ದಿನದ ಸುದ್ದಿ
ಕಿಸಾನ್ ಕ್ರೆಡಿಟ್ ಕಾರ್ಡ್ ಸದ್ಬಳಕೆಗೆ ಜಿಲ್ಲಾಧಿಕಾರಿಗಳ ಸಲಹೆ
ಸುದ್ದಿದಿನ,ಧಾರವಾಡ : ಏ.24 ರಂದು ಪಂಚಾಯತ್ ರಾಜ್ ದಿನದ ಅಂಗವಾಗಿ “ಕಿಸಾನ್ ಭಾಗೇಧಾರಿ ಪ್ರಾಥಮಿಕತಾ ಹಮಾರಿ” ಎಂಬ ಅಭಿಯಾನಕ್ಕೆ ಪ್ರಧಾನಮಂತ್ರಿಯವರು ದೇಶದಾದ್ಯಂತ ಚಾಲನೆ ನೀಡುವರು.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ಈವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಸೌಲಭ್ಯಗಳನ್ನು ಪಡೆಯದಿರುವವರು, ಮೇ.1 ರೊಳಗೆ ಅರ್ಜಿ ಸಲ್ಲಿಸಿ ರೈತಸ್ನೇಹಿ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಿ ಎಮ್ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಫಲಾನುಭವಿಗಳು, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆಸಾಲ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಕುಕ್ಕುಟೋದ್ಯಮಕ್ಕೆ ಸಾಲ ಸೌಲಭ್ಯ ಪಡೆಯಬಹುದು. ಅರ್ಹ ರೈತರು ತಮ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಮೂಲಕ ಸಾಲದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮೇ.1 ರೊಳಗೆ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಇವರೆಗೆ ಕೃಷಿ ಸಾಲ ಪಡೆಯದೆ ಇದ್ದವರು ಕೃಷಿಸಾಲವನ್ನು ಹತ್ತಿರದ ಬ್ಯಾಂಕ್ ಗಳಲ್ಲಿ ಪಡೆದು ಕೊಳ್ಳುವುದರ ಜೊತೆಗೆ ಪ್ರಧಾನಮಂತ್ರಿಗಳ ಸಾಮಾಜಿಕ ಸುರಕ್ಷಾ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ,ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಅಟಲ್ ಪಿಂಚಣಿ ಯೋಜನೆಗಳಿಗೂ ಕೂಡಾ ಹೊಸದಾಗಿ ಸೇರ್ಪಡೆಗೊಳ್ಳಬಹುದು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಹೆಚ್ಚಿನ ವಿವರಗಳಿಗೆ ಹತ್ತಿರದ ಗ್ರಾಮ ಪಂಚಾಯತಿ, ರಾಷ್ಟ್ರೀಕೃತ, ಗ್ರಾಮೀಣ, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳನ್ನು ಕೂಡ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243