ದಿನದ ಸುದ್ದಿ

ಶಾಮನೂರು ಶಿವಶಂಕರಪ್ಪ ಒಂದು ಕುಟುಂಬ, ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್‌ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ : ಡಿಸಿಎಂ ಡಿ.ಕೆ.ಶಿವಕುಮಾರ್

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ವ್ಯಾಪ್ತಿಯ ಸುಮಾರು ₹1350 ಕೋಟಿ ರೂ. ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.

ದಾವಣಗೆರೆಯಲ್ಲಿ ನಡೆದ ಇಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಉತ್ಸುಕದಿಂದ ಭಾಗಿಯಾಗಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ 6 ಶಾಸಕರು ಮತ್ತು ಒಬ್ಬ ಸಂಸದರನ್ನು ಆಯ್ಕೆ ಮಾಡಿ, ನಿಮ್ಮ ಸೇವೆಗೆ ಅವಕಾಶವನ್ನು ಮಾಡಿಕೊಟ್ಟಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದರು.

ನಿಮ್ಮೆಲ್ಲರ ಶಕ್ತಿಯಿಂದಾಗಿ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಇಡೀ ದೇಶಕ್ಕೆ ಸಂದೇಶವನ್ನು ಕಳುಹಿಸಿರುವುದು ನಮ್ಮ ಪುಣ್ಯ. ಬೆಲೆಯೇರಿಕೆಯಿಂದ ತತ್ತರಿಸಿದ ಸಾವಿರಾರು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯ ಮೂಲಕ ನೆರವಾಗುತ್ತಿದ್ದೇವೆ. ಹಲವು ವರ್ಷಗಳಿಂದ ದಾಖಲೆ ಇಲ್ಲದೇ ಅಲೆಯುತ್ತಿದ್ದವರಿಗೆ ‘ಭೂ ಗ್ಯಾರಂಟಿ’ ಯೋಜನೆ ಕೊಟ್ಟಿದ್ದೇವೆ. ಕಂದಾಯ ಇಲಾಖೆ ಮೂಲಕ ದರಖಾಸ್ತು ಪೋಡಿ ವಿತರಣೆ ಮಾಡಿದ್ದೇವೆ. ಈ ಹಿಂದೆ ಯಾವುದೇ ಸರ್ಕಾರವು ಇಂತಹ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆಯೋ ಆ ಸಂದರ್ಭದಲ್ಲಿ ಬಡವರ ಬದುಕು ಬದಲಾಯಿಸುವ ಕಾರ್ಯಕ್ರಮವನ್ನು ರೂಪಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ನಮ್ಮ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಮತ್ತು ಅವರ ಕುಟುಂಬ ಒಂದು ವ್ಯಕ್ತಿ ಅಲ್ಲ, ಇಡೀ ಕಾಂಗ್ರೆಸ್‌ ಪಕ್ಷಕ್ಕೆ ಒಂದು ದೊಡ್ಡ ಶಕ್ತಿ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ನಾನು ಬಂದಾಗ ಯಾರು ಸಹಾಯ ಮಾಡುವವರು ಇರಲಿಲ್ಲ. ಬಿಜೆಪಿ ಸರ್ಕಾರವಿದ್ದರೂ ಸಹಾಯ ಮಾಡಲಿಲ್ಲ. ಆಗ ಅವರು 10 ಕೋಟಿ ರೂ. ಹಣವನ್ನು ಕೊಟ್ಟು ಲಸಿಕೆಯನ್ನು ದಾವಣಗೆರೆ ಜನರಿಗಾಗಿ ಹಂಚಿ ಮಾನವೀಯತೆ ಮೆರೆದಿದ್ದರು. ಅಂತಹ ಹೃದಯ ಶ್ರೀಮಂತಿಕೆ ಇರುವವರು ನಮ್ಮ ಶಾಮನೂರು ಶಿವಶಂಕರಪ್ಪನವರು. ಇಂದು ಅವರ 95ನೇ ಜನ್ಮೋತ್ಸವ ಸಂಭ್ರಮ ಆಚರಿಸಿದ್ದೇವೆ. ಅಂದಿನಿಂದ ಇಂದಿನವರೆಗೆ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರು ಹಲವು ಕ್ಷೇತ್ರದಲ್ಲಿ ಸಾಧನೆಗೈದು ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿಯನ್ನು ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version