ಲೋಕಾರೂಢಿ

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಒಳ ಮೀಸಲಾತಿ

Published

on

ನ್ಯಾ.ಸದಾಶಿವ ವರದಿಯು ಪರಿಶಿಷ್ಟ ಜಾತಿಗಳ ಒಳಗೆ ಮೀಸಲಾತಿ ವರ್ಗೀಕರಣ ಮಾಡಬೇಕು ಎನ್ನುತ್ತದೆ. ಪರಿಶಿಷ್ಟರಲ್ಲೇ ಇರುವ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳ ನಡುವೆ ಹಾಗೂ ಎಡಗೈ ಬಲಗೈ ಪಂಗಡಗಳ ನಡುವೆ ಈ ವರ್ಗೀಕರಣ ನಡೆಯಬೇಕು ಎನ್ನುತ್ತದೆ. ಇದನ್ನು ಕೆಲವರು ಅವೈಜ್ಞಾನಿಕ ಎನ್ನುತ್ತಿದ್ದಾರೆ. ಅವರೇನೇ ಹೇಳಲಿ ಇಂತಗ ಸಂದರ್ಭದಲ್ಲಿ ನಮಗೆ ಬೆಳಕು ನೀಡಬಲ್ಲ ಚಿಂತನೆ ಬಾಬಾಸಾಹೇಬ್ ಅಂಬೇಡ್ಕರ್ ಅವರದ್ದು. ಅವರು ಸ್ಪೃಶ್ಯತೆ ಮತ್ತು ಅಸ್ಪೃಶ್ಯತೆಗಳು ಸಾಮಾಜಿಕ ಬದುಕಿನಲ್ಲಿ ಉಂಟು ಮಾಡುವ ಪರಿಣಾಮದ ಬಗ್ಗೆ ಆಳವಾಗಿ ಚಿಂತಿಸಿದವರು, ಬರೆದವರು.

ಅಂಬೇಡ್ಕರ್ ಅವರು ಅಸ್ಪೃಶ್ಯತೆ ಎಂಬ ಭಾರತದ ಜಾತಿ ವ್ಯವಸ್ಥೆಯಲ್ಲಿನ ಸಾಮಾಜಿಕ ಪದ್ಧತಿ ರೋಮ್ ನಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ವ್ಯವಸ್ಥೆಗಿಂತಲೂ ಕ್ರೂರ ಎನ್ನುತ್ತಾರೆ. “ಮುಕ್ತಸಮಾಜ ಅಲ್ಲದ ಗುಲಾಮಗಿರಿಯಲ್ಲಾದರೋ ಗುಲಾಮನು ತನ್ನ ಒಡೆಯನ ಆಸ್ತಿಯಾಗಿದ್ದ. ಈ ಕಾರಣದಿಂದ ಗುಲಾಮಿ ಒಡೆಯನು ತನ್ನ ಗುಲಾಮನ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಿದ್ದ. ಅವನನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ರೋಮ್ ನಲ್ಲಿ ಗುಲಾಮರನ್ನು ಮಲೇರಿಯಾ ಪೀಡಿತ ಸ್ಥಳಗಳಿಗೆ ಒಡೆಯರು ಕಳಿಸುತ್ತಿರಲಿಲ್ಲ. ಅಂತಹ ಕಡೆ ಗುಲಾಮರಲ್ಲದ ಮುಕ್ತ ಜನರೇ ಕೆಲಸ ಮಾಡುತ್ತಿದ್ದರು” ಎಂದು ಹೇಳುವ ಅಂಬೇಡ್ಕರ್ ಭಾರತದಲ್ಲಿ ಅಸ್ಪೃಶ್ಯತೆಯನ್ನು ಆ ಗುಲಾಮಗಿರಿಗೆ ಹೋಲಿಸಿ ಹೀಗೆ ಹೇಳುತ್ತಾರೆ.

“ಮೇಲೆ ಹೇಳಿದ ಮುಕ್ತವಲ್ಲದ ಗುಲಾಮಿ ವ್ಯವಸ್ಥೆಯಲ್ಲಿ ಗುಲಾಮರಿಗೆ ಇದ್ದ ಯಾವ ಅನುಕೂಲತೆಗಳೂ ಅಸ್ಪೃಶ್ಯತೆಯ ವ್ಯವಸ್ಥೆಯಲ್ಲಿ ಇಲ್ಲ. ಇಲ್ಲಿ ಅಸ್ಪೃಶ್ಯ ಎನಿಸಿಕೊಂಡ ವ್ಯಕ್ತಿಗೆ ನಾಗರಿಕತೆಯ ಉನ್ನತ ಕಲೆಗಳಲ್ಲಿ ಪ್ರವೇಶವಿಲ್ಲ ಹಾಗೂ ಸಂಸ್ಕೃತಿಯ ಬದುಕಿನ ಪರ್ಯಾವರಣಕ್ಕೆ ಅವನಿಗೆ ದಾರಿಯನ್ನು ಮುಚ್ಚಲಾಗಿರುತ್ತದೆ. ಅವನು ಕೇವಲ ಕಸ ಹೊಡೆಯುವ ಕೆಲಸ ಮಾತ್ರ ಮಾಡಬೇಕಿರುತ್ತದೆ. ಬೇರೆ ಯಾವುದನ್ನೂ ಅವನು ಮಾಡುವಂತಿಲ್ಲ. ಅವನ ಜೀವನೋಪಾಯಕ್ಕೆ ಯಾವ ಭದ್ರತೆಯನ್ನೂ ಅಸ್ಪೃಶ್ಯತೆ ಕಲ್ಪಿಸುವುದಿಲ್ಲ. ಒಬ್ಬ ಅಸ್ಪೃಶ್ಯನ ಹೊಟ್ಟೆ, ಬಟ್ಟೆ ವಸತಿಯ ಹೊಣೆಯನ್ನು ಯಾವೊಬ್ಬ ಹಿಂದೂವೂ ಹೊರುವುದಿಲ್ಲ. ಅಸ್ಪೃಶ್ಯನ ಆರೋಗ್ಯದ ಕಾಳಜಿಯೂ ಯಾರಿಗಿರುವುದಿಲ್ಲ. ವಾಸ್ತವವಾಗಿ ಅಸ್ಪೃಶ್ಯ ಒಬ್ಬ ಸತ್ತರೆ ಶುಭಸೂಚಕ ಎಂದೇ ಬಗೆಯಲಾಗುತ್ತದೆ. ಈ ಬಗ್ಗೆ, “ ಹೊಲೆಮಾದಿಗ ಸತ್ತ, ಮೈಲಿಗೆಯೂ ಹೋಯ್ತು” ಎಂಬ ಹಿಂದೂ ನಾಣ್ಣುಡಿಯೇ ಚಾಲ್ತಿಯಲ್ಲಿದೆ. ಹೀಗೆ ಮುಕ್ತವಲ್ಲದ ಗುಲಾಮಿ ವ್ಯವಸ್ಥೆಯ ಅನುಕೂಲತೆ ಇಲ್ಲದಿರುವುದು ಒಂದು ಕಡೆಯಾದರೆ ಅಸ್ಪೃಶ್ಯರಾದವರಿಗೆ ಮತ್ತೊಂದೆಡೆಯಲ್ಲಿ ಒಂದು ಮುಕ್ತ ಸಮಾಜ ವ್ಯವಸ್ಥೆಯ ಅನನುಕೂಲತೆಗಳೆಲ್ಲವೂ ಬಾಧಿಸುತ್ತವೆ. ಅದೇನೆಂದರೆ ಮುಕ್ತ ಸಮಾಜ ವ್ಯವಸ್ಥೆಯಲ್ಲಿ ಉಳಿವಿಗಾಗಿನ ಹೋರಾಟದಲ್ಲಿ ಬದುಕುಳಿಯುವ ಹೊಣೆ ಆಯಾ ವ್ಯಕ್ತಿಯದೇ ಆಗಿರುತ್ತದೆ. ಇದು ಮುಕ್ತ ಸಮಾಜ ವ್ಯವಸ್ಥೆಯ ಒಂದು ಅತಿದೊಡ್ಡ ಅನನುಕೂಲತೆ. ಇಂತಾ ಒಂದು ಹೊಣೆಯನ್ನು ಒಬ್ಬ ವ್ಯಕ್ತಿ ನಿಭಾಯಿಸಬಲ್ಲನೇ ಎಂಬುದು ಒಂದು ನ್ಯಾಯಯುತ ಆರಂಭ (fair start), ಸಮಾನ ಅವಕಾಶ ಮತ್ತು ನ್ಯಾಯವಾದ ವ್ಯವಹಾರ ಈ ಮೂರರ ಮೇಲೆ ನಿಂತಿರುತ್ತದೆ.

ಒಬ್ಬ ಅಸ್ಪೃಶ್ಯ ತಾನು ಮುಕ್ತ ಸಮಾಜದ ವ್ಯಕ್ತಿಯಾಗಿ ನ್ಯಾಯಯುತ ಆರಂಭವನ್ನೂ ಪಡೆದಿರುವುದಿಲ್ಲ, ಸಮಾನ ಅವಕಾಶವನ್ನೂ ಪಡೆದಿರುವುದಿಲ್ಲ ಹಾಗೂ ನ್ಯಾಯವಾದ ವ್ಯವಹಾರವನ್ನೂ ಪಡೆಯುವುದಿಲ್ಲ. ಈ ದೃಷ್ಟಿಯಿಂದ ಅಸ್ಪೃಶ್ಯತೆ ಎನ್ನುವುದು ಗುಲಾಮೀ ವ್ಯವಸ್ಥೆಗಿಂತಲೂ ಕಡೆ ಮಾತ್ರವಲ್ಲ ಗುಲಾಮಗಿರಿಗೆ ಹೋಲಿಸಿದಾಗ ನಿಸ್ಸಂದೇಹವಾಗಿ ಗುಲಾಮಿ ವ್ಯವಸ್ಥೆಗಿಂತ ಕ್ರೂರವಾದುದು. ಗುಲಾಮಗಿರಿಯಲ್ಲಾದರೋ ಒಡೆಯನಾದವನಿಗೆ ತನ್ನ ಗುಲಾಮನಿಗೆ ಕೆಲಸ ನೀಡುವ ಬಾಧ್ಯತೆಯಿರುತ್ತದೆ. ಮುಕ್ತ ಶ್ರಮದ ವ್ಯವಸ್ಥೆಯಲ್ಲಿ ಶ್ರಮಿಕರು ತಾವು ಕೆಲಸ ಪಡೆಯಲು ಇತರೆ ಶ್ರಮಿಕರೊಂದಿಗೆ ಪೈಪೋಟಿಗಿಳಿಯಬೇಕಾಗುತ್ತದೆ.ಉದ್ಯೋಗಾವಕಾಶಕ್ಕಾಗಿನ ಈ ಹಪಾಹಪಿಕೆಯಲ್ಲಿ ಅಸ್ಪೃಶ್ಯನೊಬ್ಬ ನ್ಯಾಯ ಪಡೆಯುವ ಅವಕಾಶವಾದರೂ ಎಲ್ಲಿರುತ್ತದೆ? ಸಂಕ್ಷಿಪ್ತವಾಗಿ ಹೇಳುವುದಾದರೆ ತನಗಿರುವ ಸಾಮಾಜಿಕ ಕಳಂಕದ ಕಾರಣದಿಂದ ಯಾವಾಗಲೂ ತನ್ನ ವಿರುದ್ಧವೇ ತೂಗುವ ನ್ಯಾಯದ ತಕ್ಕಡಿಯಲ್ಲಿ ಅಸ್ಪೃಶ್ಯ ಉದ್ಯೋಗ ಪಡೆಯುವಲ್ಲಿ ಕೊನೆಯವನೂ ಆಗಿರುತ್ತಾನೆ ಹಾಗೂ ಕೆಲಸದಿಂದ ಕಿತ್ತೆಸೆಯಲ್ಪಡುವಾಗ ಅವನೇ ಮೊದಲಿಗನಾಗಿರುತ್ತಾನೆ. ಅಸ್ಪೃಶ್ಯತೆ ಗುಲಾಮೀ ವ್ಯವಸ್ಥೆಗಿಂತ ಕ್ರೂರವೇಕೆಂದರೆ ಅಸ್ಪೃಶ್ಯನಿಗೆ ತನ್ನ ಜೀವನ ನಿರ್ವಹಣೆಗೆ ಬೇಕಾದ ಅವಕಾಶಗಳಿಗೆ ಮುಕ್ತ ಪ್ರವೇಶವನ್ನೇ ತೆರೆಯದೇ ಇದ್ದಾಗಲೂ ತನ್ನ ಬದುಕು ಉಳಿಸಿಕೊಳ್ಳುವ ಹೊಣೆಯನ್ನು ಅವನ ಮೇಲೆಯೇ
ಹೊರಿಸುತ್ತದೆ” (Ambedkar Volume 5)
ಬಾಬಾಸಾಹೇಬರ ಈ ಮಾತುಗಳನ್ನು ನೋಡಿದಾಗ ಅಸ್ಪೃಶ್ಯತೆಯ ಕರಾಳತೆ ಎಂತಹುದು ಎಂಬುದು ತಿಳಿಯುವ ಜೊತೆಗೆ ಶಿಕ್ಷಣ, ಉದ್ಯೋಗ ಇತ್ಯಾದಿ ಅವಕಾಶಗಳ ವಿಷಯದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಒಟ್ಡಿಗೇ ಪೈಪೋಟಿಗೆ ಬಿಡುವುದು ಅನ್ಯಾಯ ಮಾತ್ರವಲ್ಲ ಸಾಮಾಜಿಕ ಕ್ರೌರ್ಯ ಎಂಬುದೂ ತಿಳಿಯುತ್ತದೆ.

ಈಗ ಪರಿಶಿಷ್ಟರ ಮೀಸಲಾತಿ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವುದು ಇದೇ ಸಾಮಾಜಿಕ ಕ್ರೌರ್ಯ. ಇದನ್ನು ಅರ್ಥ ಮಾಡಿಕೊಂಡೇ ಜಸ್ಟೀಸ್ ಸದಾಶಿವ ವರದಿಯಾಗಲೀ ಆಂದ್ರದ ಜಸ್ಟೀಸ್ ಉಷಾ ಮೆಹ್ರಾ ಸಮಿತಿಯ ವರದಿಯಾಗಲೀ ದಲಿತರಿಗೆ ಒಳ ಮೀಸಲಾತಿಗೆ ಕ್ರಮವಾಗಿ ಕರ್ನಾಟಕ ಸರ್ಕಾರ ಮತ್ತು ಕೆಂದ್ರ ಸರ್ಕಾಗಳಿಗೆ ಶಿಫಾರಸು ನೀಡಿರುವುದು. ಉಷಾ ಮೆಹ್ರಾ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಈ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಸಂವಿಧಾನದ 341 ನೇ ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕೆಂದು ತಿಳಿಸಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಒಪ್ಪಿಕೊಂಡು, ಕೂಡಲೇ ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸು ಕಳಿಸಬೇಕು, ಹಾಗೆಯೇ ಕೇಂದ್ರ ಸರ್ಕಾರ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು.

– ಹರ್ಷಕುಮಾರ್ ಕುಗ್ವೆ
ಪತ್ರಕರ್ತ, ಉಡುಪಿ

Trending

Exit mobile version