ಬಹಿರಂಗ

ಜಾತಿ ವ್ಯವಸ್ಥೆ ಮತ್ತು ಭಾಷಾವಾರು ‌ಪ್ರಾಂತ್ಯ : ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಿಷ್ಟು..!

Published

on

ಜಾತಿ ವ್ಯವಸ್ಥೆಯ ಕೆಲವು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಪಂಜಾಬದ ಪೆಪ್ಪುದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಜಾಟರು ಎಲ್ಲ ಕಡೆಗೆ ಪ್ರಬಲ ಇದ್ದಾರೆ. ಹರಿಜನರು ಜಾಟರ ಅಧೀನರಾಗಿದ್ದು, ಅವರನ್ನು ಅವಲಂಬಿಸಿರುತ್ತಾರೆ.

ಆಂಧ್ರದ ಉದಾಹರಣೆ ತೆಗೆದುಕೊಳ್ಳಿ. ಈ ಭಾಷಾವಾರು ಪ್ರದೇಶದಲ್ಲಿ ಎರಡು – ಮೂರು ಪ್ರಮುಖ ಜಾತಿಗಳಿರುತ್ತವೆ. ಒಂದೊಂದು ಭಾಗದಲ್ಲಿ ಒಂದೊಂದು ಪ್ರಮುಖ ಇರುತ್ತವೆ. ರೆಡ್ಡಿ, ಕಮ್ಮ ಇಲ್ಲವೆ ಕಾಮ ಜಾತಿಯವರು. ಎಲ್ಲ ಭೂಮಿ, ಎಲ್ಲ ಕಾರ್ಯಾಲಯ, ಎಲ್ಲಿ ವ್ಯಾಪಾರವನ್ನು ಇವರೇ ಹಿಡಿದಿರುತ್ತಾರೆ. ಎಲ್ಲ ಹರಿಜನರು ಅವರ ಅಧೀನರಾಗಿದ್ದು, ಅವರನ್ನು ಅವಲಂಬಿಸಿ ಜೀವಿಸುತ್ತಾರೆ. ಮಹಾರಾಷ್ಟ್ರದ ಉದಾಹರಣೆ ತೆಗೆದುಕೊಳ್ಳಿ, ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಯಲ್ಲಿ ಮರಾಠರು ಅಧಿಕ ಸಂಖ್ಯೆಯಲ್ಲಿರುತ್ತಾರೆ.

ಬ್ರಾಹ್ಮಣರು, ಗುಜಾರರು, ಕೋಳಿಗಳು ಮತ್ತು ಹರಿಜನರು ಮರಾಠರಿಗೆ ಅಧೀನರಾಗಿದ್ದು, ಅವರೊಂದಿಗೆ ಸಹಕರಿಸುತ್ತಾರೆ ಬ್ರಾಹ್ಮಣರು ಮತ್ತು ಬನಿಯಾರು ಯಾರ ಭೀತಿಯೂ ಇರದೆ ಜೀವಿಸುತ್ತಿದ್ದ ಕಾಲವೊಂದಿತ್ತು. ಆದರೆ ಕಾಲ ಬದಲಾಗಿರುತ್ತದೆ. ಗಾಂಧೀಜಿಯ ಹತ್ಯೆಯಾದ ಬಳಿಕ ಮರಾಠರು ಬ್ರಾಹ್ಮಣ ಮತ್ತು ಬನಿಯಾರನ್ನು ಚೆನ್ನಾಗಿ ಥಳಿಸಿದ ಪರಿಣಾಮವಾಗಿ, ಸುರಕ್ಷಿತ ಸ್ಥಳಗಳೆಂದು ಪಟ್ಟಣ ಸೇರಿದ್ದಾರೆ. ಬಡ ಹರಿಜನರು ಮತ್ತು ಕೋಳಿಗಳು ಮತ್ತು ಮಾಲಿಗಳು ಮಾತ್ರ ಬಹುಸಂಖ್ಯೆಯ ಮರಾಠರ ಪೀಡೆಯನ್ನು ಅನುಭವಿಸುತ್ತ ಅಲ್ಲೇ ಉಳಿದಿದ್ದಾರೆ.

ಈ ಜಾತಿ ವ್ಯವಸ್ಥೆಯನ್ನು ಮರೆಯುವುದು ಅಪಾಯಕರ. ಭಾಷಾವಾರು ಪ್ರಾಂತದಲ್ಲಿ ಅಲ್ಪಸಂಖ್ಯಾತರ ಸಮಾಜಗಳಿಗೆ ಯಾವ ಭವಿಷ್ಯ ಇರುತ್ತದೆ ? ( ವಿಧಾನ ಸಭೆ ಮತ್ತು ಲೋಕ ಸಭೆಗಳಿಗೆ ಶಾಸಕಾಂಗಕ್ಕೆ ಚುನಾಯಿತರಾಗುವ ಸಾಧ್ಯತೆ ಇರುತ್ತದೆಯೆ ? ರಾಜ್ಯ ಸರಕಾರದ ಸೇವೆಯಲ್ಲಿ ಸ್ಥಳ ದೊರಕಿಸಲು ಅವರಿಗೆ ಶಕ್ಯವಿರುತ್ತದೆಯೆ ? ಅವರ ಆರ್ಥಿಕ ಸ್ಥಿತಿ ಸುಧಾರಿಸುವುದರ ಕಡೆಗೆ ಸರಕಾರದ ಗಮನ ಹರಿಯುವುದೆಂದು ನಿರೀಕ್ಷಿಸಬಹುದೆ ? ಇಂಥ ಸ್ಥಿತಿಯಲ್ಲಿ, ಭಾಷಾವಾರು ಪ್ರಾಂತಗಳನ್ನು ನಿರ್ಮಿಸುವುದೆಂದರೆ ಬಹುಸಂಖ್ಯೆಯ ಸಮಾಜದವರ ಕೈಗೆ ಸ್ವರಾಜ್ಯವನ್ನು ಕೊಡುವುದೆಂದು ಅರ್ಥ, ಗಾಂಧೀಜಿ ಅವರು ದೊರಕಿಸಿದ ಸ್ವರಾಜ್ಯಕ್ಕೆ ಎಂಥ ದುರ್ದೆಶೆ ? ಸಮಸ್ಯೆಯ ಈ ಮುಖಕಾಣಿಸದಿದ್ದವರಿಗೆ, ಭಾಷಾವಾರು ಪ್ರಾಂತದ ಬದಲು ಜಾಟ ಪ್ರಾಂತ, ರೆಡ್ಡಿ ಪ್ರಾಂತ, ಮರಾಠ ಪ್ರಾಂತ ಎಂದರೆ ಹೆಚ್ಚು ಅರ್ಥವಾಗುತ್ತದೆ.

ಗಮನಾರ್ಹ ಮೂರನೆಯ ಸಮಸ್ಯೆ ಎಂದರೆ – ಭಾಷಾವಾರು ಪ್ರಾಂತ ರಚಿಸುವುದೆಂದರೆ ಒಂದು ಭಾಷೆಯನ್ನು ಆಡುವ ಜನರನ್ನೆಲ್ಲ ಒಂದೇ ರಾಜ್ಯದಲ್ಲಿ ಸಂಘಟಿಸುವುದೇ ಆಗಿದೆ. ಮರಾಠರನ್ನೆಲ್ಲ ಒಂದೇ ಮಹಾರಾಷ್ಟ್ರದಲ್ಲಿ ಕೂಡಿಸಬೇಕೆ ? ಆಂಧ್ರಪ್ರದೇಶವನ್ನೆಲ್ಲ ಒಂದೇ ಆಂಧ್ರ ರಾಜ್ಯದಲ್ಲಿ ಸೇರಿಸಬೇಕೆ ? ಒಂದು ಭಾಷೆ ಆಡುವವರನ್ನು ಒಂದೆಡೆ ಸೇರಿಸುವ ಸಮಸ್ಯೆ ಹೊಸರಾಜ್ಯಗಳಿಗಷ್ಟೇ ಸಂಬಂಧಿಸಿದುದಲ್ಲ.ಈಗ ಅಸ್ತಿತ್ವದಲ್ಲಿರುವ ಭಾಷಾವಾರು ಪ್ರಾಂತಗಳಾದ ಉತ್ತರ ಪ್ರದೇಶ , ಬಿಹಾರ ಮತ್ತು ಪಶ್ಚಿಮ ಬಂಗಾಳಗಳಿಗೂ ಸಂಬಂಧಿಸಿರುತ್ತದೆ. ಹಿಂದೀ ಮಾತನಾಡುವವರನ್ನೆಲ್ಲ ಉತ್ತರ ಪ್ರದೇಶದಲ್ಲಿರುವಂತೆ ಒಂದೇ ಪ್ರಾಂತದಲ್ಲಿ ಏಕೆ ಸೇರಿಸಬೇಕು.

ಮೌಲ್ಯ ಚಕ್ರಾಧಿಪತ್ಯದ ವಿಚ್ಛಿದ್ರತೆಯ ನಂತರ ಭರತಖಂಡದ ಪರಿಸ್ಥಿತಿ ಏನಾಯಿತೋ ಅದೇ ಪರಿಸ್ಥಿತಿ ಏಕತ್ರೀಕರಣದ ಫಲವಾಗಿ ಸಂಭವಿಸುವ ಪ್ರತ್ಯೇಕತಾ ಪ್ರಜ್ಞೆಯಿಂದ ಈ ರಾಷ್ಟ್ರಕ್ಕೊದಗುತ್ತದೆ. ವಿಧಿ ಈ ರಾಷ್ಟ್ರದ ಭವಿಷ್ಯವನ್ನು ಆ ಕಡೆಗೆ ನೂಕುತ್ತಿದೆಯೆ ? ಹಾಗೆಂದರೆ ಭಾಷಾವಾರು ಪ್ರಾಂತ ರಚನೆಗೆ ಸಮರ್ಥನೆ ಇಲ್ಲವೆಂದಲ್ಲ. ಭಾಷಾವಾರು ಪ್ರಾಂತದ ಹೆಸರಿನಲ್ಲಿ ಬಹುಸಂಖ್ಯಾತ ಜಾತಿಯವರಿಂದ ಅಧಿಕಾರದ ದುರುಪಯೋಗ ಆಗದಂತೆ ನಿರ್ಬಂಧ ಮತ್ತು ಸಮಯದಂಡಿಗಳು ಇರಬೇಕೆಂಬುದು ಇದರ ಅರ್ಥ.

ಡಾ.ಬಿ.ಆರ್. ಅಂಬೇಡ್ಕರ್
(ಬರಹಗಳ ಸಂಗ್ರಹದಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version