ಬಹಿರಂಗ
ಆದಿವಾಸಿ ಬುಡಕಟ್ಟು ಜನಾಂಗ ಅಪರಾಧಿಗಳಾಗಿ ಬದುಕುತ್ತಿವೆ ; ಇದನ್ನು ಕಂಡು ಹಿಂದೂ ಜನಾಂಗ ನಾಚಿಕೆಯಿಲ್ಲದೆ ಬದುಕುತ್ತಿದೆ : ಡಾ.ಬಿ.ಆರ್.ಅಂಬೇಡ್ಕರ್ ರ ಈ ಬರಹ ಓದಿ
ಸಮಾಜದಲ್ಲಿ ಗಣನೆಗೆ ತೆಗೆದುಕೊಂಡಿರದ ಅಥವಾ ಆಂಶಿಕವಾಗಿ ಮಾತ್ರ ಬಳಸಿಕೊಂಡಿರುವ ಪ್ರದೇಶದ ಬಗ್ಗೆ ಇತ್ತೀಚೆಗೆ ನಡೆದಿರುವ ಚರ್ಚೆಯಿಂದ ಭಾರತದಲ್ಲಿರುವ ಮೂಲನಿವಾಸಿ ಬುಡಕಟ್ಟುಗಳ ಬಗೆಗೆ ಜನರ ಗಮನ ಹರಿದಿದೆ . ಈ ಜನರ ಸಂಖ್ಯೆ ಸುಮಾರು ಲಕ್ಷವಿದೆ . ಹೊಸ ಸಂವಿಧಾನದಲಿ ಈ ಜನರನ್ನು ಸೇರಿಸದೆ ಬಿಟ್ಟಿರುವುದು ಸರಿಯೋ ತಪ್ಪೋ ,ಆ ಮಾತು ಹಾಗಿರಲಿ . ಸಹಸ್ರಾರು ವರ್ಷಗಳ ನಾಗರಿಕತೆಯುಳ್ಳದ್ದೆಂದು ಜಂಬ ಕೊಚ್ಚಿಕೊಳ್ಳುವ ದೇಶದಲ್ಲಿಯೇ ಈ ಆದಿವಾಸಿ ಬುಡಕಟ್ಟುಗಳ ಜನರು ತಮ್ಮ ಪ್ರಾಚೀನ ಪದ್ದತಿಯ ಅನಾಗರಿಕ ಅವಸ್ಥೆಯಲ್ಲಿ ಬದುಕುತ್ತಾ ಬಂದಿದ್ದಾರೆಂಬುದು ವಸ್ತುಸ್ಥಿತಿ.
ಇವರು ಅನಾಗರಿಕರಾಗಿ ಉಳಿದಿರುವುದಷ್ಟೇ ಅಲ್ಲ , ಇವರಲ್ಲಿ ಕೆಲವರು ಪರಂಪರಾಗತವಾಗಿ ನಡೆಸುವ ವ್ಯವಹಾರಗಳ ಮೂಲಕ ಅಪರಾಧಿಗಳೆಂದೂ ಪರಿಗಣಿತರಾಗಿದ್ದಾರೆ . ನಾಗರಿಕ ದೇಶದಲ್ಲಿ 13 ದಶಲಕ್ಷ ಜನರು ಅನಾಗರಿಕರಾಗಿ , ವಂಶಪರಂಪರೆಯ ಅಪರಾಧಿಗಳಾಗಿ ಬದುಕುತ್ತಿದ್ದಾರೆಂದರೆ ಏನರ್ಥ ? ಇದನ್ನು ಕಂಡು ಹಿಂದೂಗಳಿಗೆ ಎಂದೂ ನಾಚಿಕೆಯಾಗಲಿಲ್ಲ . ಇಂತಹ ವಿಚಿತ್ರ ಘಟನೆ ಬೇರೆಲ್ಲಿಯೂ ಕಾಣಲಾಗದು . ಆದರೆ ಈ ಲಜ್ಜಾಸ್ಪದವಾದ ವಸ್ತುಸ್ಥಿತಿಗೆ ಕಾರಣವೇನು ? ಈ ಆದಿವಾಸಿ ಬುಡಕಟ್ಟುಗಳ ಜನರಿಗೆ ನಾಗರಿಕತೆಯನ್ನು ಒದಗಿಸಿ , ಗೌರವಾಸದವಾದ ರೀತಿಯಲ್ಲಿ ಅವರು ಬದುಕುವಂತೆ ಯಾಕೆ ಪ್ರಯತ್ನ ನಡೆಯಲಿಲ್ಲ ? ಈ ಜನರ ಅನಾಗರಿಕ ಅವಸ್ಥೆಗೆ ಅವರ ಅನುವಂಶಿಕ ಮೂರ್ಖತನವೇ ಕಾರಣವೆಂದು ಬಹುಶಃ ಹಿಂದೂಗಳು ಹೇಳಬಹುದು.
ಈ ದುರ್ದೈವಿಗಳಿಗೆ ನಾಗರಿಕತೆಯನ್ನು ಒದಗಿಸಬೇಕಾಗಿತ್ತು. ಇದನ್ನೆಲ್ಲ ತಾವೇ ಮಾಡಬೇಕಾಗಿದ್ದು , ಮಾಡದೇ ಹೋದೆವು ಎಂದು ಹಿಂದೂಗಳು ಬಹುಶಃ ಒಪ್ಪಿಕೊಳ್ಳಲಿಕ್ಕಿಲ್ಲ. ಈಗ ಕ್ರೈಸ್ತ ಧರ್ಮ ಪ್ರಚಾರಕರು ಈ ಜನರಿಗಾಗಿ ಏನು ಮಾಡುತ್ತಿರುವರೋ ಅದನ್ನು ಒಬ್ಬ ಹಿಂದೂವೂ ಮಾಡಬಯಸುವನೆಂದು ಭಾವಿಸೋಣ . ಅವನಿಂದ ಹಾಗೆ ಮಾಡುವುದು ಸಾಧ್ಯವೇ ? ಅಸಾಧ್ಯವೆಂದೇ ನಾನು ಹೇಳುತ್ತೇನೆ . ಪ್ರಾಚೀನ ಪದ್ದತಿಯ ಕಾಡು ಜನರನ್ನು ನಾಗರಿಕರಾಗಿ ಪರಿವರ್ತಿಸಬೇಕೆಂದರೆ ಏನು ಮಾಡಬೇಕು ? ಅವರನ್ನು ನಿಮ್ಮವರೆಂದು ಒಪ್ಪಿ ಒಳಸೇರಿಸಿಕೊಳ್ಳಬೇಕು . ಅವರ ಮಧ್ಯದಲ್ಲಿ ಬದುಕಬೇಕು.
ಭ್ರಾತೃತ್ವ ಭಾವನೆಯನ್ನು ಬೆಳಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ , ಅವರನ್ನು ಪ್ರೀತಿಸಬೇಕು. ಹಿಂದೂವಿಗೆ ಇದು ಹೇಗೆ ಸಾಧ್ಯ ? ತನ್ನ ಜಾತಿಯನ್ನು ಕಾಪಾಡಿಕೊಳ್ಳುವುದಕ್ಕೆ ಅವನು ಇಡೀ ಜೀವಮಾನವನ್ನು ಮುಡಿಪಾಗಿಡುತ್ತಾನೆ . ಶತಾಯಗತಾಯ ರಕ್ಷಿಸುಕೊಳ್ಳಲೇಬೇಕಾದ ಅನರ್ಥ್ಯ ಆಸ್ತಿಯಾಗಿದೆ ಅವನ ಜಾತಿ . ವೈದಿಕ ಕಾಲದಲ್ಲಿ ಅನಾರ್ಯರೆನಿಸಿಕೊಂಡವರ ವಂಶದಲ್ಲಿ ಹುಟ್ಟಿ ಬಂದಿರುವ ಈ ಅನಾಗರಿಕರೊಡನೆ ಸಂಪರ್ಕ ಬೆಳೆಸಿದರೆ ತನ್ನ ಜಾತಿ ಕೆಟ್ಟುಹೋದೀತೆಂದು ಅವನು ದೂರವೇ ಉಳಿಯುತ್ತಾನೆ . ಪತಿತರನ್ನು ಉದ್ದರಿಸುವ ಮಾನವೀಯ ಕರ್ತವ್ಯಕ್ಕೆ ಹಿಂದೂವೂ ಸಿದ್ಧನಾಗಲಾರನೆಂದಲ್ಲ . ಆದರೆ ತನ್ನ ಜಾತಿ ರಕ್ಷಣೆಯನ್ನು ಮೀರಿ ಅವನ ಮಾನವೀಯ ಕರ್ತವ್ಯಬುದ್ದಿ ಕೆಲಸ ಮಾಡಲಾರದು.
ಈ ಆದಿವಾಸಿಗಳು ಅನಾಗರಿಕ ಸ್ಥಿತಿಯಲ್ಲಿ ಉಳಿಯಲು ಹಿಂದೂವಿನ ಜಾತಿಯೊಂದೇ ಕಾರಣ . ತಮ್ಮ ನಾಗರಿಕತೆಯ ಮಧ್ಯದಲ್ಲಿ ಇವರನ್ನು ಅನಾಗರಿಕ ಸ್ಥಿತಿಯಲ್ಲಿಡಲು ಹಿಂದೂಗಳಿಗೆ ನಾಚಿಕೆಯಾಗಲೀ , ಪಶ್ಚಾತ್ತಾಪವಾಗಲೀ ಇಲ್ಲವೇ ಇಲ್ಲ . ಹಿಂದೂಗಳಿಗೆ ಈ ಆದಿವಾಸಿಗಳ ಅನಾಗರಿಕ ಜನಸಮುದಾಯ ಯಾವತ್ತೂ ಅಪಾಯಕಾರಿ ಎಂದು ಕಂಡುಬಂದಿಲ್ಲ . ವರನು ತನ್ನೊಳಗೆ ಸೇರಿಸಿಕೊಂಡ ಪಕ್ಷದಲ್ಲಿ ಹಿಂದೂಗಳ ಶತ್ರುಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ . ಹಾಗೇನಾದರೂ ನಡೆದುಹೋದರೆ ಆ ದುರ್ದೈವಕ್ಕೆ ಹಿಂದೂವೇ ಹೊಣೆ , ಅವನ ಜಾತಿಪದ್ಧತಿಯೇ ಹೊಣೆ .
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401