ಬಹಿರಂಗ
ದಲಿತರ ಆಂದೋಲನಕ್ಕಾಗಿ ‘ಅಂಬೇಡ್ಕರ್’
ದಲಿತರ ಆಂದೋಲನಕ್ಕಾಗಿ ನಿಲ್ಲುವ ‘ ಅಂಬೇಡ್ಕರ್’ರನ್ನು ದುರ್ದೈವವಶಾತ್ ಅವರ ಸುತ್ತ ಆವರಿಸಿರುವ ಪಂಥವಾದೀ ದೃಷ್ಟಿಕೋನಗಳಿಂದ ದೂರ ಮಾಡಬೇಕಾಗುತ್ತದೆ. ಮುಖ್ಯವಾಗಿ ಅಂಬೇಡ್ಕರರು ಒಬ್ಬ ಮೂರ್ತಿಭಂಜಕರಾಗಿದ್ದರು.
ಆದ್ದರಿಂದ ಪಂಥವಾದಿ ದೃಷ್ಟಿಕೋನದ ಮೂರ್ತಿಗಳನ್ನು ಒಡೆಯಲು ನಮಗೆ ಅವರೇ ಸ್ಪೂರ್ತಿ ನೀಡಬೇಕು. ಪ್ರತಿಗಾಮಿಗಳು ಹಾಗೂ ಸ್ವಹಿತಾಸಕ್ತಿಯ ಜನರು ಸೃಷ್ಟಿಸಿರುವ ಮೂರ್ತಿಗಳನ್ನು ಇಂದು ದಲಿತರು ನಿರ್ನಾಮ ಮಾಡಬೇಕಾಗಿದೆ. ಅಂಬೇಡ್ಕರರ ಪುನರ್ ವ್ಯಾಖ್ಯಾನದ ಯೋಜನೆಯು ಕೊಪ್ಪಲುಗಳಿಗೆ ತರಬೇಕಾಗಿದೆ. ಅವರು ನಿಜವಾಗಿಯೂ ಸಲ್ಲುವ ಗ್ರಾಮಾಂತರದ ದಲಿತ ಜನಕೋಟಿಯೆಡೆಗೆ ಅವರನ್ನು ತಿರುಗಿ ಒಯ್ಯಬೇಕಾಗಿದೆ.
ಅಂಬೇಡ್ಕರರ ಒಂದು ಮಹಾನ್ ಗುಣವೆಂದರೆ, ಅವರ ಅಸಂಪ್ರದಾಯಿಕ ನಿಲುವು, ಕರ್ಮಠತನ, ಕಂದಾಚಾರಗಳ ಬಗ್ಗೆ ಅವರಲ್ಲಿದ್ದ ತಿರಸ್ಕಾರದ ಭಾವ. ಯಾರೋ ಅಧಿಕಾರವಾಣಿಯಿಂದ ಹೇಳಿದ್ದಾರೆಂದು ಅವರು ಎಂದೂ, ಯಾವುದನ್ನೂ ಸ್ವೀಕರಿಸಿಲ್ಲ, ಎಲ್ಲಾ ತರದ ಮೋಸ ವಂಚನೆ ತಟವಟ ಕಂಡರೆ ಅವರು ಕಿಡಿಕಾರುತ್ತಿದ್ದರು.
ಯಾವುದೇ ಸಮಸ್ಯೆ ಇರಲಿ, ಅದನ್ನು ಒಬ್ಬ ವಿದ್ಯಾರ್ಥಿಯ ನಿಷ್ಠೆ ಮತ್ತು ಸಂಶೋಧಕನ ಬೌದ್ಧಿಕ ಪ್ರಾಮಾಣಿಕತೆಯಿಂದ ಕೈಗೆತ್ತಿಕೊಳ್ಳುತ್ತಿದ್ದರು. ಸಿದ್ಧಾಂತಗಳು ಕಾಲ-ದೇಶಬದ್ಧವಾಗಿರುತ್ತವೆ ಎಂಬ ದೃಷ್ಟಿ ಅವರದಾಗಿತ್ತು. ಯಾವುದೂ ಚಿರವಲ್ಲ ; ನಿತ್ಯ ಸತ್ಯವಲ್ಲ. ಆದ್ದರಿಂದ ಯಾರೋಬ್ಬರೂ ತನ್ನ ಕಾಲದ ಆಚೆಗೆ ತಮ್ಮ ಪ್ರಸ್ತುತೆಯನ್ನು ಬಯಸಬಾರದು, ನಿರೀಕ್ಷಿಸಲೂ ಬಾರದು-ಎಂಬ ನಿಲುವು ಅವರದು. ಆದ್ದರಿಂದ ಅವರ ಮುಕ್ತತೆಯಿಂದ, ಬದಲಾಗುತ್ತಿರುವ ಈ ಕಾಲದ ತಮ್ಮ ಅನುಭವಗಳಿಗೆ ಅನುಗುಣವಾಗಿ ಚಿಂತಿಸಬೇಕು.
ಈ ದೃಷ್ಟಿಯಿಂದ ನಾವು ಕೆಲವು ಸಂಗತಿಗಳನ್ನು ನೋಡಲು ಇಲ್ಲಿ ಚರ್ಚಿಸಬೇಕಾಗಿದೆ. ಅವುಗಳ ಬಗ್ಗೆ ನಮಗೆ ಲಭಿಸುವ ಸ್ಪಷ್ಟತೆ ನಮ್ಮ ಚಿಂತನೆಯ ಕೆಲಸಕ್ಕೆ ಸಾರ್ಥಕ ಕಾಣಿಕೆ ನೀಡಬಲ್ಲದು.
(ಮುಂದುವರಿಯುವುದು)
–ಮೂಲ, ಇಂಗ್ಲಿಷ್ : ಆನಂದ ತೇಲ್ ತುಂಬ್ಡೆ
ಕನ್ನಡಕ್ಕೆ : ರಾಹು
ಸುದ್ದಿದಿನ.ಕಾಂ|ವಾಟ್ಸಾಪ್|9986715401