ದಿನದ ಸುದ್ದಿ
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಇದೇ 15ರಿಂದ ಉಚಿತ ಬೂಸ್ಟರ್ ಲಸಿಕೆ ವಿತರಣೆ : ಕೇಂದ್ರ ಸಂಪುಟ ತೀರ್ಮಾನ
ಸುದ್ದಿದಿನ ಡೆಸ್ಕ್ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ’ಆಜಾದಿ ಕಾ ಅಮೃತ್ ಕಾಲ್’ ಅಂಗವಾಗಿ ಇದೇ 15 ಶುಕ್ರವಾರದಿಂದ 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
75ದಿನಗಳ ಕಾಲ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಉಚಿತವಾಗಿ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಅವರು ಹೇಳಿದರು. ಇದರ ಜತೆಗೆ ವಡೋದರದಲ್ಲಿ ಗತಿಶಕ್ತಿ ವಿಶ್ವವಿದ್ಯಾಲಯ ಸ್ಥಾಪನೆ, ಭಾರತೀಯ ರೈಲು ನ್ಯಾಷನಲ್ ಅಕಡೆಮಿಯನ್ನು ಆರಂಭಿಸಲು ಸಂಪುಟ ಸಮ್ಮತಿಸಿತು ಎಂದು ಅವರು ಹೇಳಿದರು.
ಗುಜರಾತ್ ಹಾಗೂ ರಾಜಸ್ಥಾನ ಸಂಪರ್ಕಿಸುವ ತರಂಗ-ಹಿಲ್-ಅಂಬಾಜಿ-ಅಬು ನೂತನ ರೈಲು ಮಾರ್ಗ ಹಾಗೂ ಆಧುನೀಕರಣಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. 2 ಸಾವಿರದ 798 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಅವರು 116ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಾಣದಿಂದ ಸುಮಾರು 40 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.
2026-27ರ ಒಳಗಾಗಿ ಈ ರೈಲು ಮಾರ್ಗ ಪೂರ್ಣಗೊಳ್ಳಲಿದ್ದು ಅಂಬಾಜಿ ಶಕ್ತಿ ಪೀಠ ಮತ್ತು ಅಂಜತಾ ಜೈನ್ ದೇವಾಲಯ ಸಂಪರ್ಕಿಸುವ ಮಾರ್ಗ ಇದಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243