ನೆಲದನಿ

ಕಾನ್ಷೀರಾಮ್ ಜೀಯವರು ಕಂಡ ‘ಬುದ್ಧ ಭಾರತದ ಕನಸು’..!?

Published

on

  • ರಘೋತ್ತಮ ಹೊ.ಬ

ಹುಜನ ಸಮಾಜ ನಿರ್ಮಿಸಿ ಶೋಷಿತ ಸಮುದಾಯಗಳನ್ನು ಆಳುವ ವರ್ಗವಾಗಿಸುವ ನಿಟ್ಟಿನಲ್ಲಿ ತಮ್ಮ ಜೀವನ ಪೂರ್ತಿ ತ್ಯಾಗ ಮಾಡಿದ ಮಾನ್ಯವರ್ ಕಾನ್ಷೀರಾಮ್ ಜೀಯವರು ಬರೀ ರಾಜಕೀಯ ಅಧಿಕಾರವನ್ನಷ್ಟೆ ಪ್ರತಿಪಾದಿಸಿದ್ದರು ಎಂದು ಅನೇಕರು ತಪ್ಪು ಗ್ರಹಿಕೆ ಹೊಂದಿದ್ದಾರೆ.

ಆದರೆ ವಾಸ್ತವವೆಂದರೆ 2003 ಮಾರ್ಚ್ 15 ರಂದು ಮುಂಬಯಿಯ ಶಿವಾಜಿ ಪಾರ್ಕ್ ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಕಾನ್ಷೀರಾಮ್ ಜೀಯವರು “ಬರುವ 2006 ಅಕ್ಟೋಬರ್ 14 ರಂದು ಅಂದರೆ ಧಮ್ಮಚಕ್ರ ಪ್ರವರ್ತನ ದಿನದ ಸುವರ್ಣಯುಗ ಮಹೋತ್ಸವದಂದು ತಾನು 3 ಕೋಟಿ ಜನರ ಜೊತೆ ಬೌದ್ಧ ಧರ್ಮ ಸ್ವೀಕರಿಸುವುದಾಗಿ” ಘೋಷಿಸುತ್ತಾರೆ.

(1956 ಅಕ್ಟೋಬರ್14 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದರು. ಅದರ 50 ನೇ ವರ್ಷಾಚರಣೆ ಅಂದರೆ ಸುವರ್ಣ ಮಹೋತ್ಸವ 2006 ಅಕ್ಟೋಬರ್ 14 ಅಗಿತ್ತು).

ದುರಂತವೆಂದರೆ ಅನಾರೋಗ್ಯದ ಕಾರಣದಿಂದ ಕಾನ್ಷೀರಾಮ್ ಜೀ ಯವರಿಗೆ ತಮ್ಮ ಆ ಆಸೆ ಪೂರೈಸಲು ಆಗಲಿಲ್ಲ. 2006 ಅಕ್ಟೋಬರ್ 9 ರಂದು ಅಂದರೆ ಧರ್ಮಚಕ್ರ ಪ್ರವರ್ತನ ದಿನದ ಸುವರ್ಣ ಮಹೋತ್ಸವದ ಐದು ದಿನಕ್ಕೆ ಮೊದಲು ಅವರು ನಿಧನರಾಗುತ್ತಾರೆ.

ಅಂದಹಾಗೆ ನಿಧನರಾದರೂ ಮೂಲತಃ ಸಿಖ್ ಧರ್ಮಕ್ಕೆ ಸೇರಿದ ಚಮ್ಮಾರ್ ಸಮುದಾಯದವರಾದ ಕಾನ್ಷೀರಾಮ್ ಜೀಯವರ ಶವಸಂಸ್ಕಾರದ ಅಂತಿಮ ವಿಧಿವಿಧಾನಗಳನ್ನು ಅವರ ಆ ಆಶಯದ ಪ್ರಕಾರವೇ ಬೌದ್ಧ ಧರ್ಮದ ಅನುಸಾರ ಮಾಡಲಾಗುತ್ತದೆ.

ಆ ಮೂಲಕ ಕಾನ್ಷೀರಾಮ್ ಜೀಯವರ ಚೇತನಕ್ಕೆ ಬಾಬಾಸಾಹೇಬರಂತೆ ಅಭೂತಪೂರ್ವ ಬೌದ್ಧ ಗೌರವ ಸಲ್ಲಲ್ಪಡುತ್ತದೆ. ಪ್ರಶ್ನೆ ಏನೆಂದರೆ ಕಾನ್ಷೀರಾಮ್ ಜೀಯವರು ಅಂದು ಅಂದರೆ 2003 ಮಾರ್ಚ್ 15 ರಂದು ಹೇಳಿದ್ದಂತೆ 3 ಕೋಟಿ ಜನರ ನಡುವೆ ಬೌದ್ಧ ಧರ್ಮ ಸ್ವೀಕರಿಸುವ ಅವರ ಆಸೆಯ ಆ ಘಟನೆ ನಡೆದಿದ್ದಿದ್ದರೆ?

ಖಂಡಿತ ಅದು 1956 ಅಕ್ಟೋಬರ್ 14 ರ ನಂತರದ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನ ಕಾರ್ಯಕ್ರಮವಾಗಿರುತ್ತಿತ್ತು. ಬಾಬಾಸಾಹೇಬರು ಆಶಿಸಿದ ಧರ್ಮಚಕ್ರದ ಚಲಿಸುವಿಕೆ ಮತ್ತೂ ವೇಗ ಪಡೆದುಕೊಳ್ಳುತ್ತಿತ್ತು.

ಈ ನಿಟ್ಟಿನಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು. ಬರೀ ರಾಜಕೀಯ ಅಧಿಕಾರದ ಜಪವಷ್ಟೆ ಬಹುಜನ ಚಳುವಳಿಯ ಉದ್ದೇಶವಲ್ಲ. ಬದಲಿಗೆ ಬೌದ್ಧ ಧರ್ಮ ಸೇರುವುದು ಸೇರಿದಂತೆ ಶೋಷಿತ ಸಮುದಾಯಗಳ ಸಮಗ್ರ ವಿಮೋಚನೆ ಅದರ ಆಶಯ ಎಂಬುದನ್ನು.

ಹಾಗೆಯೇ ಬಹುಜನ ಚಳುವಳಿಯ ಕೆಲ‌ ಚಿಂತಕರು ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ಅಂತಿಮ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಆದ್ದರಿಂದ ನಾವೂ ಸಹ…. ಎನ್ನುತ್ತಾರೆ. ಆದರೆ ವಾಸ್ತವವೆಂದರೆ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಬಾಬಾಸಾಹೇಬ್ ಅಂಬೇಡ್ಕರರು ತಾನು ಇಷ್ಟು ತಡವಾಗಿ ಬೌದ್ಧ ಧರ್ಮ ಸ್ವೀಕರಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ.

ಮತ್ತು ಈ ಕೆಲಸವನ್ನು ತಾನು ಮೊದಲೇ ಮಾಡಬೇಕಿತ್ತು ಎನ್ನುತ್ತಾರೆ. ಹಾಗೆಯೇ 3 ಕೋಟಿ ಜನರ ನಡುವೆ ಬೌದ್ಧ ಧರ್ಮ ಸ್ವೀಕರಿಸುವೆ ಎಂದ ಕಾನ್ಷೀರಾಮ್ ಜೀಯವರ ಆಸೆ ಕೂಡ ಪೂರೈಸಲ್ಪಡದಿದ್ದುದನ್ನು ನಾವು ಇಲ್ಲಿ ಗಮನಿಸಬಹುದು.

ಆದ್ದರಿಂದ ತಳ ಸಮುದಾಯಗಳು ತಡ ಮಾಡದೆ ತಮ್ಮ ರಾಜಕೀಯ ಆಸೆ ಆಕಾಂಕ್ಷೆ ಚಟುವಟಿಕೆ ಗಳ ನಡುವೆ ಬೌದ್ಧ ಧರ್ಮ ಸ್ವೀಕರಿಸಲಿ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ದಾದಾಸಾಹೇಬ್ ಕಾನ್ಷೀರಾಮ್ ಜೀಯವರ ಬುದ್ಧ ಭಾರತದ ಕನಸನ್ನು ನನಸು ಮಾಡಲಿ, ಪ್ರಬುದ್ಧ ಭಾರತದ ನಿರ್ಮಾಣ ದ ದಿಕ್ಕಿನಲ್ಲಿ ದೃಢ ಹೆಜ್ಜೆ ಇಡಲಿ ಎಂಬುದೇ ಸದ್ಯದ ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version