ಬಹಿರಂಗ

ಸರ್ಜಿಕಲ್ ದಾಳಿಯ ವಿಭಿನ್ನ ವಿಕಾರಗಳು

Published

on

(ಹೆಸರಾಂತ ಚರಿತ್ರಕಾರ, ಚಿಂತಕ, ಪರಿಸರವಾದಿ, ಕ್ರಿಕೆಟ್ ತಜ್ಞ ಡಾ. ರಾಮಚಂದ್ರ ಗುಹಾ ಅವರ ನಿನ್ನೆಯ ಅಂಕಣದ ಮುಖ್ಯಾಂಶಗಳು ಇಲ್ಲಿವೆ)

ಮೋದಿ ಆಡಳಿತದಲ್ಲಿ ‘ಸರ್ಜಿಕಲ್ ದಾಳಿ’ ಎಂಬ ಪದಕ್ಕೆ ಭಾರೀ ಚಾಲನೆ ಸಿಕ್ಕಿತು. 2016ರ ಪಾಕಿಸ್ತಾನದಲ್ಲಿ ನೆಲೆಗೊಂಡಿದ್ದ ಭಯೋತ್ಪಾದಕರ ಮೇಲೆ ನಡೆಸಿದ ಮೊದಲ ಸರ್ಜಿಕಲ್ ದಾಳಿ ಅಷ್ಟೇನೂ ಫಲ ಕೊಡಲಿಲ್ಲ. ಏಕೆಂದರೆ ನಮ್ಮ ರಕ್ಷಣಾಬಲಗಳು ಈಗಲೂ ನಿತ್ಯವೂ ಭಯೋತ್ಪಾತದ ವಿರುದ್ಧ ಏಗುತ್ತಲೇ ಇವೆ. ಎರಡನೆಯದಾಗಿ ಹಠಾತ್ತಾಗಿ ನೋಟುಗಳ ರದ್ದತಿ ಮಾಡಿ ಅದನ್ನೂ ‘ಕಾಳಸಂತೆಕೋರರ ಮೇಲೆ ನಡೆಸಿದ ಸರ್ಜಿಕಲ್ ದಾಳಿ’ ಎಂದೇ ಹೇಳಲಾಯಿತು. ಅದಂತೂ ಪೂರ್ತಿ ಗುರಿ ತಪ್ಪಿತು. ಏನೂ ಅರಿಯದ ರೈತರನ್ನೂ ಚಿಕ್ಕಪುಟ್ಟ ವ್ಯಾಪಾರಿಗಳನ್ನೂ ಇನ್ನಿಲ್ಲದಷ್ಟು ಹೈರಾಣು ಮಾಡಿತು.

ಇವೆರಡು ವೈಫಲ್ಯಗಳ ಮಧ್ಯೆ ಮೋದಿ ಸರಕಾರ ಇನ್ನೂ ಕೆಲವು ‘ಸರ್ಜಿಕಲ್ ದಾಳಿ’ಗಳನ್ನು ಯಶಸ್ವಿಯಾಗಿಯೇ ನಡೆಸಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೇಲೆ ಮತ್ತು ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಮೇಲೆ ದಾಳಿ ಮಾಡಿ ಇನ್ನಿಲ್ಲದ ನಷ್ಟ ಉಂಟುಮಾಡಿದೆ: ಈ ಸಂಸ್ಥೆಗಳ ಮೇಲೆ ಹಿಡಿತವಿದ್ದ ಮಾನವ ಸಂಪನ್ಮೂಲ ಇಲಾಖೆಗೆ ನೇಮಕ ಮಾಡಿದ ಇಬ್ಬರು ಸಚಿವರಿಗೂ ಶಿಕ್ಷಣ ಅಥವಾ ಸಂಶೋಧನಾ ರಂಗದಲ್ಲಿ ಏನೇನೂ ಪರಿಣತಿ ಇಲ್ಲ. ಇವರು ನಡೆಸಿದ ದಾಳಿ ನೋಡಿ: ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಮತ್ತು ಸಮಾಜ ವಿಜ್ಞಾನ ಸಂಶೋಧನಾ ಮಂಡಲಿ ಎರಡಕ್ಕೂ ಅನರ್ಹರನ್ನೇ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇನ್ನು ಹೈದರಾಬಾದ್ ಕೇಂದ್ರೀಯ ವಿ.ವಿ ಮತ್ತು JNU ಎರಡರ ಘನತೆಯನ್ನೂ ತಗ್ಗಿಸಲಾಗಿದೆ. ಸ್ವದೇಶೀ ಪಾಂಡಿತ್ಯಕ್ಕೆ ಆದ್ಯತೆ ಕೊಡಬೇಕೆಂಬುದೇ ಆಗಿದ್ದರೆ ಸಮಾಜ ವಿಜ್ಞಾನಕ್ಕಷ್ಟೇ ಇಂಥ ದಾಳಿಯನ್ನು ಸೀಮಿತಗೊಳಿಸಬಹುದಿತ್ತು. ಆದರೆ ನೈಸರ್ಗಿಕ ವಿಜ್ಞಾನ ರಂಗಕ್ಕೂ ಅದು ವಿಸ್ತರಿಸಿದೆ.

ನಮ್ಮ ದೇಶದಲ್ಲಿ ವೈಜ್ಞಾನಿಕ ಮನೋವೃತ್ತಿಗೆ ಆದ್ಯತೆ ಕೊಡಬೇಕೆಂದು ನೆಹರೂ ಎಷ್ಟೊಂದು ವೈಜ್ಞಾನಿಕ ಸಂಸ್ಥೆಗಳನ್ನು JRD ಟಾಟಾ, ಹೋಮಿಭಾಭಾ, ವಿಕ್ರಮ್ ಸಾರಾಭಾಯಿ ಮೊದಲಾದವರ ನೆರವಿನಿಂದ ಕಟ್ಟಿಸಿದರು. IISc, TIFR, IITಗಳನ್ನು ಪೋಷಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗಳಿಗೆ ಬುನಾದಿ ಹಾಕಿದರು. ಅವೆಲ್ಲ ಪ್ರತಿಷ್ಠಿತ ಸಂಸ್ಥೆಗಳೂ ದಾಳಿಗೆ ತುತ್ತಾಗಿವೆ. ಅದೂ ಯಾರಿಂದ? “ವೇದಕಾಲದಲ್ಲೇ ಅದಿತ್ತು, ಇದಿತ್ತು, ಸಾಪೇಕ್ಷ ಸಿದ್ಧಾಂತ ಗೊತ್ತಿತ್ತು” ಎಂದೆಲ್ಲ ಹೇಳಿ ವಿಜ್ಞಾನಿಗಳ ಸಮಾವೇಶದಲ್ಲೇ ಪ್ರಧಾನಿಯವರಿಂದ ಮೊದಲ್ಗೊಂಡು ವಿಜ್ಞಾನ-ತಂತ್ರಜ್ಞಾನ ಸಚಿವರೂ ವಿಜ್ಞಾನದ ಘನತೆಯನ್ನು ಕುಗ್ಗಿಸುವ ಮಾತಾಡಿ ನಗೆಪಾಟಲಿಗೀಡಾದವರೇ ದಾಳಿ ನಡೆಸಿದ್ದಾರೆ.

ವಾಜಪೇಯಿಯವರ ಆಡಳಿತದಲ್ಲಿ ವಿಜ್ಞಾನ ತಂತ್ರಜ್ಞಾನ ರಂಗದಲ್ಲಿ ಈ ಬಗೆಯ ರಾಜಕೀಯ ಹಸ್ತಕ್ಷೇಪ ಇರಲಿಲ್ಲ. ಅವರಿಗೆಲ್ಲ ವಿಜ್ಞಾನಿಗಳ ಮೇಲೆ ಗೌರವ ಇತ್ತು, ಪಾಂಡಿತ್ಯಕ್ಕೆ ಗೌರವ ಇತ್ತು. ಅವರ ಸಂಪುಟದಲ್ಲಿ ಡಾ. ಮುರಲೀ ಮನೋಹರ ಜೋಶಿಯಂಥ ಭೌತವಿಜ್ಞಾನಿಗಳಿದ್ದರು. ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ಜಸವಂತ್ ಸಿಂಗ್, ಶೌರಿ, ಯಶವಂತ್ ಸಿನ್ಹಾ ಇವರೆಲ್ಲ ಗಂಭೀರ ವಿಷಯಗಳ ಓದುಗರಾಗಿದ್ದರು, ಬರೆಯುತ್ತಿದ್ದರು ಕೂಡ. ಈಗಿನ ಸಚಿವರ ಓದು ಕೇವಲ ಫೇಸ್ ಬುಕ್ , ಟ್ವಿಟ್ಟರ್ ವಾಟ್ಸಾಪ್ ಗಳಿಗೆ ಸೀಮಿತವಾಗಿರುವಂತೆ ಕಾಣುತ್ತದೆ.

ಅದಕ್ಕೇ ಪ್ರತಿಷ್ಠಿತ ವಿ.ವಿ.ಗಳಿಗೆ ಹಾಗೂ ಸಂಶೋಧನ ಸಂಸ್ಥೆಗಳಿಗೆ ಮೊದಲ ದರ್ಜೆಯ ಸ್ಕಾಲರ್ ಗಳನ್ನು ನೇಮಕ ಮಾಡುವ ಬದಲು ಮೂರನೆಯ ದರ್ಜೆಯ ಸೂತ್ರವಾದಿಗಳನ್ನು ತಂದು ಕೂರಿಸುತ್ತಿದ್ದಾರೆ. ಈ ಬಗೆಯ ‘ಸರ್ಜಿಕಲ್ ದಾಳಿ’ಯ ಪರಿಣಾಮವಾಗಿ ರಾಷ್ಟ್ರದ ಪ್ರತಿಷ್ಠೆ ಕುಗ್ಗಿದೆ; ಪಾಂಡಿತ್ಯ ಮೂಲೆಗುಂಪಾಗಿದೆ. ವಿಜ್ಞಾನಿಗಳ ನೈತಿಕ ಸ್ಥೈರ್ಯವೂ ಕುಸಿದಿದೆ. ಈ ದಾಳಿಯಿಂದಾಗಿ ನಮ್ಮ ಆರ್ಥಿಕ, ತಾಂತ್ರಿಕ ಮತ್ತು ಸಾಮಾಜಿಕ ರಂಗಗಳ ಕುಸಿತದ ಪರಿಣಾಮಕ್ಕೆ ಇಂದಿನ ಎಳೆಯರಷ್ಟೇ ಅಲ್ಲ, ಮುಂದೆ ಹುಟ್ಟುವವರೂ ತತ್ತರಿಸಬೇಕಾಗಿದೆ.

ಇದು ಡಾ. ರಾಮಚಂದ್ರ ಗುಹಾ ಅವರ ಅಭಿಪ್ರಾಯವಾಗಿದ್ದು, (ಮೂಲ: http://bit.ly/2DDUI7U ) ಅದಕ್ಕೆ ನನ್ನ ಮೇಲೆ ದಾಳಿ ಮಾಡಬೇಕಾಗಿಲ್ಲ. ಅಂದಹಾಗೆ, ಡಾ. ಗುಹಾ ಈ ಹಿಂದೆ ನೆಹರೂ ಗಾಂಧೀ ಪರಿವಾರವನ್ನೂ ಸಾಕಷ್ಟು ಕಟುವಾಗಿಯೇ ಟೀಕಿಸಿದ್ದಾರೆ. ಬಕೆಟ್ಟು , ಗಂಜಿ, ಚಮಚಾ, ಪ್ರಶಸ್ತಿ-ಪಿಪಾಸು, ಎಡಪಂಥೀಯ ಇತ್ಯಾದಿ ಹಳಸಲು ಪದಗುಚ್ಛಗಳನ್ನು ಬಳಸಿದರೆ (ಇತರರಿಗೆ ಕಿರಿಕಿರಿ ಆಗುವುದರಿಂದ) ಅಂಥ ಕಾಮೆಂಟುಗಳನ್ನು ಕಿತ್ತು ಹಾಕಲಾಗುವುದು.

(ಅಂಕಣಕಾರ ನಾಗೇಶ್ ಹೆಗಡೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾದ ಬರಹ )

https://m.facebook.com/story.php?story_fbid=2250099991714003&id=100001420735862

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version