದು ಗುರುತಿಸುತ್ತಾರೆ. ಈ ಬಗೆಯ ವಿಂಗಡಣೆಗಳು ಸಾಕಷ್ಟು ಸವಾಲುಗಳನ್ನು ಒಡ್ಡುತ್ತವೆ.
ಮುಖ್ಯವಾಗಿ ನುಡಿ ಹಾಗೂ ಒಳನುಡಿಗಳ ನಡುವಿನ ಗಡಿಗೆರೆಗಳನ್ನು ಗುತುತಿಸುವ ಬಗೆಯಲ್ಲಿಯೇ ಈ ಸವಾಲುಗಳು ಎದುರಾಗುತ್ತವೆ. ಹಾಗೆ ನೋಡಿದರೆ, ನುಡಿಯೆಂದರೇನು ಎಂಬುದೇ ಅತ್ಯಂತ ಸವಾಲಿನ ಕೇಳ್ವಿಯಾಗಿದೆ. ದಿಟ ನುಡಿಯೆನ್ನುವುದೇ ನುಡಿಯ ಹಲವು ಬಗೆಗಳ ನಡುವಣ ಪರಸ್ಪರ ಅರ್ಥಗ್ರಾಹ್ಯತೆಯ ಮೊತ್ತ.
ಆದರೆ ನುಡಿಯೊಂದನ್ನು ಬಿಡಿ ಭಾಗಗಳನ್ನಾಗಿಸಿ, ಅವುಗಳನ್ನೇ ಒಳನುಡಿಗಳೆಂದು ನಿರ್ವಚಿಸುವುದರಿಂದ ಆಗುವ ಪ್ರಯೋಜನ ಏನೆಂದರೆ ನುಡಿ ಹಾಗೂ ಒಳನುಡಿ ಎಂದು ಗುಣಾರೋಪಣೆ ಮಾಡವುದಕ್ಕೆ ಮಾನದಂಡಗಳು ಸಿಗುತ್ತವೆ ಅಷ್ಟೇ. ಸಾಂಸ್ಕೃತಿಕ ಇಲ್ಲವೇ ನುಡಿಯ (ಭಾಷಿಕ) ಕಣ್ನೋಟದಲ್ಲಿ ಇಂತಹ ಗುಣಾರೋಪಣೆಗಳೇನು ದೊಡ್ಡ ಸಾಧನೆಗಳಲ್ಲ. ಇವುಗಳು ಕೇವಲ ಸಾಮಾಜಿಕ-ರಾಜಕೀಯ ರಚನೆಗಳು ಮಾತ್ರ.
ಎರಡು ಬೇರೆ ಬೇರೆ ಎತ್ತುಗೆಗಳಿಂದ ಈ ನಿಲುವನ್ನು ಇನ್ನಷ್ಟು ವಿವರವಾಗಿ ನೋಡಬಹುದು. ಸ್ಕ್ಯಾಂಡಿನವಿಯನ್ ನುಡಿಗಳಾದ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್‍ಗಳ ನಡುವೆ ಪರಸ್ಪರ ಅರ್ಥಗ್ರಾಹ್ಯತೆ ಇದ್ದಾಗಲೂ, ಅವುಗಳನ್ನು ಬೇರೆ ಬೇರೆ ನುಡಿಗಳೆಂದು ಗುರುತಿಸಲಾಗಿದೆ. ಒಳನುಡಿ ಓದಿನಲ್ಲಿ ನೆಲೆನಿಂತಿರುವ ನುಡಿ ಹಾಗೂ ಒಳನುಡಿಗಳ ಕುರಿತ ನಮ್ಮ ಈಗಿನ ವ್ಯಾಖ್ಯಾನಕ್ಕೆ ಇದು ತಕ್ಕುದಾದ ನಿಲುವಲ್ಲ ಎಂದು ಕಾಣುತ್ತದೆ.
ಏಕೆಂದರೆ ಒಂದೇ ನುಡಿಯ ಬೇರೆ ಬೇರೆ ನುಡಿಬಗೆಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾದರೆ, ಅವುಗಳನ್ನು ಬೇರೆ ನುಡಿಗಳೆಂದು ಪರಿಗಣಿಸುವುದಿಲ್ಲ. ಬದಲಾಗಿ ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಗುರುತಿಸುತ್ತಾರೆ. ಇಂತಹ ಸಂವಹನ ಸಾಧ್ಯತೆ ಸ್ವೀಡಿಶ್, ನಾರ್ವೇ ಹಾಗೂ ಡೆನಿಶ್‍ಗಳ ನಡುವೆ ಇರುವಾಗಲೂ ಅವುಗಳನ್ನು ಬೇರೆ ನುಡಿಗಳನ್ನಾಗಿ ಗುರುತಿಸಲಾಗಿದೆ.
ಇದಕ್ಕೆ ಎದುರಾಗಿ ಜರ್ಮನ್ನಿನ ಕೆಲವು ಒಳನುಡಿಗಳು ಮತ್ತೆ ಕೆಲವು ಒಳನುಡಿಯ ಆಡುಗರಿಗೆ ಅರ್ಥವಾಗುವುದಿಲ್ಲ. ಅಂದರೆ ಪರಸ್ಪರ ಸಂವಹನದಲ್ಲಿ ತೊಡಕಾಗುತ್ತದೆ. ಆದಾಗ್ಯೂ ಜರ್ಮನ್ ನುಡಿಗಳನ್ನು ಒಂದೇ ನುಡಿಯ ಬೇರೆ ಬೇರೆ ಒಳನುಡಿಗಳೆಂದು ಪರಿಗಣಿಸಲಾಗಿದೆ.
ಇಂದರಿಂದ ಜರ್ಮನ್ ನುಡಿಗೆ ಒಂದು ಸ್ವತಂತ್ರ ನುಡಿಯಾಗುವ ಹೆಚ್ಚಿನ ಅರ್ಹತೆಯಿದ್ದು, ಡೆನಿಶ್ ನುಡಿಗೆ ಸ್ವತಂತ್ರ ನುಡಿಯಾಗುವ ಅರ್ಹತೆ ಕಡಿಮೆ ಇದೆಯೆಂದು ವಾದಿಸಿದಂತೆ ಅಲ್ಲ. ಆದರೆ ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು, ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸಲಾಗುತ್ತದೆ. ಹಾಗಾದರೆ ಈ ತತ್ವದ ಪ್ರಸ್ತುತೆಯಾದರೂ ಏನು? ಎಂಬ ಕೇಳ್ವಿ ಈಗ ಎದುರಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243