ದಿನದ ಸುದ್ದಿ

ದಾವಣಗೆರೆ ವಿವಿ ಕುಲಪತಿಯೊಂದಿಗೆ ವಿದ್ಯಾರ್ಥಿಗಳ ನೇರ ಫೋನ್-ಇನ್-ಕಾರ್ಯಕ್ರಮ : ಲಾಕ್‍ಡೌನ್ ನಂತರ ಪದವಿ ಪರೀಕ್ಷೆ ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದು, ಲಾಕ್‍ಡೌನ್ ಮುಗಿದ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕುಲಪತಿ ಪ್ರೊ. ಶರಣಪ್ಪ ಹಲಸೆ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜೊತೆ ಸೋಮವಾರ ನೇರ ಫೋನ್-ಇನ್- ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರೀಕ್ಷೆ ಫಲಿತಾಂಶದ ಬಗ್ಗೆ ಎಲ್ಲ ವಿದ್ಯಾರ್ಥಿಗಳಲ್ಲಿ ಕುತೂಹಲವಿದೆ. ಫಲಿತಾಂಶ ಪ್ರಕಟಣೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಕೊರೊನಾ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ. ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್-19ರ ಕಾರಣಕ್ಕಾಗಿ ಬಿ.ಇಡಿ ಪದವಿಯ ಪಠ್ಯ ಮತ್ತು ಪ್ರಾಯೋಗಿಕ ಪರೀಕ್ಷೆಯೂ ವಿಳಂಬವಾಗಿದೆ. ಎರಡು ವರ್ಷದಲ್ಲಿ ಮುಗಿಯಬೇಕಾಗಿದ್ದ ಪದವಿಗೆ ಮೂರು ವರ್ಷವಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ಕೋ-ಆರ್ಡಿನೇಷನ್ ಸಮಿತಿ ಸಭೆಯಾಗಿ ವರದಿ ಬರಲು ತಡವಾದ ಕಾರಣ ಮಾರ್ಚ್ ಒಳಗೆ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.

ವೇಳಾಪಟ್ಟಿ ಸಿದ್ಧಪಡಿಸಿ ಪರೀಕ್ಷೆಗೆ ಅಣಿಯಾಗುತ್ತಿದ್ದಂತೆ ಕೋವಿಡ್-19 ನಿಂದಾಗಿ ರಜೆ ನೀಡಲಾಗಿದೆ. ಆದರೆ ಲಾಕ್‍ಡೌನ್ ನಂತರ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸದ್ಯಕ್ಕೆ ಯಾವುದೇ ತರಗತಿಗೂ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಮಾಡುವ ಉದ್ದೇಶ ವಿಶ್ವವಿದ್ಯಾನಿಲಯಕ್ಕೆ ಇಲ್ಲ. ಅಲ್ಲದೆ ಮುಂದಿನ ತರಗತಿಗಳಿಗೆ ಮೇ 12ರಿಂದ ಆನ್‍ಲೈನ್‍ನಲ್ಲಿ ಪಾಠ ಆರಂಭಿಸುವಂತೆ ಎಲ್ಲ ಕಾಲೇಜು ಪ್ರಾಧ್ಯಾಪಕರಿಗೂ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ಗಮನ ನೀಡಲು ಆದ್ಯತೆ ನೀಡುವಂತೆಯೂ ತಿಳಿಸಲಾಗಿದೆ ಎಂದರು.

ಇದನ್ನೂ ಓದಿ | ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಮೇ 12ರಿಂದ ಆನ್‍ಲೈನ್ ಪಾಠ; ಲಾಕ್‍ಡೌನ್ ನಂತರ ಸ್ನಾತಕೋತ್ತರ ಪದವಿ ಪರೀಕ್ಷೆ: ಪ್ರೊ.ಹಲಸೆ 

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಸಿಗದೆ ಆನ್‍ಲೈನ್ ತರಗತಿಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಪರ್ಯಾಯ ವ್ಯವಸ್ಥೆಗೂ ಆದ್ಯತೆ ನೀಡಬೇಕು. ಕೆಲವು ಕಾಲೇಜುಗಳಲ್ಲಿ ಆನ್‍ಲೈನ್‍ನಲ್ಲೂ ಪಾಠ ನಡೆಸುತ್ತಿಲ್ಲ. ಕಳೆದ ವರ್ಷ ಶೇ. 50ರಷ್ಟೂ ಪಾಠವನ್ನು ಹೇಳದೆ ಪರೀಕ್ಷೆ ನಡೆಸಲಾಯಿತು. ಇದರಿಂದ ಶಿಕ್ಷಣಕ್ಕೆ ಅಡ್ಡಿಯಾಯಿತು ಎಂದು ವಿದ್ಯಾರ್ಥಿಗಳು ಕುಲಪತಿ ಅವರಿಗೆ ದೂರು ನೀಡಿದರು.

ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿದ ಕುಲಪತಿ ಪ್ರೊ. ಹಲಸೆ ಅವರು, ಕಳೆದ ಬಾರಿಯೂ ಕಡ್ಡಾಯವಾಗಿ ಪಾಠ ಮಾಡುವಂತೆ ಸೂಚಿಸಲಾಗಿತ್ತು. ಆಗಿರುವ ಲೋಪದ ಬಗ್ಗೆ ವಿಚಾರಣೆ ನಡೆಸಲಾಗುವುದು. ಈ ಬಾರಿ ಅದು ಮುಂದುವರಿಯಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ. ಆನ್‍ಲೈನ್ ಅಲ್ಲದೆ ಲಾಕ್‍ಡೌನ್ ನಂತರ ಭೌತಿಕವಾಗಿಯೂ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅರ್ಥೈಸುವಂತೆ ಮಾಡಲಾಗುವುದು. ಜೊತೆಗೆ ಪಠ್ಯಪೂರಕ ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳ ಪೋರ್ಟಲ್‍ಗೆ ಒದಗಿಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version