ದಿನದ ಸುದ್ದಿ
ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿ; ಪ್ರತಿಪಕ್ಷಗಳ 19 ಸದಸ್ಯರ ಅಮಾನತು
ಸುದ್ದಿದಿನ ಡೆಸ್ಕ್ : ರಾಜ್ಯಸಭೆಯಲ್ಲಿ ನಿಯಮಾವಳಿ ಉಲ್ಲಂಘಿಸಿ ಅನುಚಿತವಾಗಿ ನಡೆದುಕೊಂಡ 19 ಪ್ರತಿಪಕ್ಷಗಳ ಸದಸ್ಯರನ್ನು ಈ ವಾರದ ಅಂತ್ಯದವರೆಗೆ ಕಲಾಪದಿಂದ ಅಮಾನತುಗೊಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್‌ನ 7, ಡಿಎಂಕೆಯ ಮೂವರು, ಟಿಆರ್‌ಎಸ್‌ನ ಮೂವರು, ಸಿಪಿಎಂನ ಇಬ್ಬರು ಹಾಗೂ ಸಿಪಿಐನ ಒಬ್ಬ ಸದಸ್ಯರು ಇವರಲ್ಲಿ ಸೇರಿದ್ದಾರೆ. ದೋಲಾಸೇನ್, ಸುಶ್ಮಿತಾ ದೇವ್, ಡಾಕ್ಟರ್ ಸಂತಾನು ಸೇನ್, ಮೌಸಂ ನೂರ್, ಮಹಮದ್ ಅಬ್ದುಲ್ಲಾ, ಎಸ್. ಕಲ್ಯಾಣಸುಂದರಮ್, ಡಾಕ್ಟರ್ ಕನಿಮೌಳಿ ಸೋಮು, ವಿ.ಶಿವದಾಸನ್, ಸಂತೋಷ್ ಕುಮಾರ್ ಹಾಗೂ ಲಿಂಗಯ್ಯ ಯಾದವ್ ಅಮಾನತುಗೊಂಡ ಸದಸ್ಯರಲ್ಲಿ ಸೇರಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆ ಮರು ಸಮಾವೇಶಗೊಂಡಾಗ ತೃಣಮೂಲ ಕಾಂಗ್ರೆಸ್, ಆಮ್‌ಆದ್ಮಿ ಪಕ್ಷ, ಎಡಪಕ್ಷಗಳು, ಡಿಎಂಕೆ ಹಾಗೂ ಇತರೆ ಪಕ್ಷಗಳ ಸದಸ್ಯರು ಸಭಾಪತಿಗಳ ಮುಂದಿನ ಅಂಗಳಕ್ಕೆ ಇಳಿದು, ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಉಪಸಭಾಪತಿ ಹರಿವಂಶ್, ಸದನದಲ್ಲಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಪದೆ ಪದೇ ಮನವಿ ಮಾಡಿಕೊಂಡರೂ ಪ್ರತಿಭಟನಾನಿರತ ಸದಸ್ಯರು ಕಿವಿಗೊಡಲಿಲ್ಲ. ಕಲಾಪವನ್ನು ನಿರಂತವಾಗಿ ಅಡ್ಡಿಪಡಿಸುತ್ತಿರುವ ಸದಸ್ಯರ ವಿರುದ್ಧ ನಿಯಮ 256 ರಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಆದರೆ, ಪ್ರತಿಭಟನಾನಿರತ ಸದಸ್ಯರು ಗದ್ದಲ, ಕೋಲಾಹಲ ಮುಂದುವರಿದಾಗ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್, ಪೀಠಕ್ಕೆ ಅಗೌರವ ತೋರಿಸಿ, ಅನುಚಿತವಾಗಿ ವರ್ತಿಸುತ್ತಿರುವ ಸದಸ್ಯರನ್ನು ಅಮಾನತುಗೊಳಿಸಲು ನಿಯಮ 256ರ ಅಡಿ ಗೊತ್ತುವಳಿಯನ್ನು ಮಂಡಿಸಿದರು.
ಗೊತ್ತುವಳಿಯನ್ನು ಸದನ ಧ್ವನಿಮತದಿಂದ ಅಂಗೀಕರಿಸಿತು. ಉಪಸಭಾಪತಿ ಪದೆ ಪದೇ ಮನವಿ ಮಾಡಿಕೊಂಡರೂ ಅಮಾನತುಗೊಂಡ ಸದಸ್ಯರು ಸದನದಿಂದ ಹೊರ ನಡೆಯಲು ನಿರಾಕರಿಸಿದಾಗ ಮೊದಲು 2 ಬಾರಿ, ನಂತರ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಲಾಯಿತು.
ಭೋಜನ ಅವಧಿಗೆ ಮುನ್ನ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ, ಗುಜರಾತ್ ಕಳ್ಳಭಟ್ಟಿ ದುರಂತ ಹಾಗೂ ಇತರ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ, ಗದ್ದಲ ನಿರ್ಮಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಲಾಗಿತ್ತು. 12.30 ಕ್ಕೆ ಮರು ಸಮಾವೇಶಗೊಂಡಾಗ ಆಮ್ ಆದ್ಮಿ ಪಕ್ಷ, ಡಿಎಂಕೆ, ಎಡಪಕ್ಷ, ಟಿಎಂಸಿ ಸೇರಿದಂತೆ ಇತರ ಪಕ್ಷಗಳ ಸದಸ್ಯರು ಸಭಾಪತಿಗಳ ಮುಂದಿನ ಅಂಗಳಕ್ಕೆ ಇಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇಡೀ ದೇಶ ಸದನದ ಕಲಾಪವನ್ನು ವೀಕ್ಷಿಸುತ್ತಿದೆ. ಹಾಗಾಗಿ ಸದಸ್ಯರು ತಮ್ಮ ಆಸನಗಳಿಗೆ ಮರಳಿ ಕಲಾಪ ನಡೆಸಲು ಸಹಕರಿಸಬೇಕು ಎಂದು ಉಪ ಸಭಾಪತಿ ಹರಿವಂಶ್ ಹಲವು ಬಾರಿ ಮನವಿ ಮಾಡಿಕೊಂಡರು.
ಈ ಗದ್ದಲಗಳ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಫಲಕ ಪ್ರದರ್ಶಿಸಿ, ಕಲಾಪ ಅಡ್ಡಿಪಡಿಸುವ ಸದಸ್ಯರ ವಿರುದ್ಧ ನಿಯಮ 256ರಂತೆ ಕ್ರಮ ಜರುಗಿಸುವುದಾಗಿ ಉಪಸಭಾಪತಿ ಎಚ್ಚರಿಕೆ ನೀಡಿದರು.
ಇಂದು ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ನಿಯಮ 267ರಡಿ ಪ್ರತಿಪಕ್ಷಗಳ ಸದಸ್ಯರು ಮಂಡಿಸಿದ ನಿಲುವಳಿ ಸೂಚನೆಗಳನ್ನು ಸಭಾಪತಿ ಎಂ. ವೆಂಕಯ್ಯನಾಯ್ಡು ತಿರಸ್ಕರಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಎದುರಿನ ಅಂಗಳಕ್ಕೆ ಇಳಿದು ಗುಜರಾತ್‌ನಲ್ಲಿ ನಡೆದ ಕಳ್ಳಭಟ್ಟಿ ದುರಂತ ಕುರಿತ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದರು. ಈ ನಡುವೆ, ಸಭಾಪತಿ ಅವರು ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಿದರು. ಇದಕ್ಕೂ ಮುನ್ನ ಕಾರ್ಗಿಲ್ ವಿಜಯ್ ದಿನದ ೨೩ನೇ ವರ್ಷಾಚರಣೆ ಅಂಗವಾಗಿ ಹುತಾತ್ಮ ಮತ್ತು ಧೈರ್ಯಶಾಲಿ ಯೋಧರಿಗೆ ಸದನ ಗೌರವ ನಮನ ಸಲ್ಲಿಸಿದರು.
ಸಚಿವ ಪಿಯೂಷ್ ಗೋಯಲ್ ಹೇಳಿದ್ದು
ರಾಜ್ಯಸಭೆಯಲ್ಲಿ ಈ ವಾರ 19 ಪ್ರತಿಪಕ್ಷ ಸದಸ್ಯರ ಅಮಾನತುಗೊಳಿಸುವ ನಿರ್ಧಾರವನ್ನು ಭಾರವಾದ ಹೃದಯದಿಂದ ಕೈಗೊಳ್ಳಲಾಗಿದೆ ಎಂದು ಮೇಲ್ಮನೆಯ ಸಭಾನಾಯಕರೂ ಆಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಭಾಪತಿಗಳ ಪೀಠದ ಮನವಿಗಳನ್ನು ನಿರ್ಲಕ್ಷಿಸಿದ ಹಾಗೂ ರಾಜ್ಯಸಭೆಯ ಕಲಾಪವನ್ನು ನಿರಂತರವಾಗಿ ಅಡ್ಡಿಪಡಿಸಿದ್ದಕ್ಕಾಗಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು ಸಂಸತ್ತಿಗೆ ಮರಳಿದ ನಂತರ ಬೆಲೆ ಏರಿಕೆ ವಿಷಯ ಕುರಿತಂತೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಸುಗಮವಾಗಿ ಕಲಾಪ ನಡೆಸಲು ಸಹಕರಿಸುವಂತೆ ಪ್ರತಿಪಕ್ಷ ಸದಸ್ಯರಿಗೆ ಮತ್ತೊಮ್ಮೆ ಮನವಿ ಮಾಡಿಕೊಂಡರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243