ಬಹಿರಂಗ
“ಕೆರೆಯ ನೀರು ಕುಡಿದರೆ ನಾವೇನೂ ಅಮರರಾಗುವುದಿಲ್ಲ” : ಡಾ.ಬಿ.ಆರ್. ಅಂಬೇಡ್ಕರ್
1927- ಮಹಾಡ್: ಶಾಂತಿಯುತ ಹೋರಾಟಕ್ಕೆ ಕರೆ
ಮಹಾಡ್ನ ಸವರ್ಣೀಯರು ಚೌಡರ್ ಕೆರೆಯ ನೀರನ್ನು ಅಸ್ಪೃಶ್ಯರು ಬಳಸದಂತೆ ನಿರ್ಬಂಧಿಸಿರುವುದು ಅಸ್ಪೃಶ್ಯರು ಮುಟ್ಟುವುದರಿಂದ ನೀರು ಅಪವಿತ್ರಗೊಳ್ಳುವುದೆಂದಾಗಲೀ, ನೀರು ಆವಿಯಾಗಿ ಮಾಯವಾಗಿಬಿಡುವುದೆಂದಾಗಲೀ ಅಲ್ಲ. ಪುರಾಣ ಗ್ರಂಥಗಳು ಯಾರನ್ನು ಕೀಳು ಎಂದು ಘೋಷಿಸಿವೆಯೋ ಅವರು ನೀರನ್ನು ಮುಟ್ಟಿ ನಾವೂ ನಿಮ್ಮ ಸಮಾನರು ಎಂದು ಘೋಷಿಸಿಕೊಳ್ಳುವುದು ಅವರಿಗಿಷ್ಟವಿಲ್ಲ.
ಸ್ನೇಹಿತರೆ, ಇಷ್ಟರಿಂದಲೇ ನಮ್ಮ ಹೋರಾಟದ ಮಹತ್ವ ಅರ್ಥವಾಗುತ್ತದೆ. ಮಹಾಡ್ ಸತ್ಯಾಗ್ರಹ ಸಮಿತಿ ನಿಮ್ಮನ್ನು ಕೆರೆಯ ನೀರು ಕುಡಿಯಲೆಂದು ಆಹ್ವಾನಿಸಿದೆ ಎಂದು ಭಾವಿಸಬೇಡಿ. ಕೆರೆಯ ನೀರು ಕುಡಿದರೆ ನಾವೇನೂ ಅಮರರಾಗುವುದಿಲ್ಲ. ಇದನ್ನು ಕುಡಿಯದೆಯೂ ಇಷ್ಟು ವರ್ಷ ಬದುಕಿದ್ದೇವೆ. ಚೌಡರ್ ಕೆರೆಗೆ ಅದರ ನೀರು ಕುಡಿಯಲೆಂದಷ್ಟೇ ಹೋಗುತ್ತಿರುವುದಲ್ಲ. ನಾವೂ ಸಹಾ ಉಳಿದವರಂತೇ ಮನುಷ್ಯರು ಎಂದು ಸಾಬೀತುಪಡಿಸಲು ಅಲ್ಲಿ ಹೋಗುತ್ತಿದ್ದೇವೆ. ಈ ಸಭೆಯನ್ನು ಸಮಾನತೆ ಆಶಯವನ್ನು ಕಟ್ಟಿಬೆಳೆಸುವ ಸಲುವಾಗಿ ಕರೆಯಲಾಗಿದೆ ಎಂದು ಸ್ಪಷ್ಟಪಡಿಸುತ್ತೇನೆ. ಭಾರತದ ಇತಿಹಾಸದಲ್ಲಿಯೇ ಎಂದೂ ಈ ರೀತಿಯ ಸಭೆ ನಡೆದಿಲ್ಲವೆಂದೇ ಭಾವಿಸಿದ್ದೇನೆ.
ಈ ಸಭೆಯನ್ನು ಹಿಂದೂ ಸಮಾಜವನ್ನು ಪುನರ್‌ವ್ಯವಸ್ಥೆಗೊಳಿಸುವ ದೃಷ್ಟಿಯಿಂದ ಕರೆಯಲಾಗಿದೆ. ಜಾತಿಹಿಡಿತದಲ್ಲಿ ಸಿಕ್ಕಿರುವ ಹಿಂದೂ ಸಮಾಜವನ್ನು ಆ ಚೌಕಟ್ಟಿನಿಂದ ಬಿಡಿಸಲು ಹೊಡೆದ ಮೊಳೆಗಳನ್ನು ಕಿತ್ತೆಳೆಯಬೇಕಾಗಿದೆ. ಅಂತರ್ಜಾತಿ ವಿವಾಹದಿಂದ ಹಿಡಿದು ಅಂತರ್ಜಾತಿ ಸಾಮಾಜಿಕ ನಿರ್ಬಂಧಗಳ ತನಕ ಎಲ್ಲ ಅಡ್ಡಗೋಡೆಗಳನ್ನು ಕಿತ್ತುಹಾಕಿ ಹಿಂದೂ ಸಮಾಜವೆಂದರೆ ಒಂದೇ ಜಾತಿಯೆಂಬಂತೆ ಮಾಡಬೇಕಾಗಿದೆ. ಹಾಗಲ್ಲದಿದ್ದರೆ ಅಸ್ಪೃಶ್ಯತೆಯ ನಿವಾರಣೆ ಸಾಧ್ಯವಿಲ್ಲ. ಸಮಾನತೆಯನ್ನು ತರುವುದೂ ಸಾಧ್ಯವಿಲ್ಲ.
ನೆನಪಿರಲಿ, ಸಾಮಾಜಿಕ ನಿರ್ಬಂಧ ಮತ್ತು ಅಂತರ್‌ಭೋಜನ ನಿರ್ಬಂಧಗಳು ಹೋಗಿಬಿಟ್ಟರೆ ಅಸ್ಪೃಶ್ಯತೆ ಮಾಯವಾಗುವುದಿಲ್ಲ. ಆ ಎರಡರಿಂದ ಬಿಡುಗಡೆ ಪಡೆದರೆ ಮನೆಯ ಹೊರಗಿನ ಅಸ್ಪೃಶ್ಯತೆ ಸ್ವಲ್ಪ ಮಟ್ಟಿಗೆ ಮಾಯವಾಗಬಹುದು. ಆದರೆ ಮನೆಯೊಳಗಿನ ಅಸ್ಪೃಶ್ಯತೆ ಹಾಗೇ ಉಳಿಯುತ್ತದೆ. ಮನೆಯೊಳಗೂ ಹೊರಗೂ ಅಸ್ಪೃಶ್ಯತೆಯನ್ನು ನಿವಾರಿಸಬೇಕಾಗಿದ್ದರೆ ಅಂತರ್ಜಾತಿ ವಿವಾಹ ನಿರ್ಬಂಧವನ್ನು ಮುರಿದುಹಾಕಬೇಕು. ಮತ್ಯಾವುದರಿಂದಲೂ ಇದನ್ನು ಸಾಧಿಸಲು ಸಾಧ್ಯವಿಲ್ಲ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅಂತರ್ಜಾತಿ ವಿವಾಹ ನಿರ್ಬಂಧ ಮುರಿಯುವುದರಿಂದ ನಿಜವಾದ ಸಮಾನತೆ ಹುಟ್ಟಬಹುದು. ಪ್ರತ್ಯೇಕತೆಯನ್ನು ಅದರ ಮೂಲದಲ್ಲೇ ನಾಶ ಮಾಡಿದರೆ ಉಳಿದದ್ದು ತಂತಾನೇ ನಾಶವಾಗಬಹುದು. ಅಂತರ್ಜಾತಿ ವಿವಾಹ ನಿಷೇಧ ಮುರಿಯುವ ಒಂದು ಕ್ರಿಯೆಯಿಂದ ಸಾಮಾಜಿಕ ನಿರ್ಬಂಧ, ನೀರಿನ ಬಳಕೆ ನಿರ್ಬಂಧ ಮತ್ತು ಅಂತರ್ಭೋಜನ ನಿರ್ಬಂಧಗಳನ್ನು ತಡೆಯಬಹುದು. ನನ್ನ ದೃಷ್ಟಿಯಲ್ಲಿ ಅಸ್ಪೃಶ್ಯತೆ ನಿಷೇಧಕ್ಕಿರುವ ನಿಜವಾದ ದಾರಿ ಅಂತರ್ಜಾತಿ ವಿವಾಹ. ಇದು ಸಮಾನತೆಯನ್ನು ತರಬಲ್ಲದು. ಮನೆಯಲ್ಲಿ ಅಂತರ್ಜಾತಿ ಮದುವೆಗಳನ್ನು ಪ್ರೋತ್ಸಾಹಿಸಬೇಕು; ಇಲ್ಲದಿದ್ದರೆ ಅಸ್ಪೃಶ್ಯತೆ ಬೇರು ಸಮೇತ ನಾಶವಾಗುವುದಿಲ್ಲ. ಆದರೆ ಈ ಕೆಲಸ ಶುರು ಮಾಡುವವರಾರು?
ಜಾತಿಪದ್ಧತಿ ಇರುವತನಕ ಬ್ರಾಹ್ಮಣರು ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾರೆ. ಯಾರೇ ಆದರೂ ತನ್ನ ಕೈಯಲ್ಲಿರುವ ಅಧಿಕಾರವನ್ನು ಸುಲಭದಲ್ಲಿ ಬಿಟ್ಟುಕೊಡಲಾರರು. ಶತಮಾನಗಳಿಂದ ಬ್ರಾಹ್ಮಣರು ಉಳಿದ ಜಾತಿಗಳ ಮೇಲೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಅದನ್ನು ಬಿಟ್ಟುಕೊಟ್ಟು ಉಳಿದವರೆಲ್ಲ ತನ್ನ ಸಮಾನರು ಎಂದು ಅವರೆಂದೂ ಹೇಳಲಾರರು. ಜಪಾನಿನ ಸಮುರಾಯ್‌ಗಳಂತೆ ಬ್ರಾಹ್ಮಣರು ದೇಶಭಕ್ತರಲ್ಲ. ಸಮುರಾಯ್‌ಗಳಂತೆ ಸಮಾನತೆಯನ್ನು ಆಧರಿಸಿದ ರಾಷ್ಟ್ರೀಯ ಸಮಗ್ರತೆಗಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ತ್ಯಾಗ ಮಾಡುವವರೂ ಅಲ್ಲ. ಅವರಷ್ಟೇ ಅಲ್ಲ, ಉಳಿದ ಹಿಂದೂ ಜಾತಿಗಳೂ ಈ ಕೆಲಸ ಕೈಗೆತ್ತಿಕೊಳ್ಳುವಂತೆ ಕಾಣುತ್ತಿಲ್ಲ.
ಆದ್ದರಿಂದ ಅಸ್ಪೃಶ್ಯತೆ ನಿವಾರಣೆ ಮತ್ತು ಸಮಾನತೆಯನ್ನು ನೆಲೆಗೊಳಿಸುವ ಕೆಲಸ ನಮ್ಮಿಂದಲೇ ಆಗಬೇಕಾಗಿದೆ. ಉಳಿದವರು ಇದನ್ನು ಮಾಡಲಾರರು. ಈ ಗುರಿಯನ್ನು ಸಾಧಿಸುವುದೇ ನಮ್ಮ ಬದುಕಿನ ಉದ್ದೇಶ ಎಂದು ಪ್ರಾಮಾಣಿಕವಾಗಿ ಭಾವಿಸಿದರೆ ಜೀವನಕ್ಕೆ ನಿಜವಾದ ಅರ್ಥ ಸಿಗುತ್ತದೆ. ನಮ್ಮನ್ನು ಕಾಯುತ್ತಿರುವ ಈ ಮೌಲ್ಯವನ್ನು ಸ್ವೀಕರಿಸೋಣ.
ನಮ್ಮ ಉನ್ನತಿಗಾಗಿ ಈ ಹೋರಾಟ. ಆದ್ದರಿಂದ ನಮ್ಮ ಏಳ್ಗೆಗೆ ತಡೆಯಾಗಿರುವ ಎಲ್ಲವನ್ನು ನಿವಾರಿಸಿ ಈ ಹೋರಾಟಕ್ಕೆ ತೊಡಗೋಣ. ಯಾವ ದಿಕ್ಕಿಗೇ ಹೋದರೂ ಅಸ್ಪೃಶ್ಯತೆ ಹೇಗೆ ನಮ್ಮ ಅಸ್ತಿತ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿದೆ ಎಂದು ನಮಗೆ ಚೆನ್ನಾಗಿ ತಿಳಿದಿದೆ. ಒಂದುಕಾಲದಲ್ಲಿ ನಮ್ಮ ಜನ ಸೈನ್ಯದ ನೆಪದಲ್ಲಿ ಒಂದಾಗಿದ್ದರು. ಅದೇ ಉದ್ಯೋಗವಾಗಿತ್ತು. ಅನ್ನದಾತನಾಗಿತ್ತು. ನಮ್ಮ ಜೊತೆಗಿದ್ದ ಬೇರೆ ವರ್ಗಗಳು ಈಗ ಸೈನ್ಯ, ಪೋಲಿಸ್, ನ್ಯಾಯಾಲಯ, ಕಚೇರಿ ಎಲ್ಲ ಕಡೆಯೂ ಜೀವನ ನಿರ್ವಹಣೆಯ ಉದ್ಯೋಗ ಗಳಿಸಿಕೊಂಡಿದ್ದರೆ ಅಸ್ಪೃಶ್ಯರನ್ನು ಮಾತ್ರ ಆ ಎಲ್ಲ ಕಡೆಯಿಂದ ಹೊರಗಿರಿಸಲಾಗಿದೆ.
ಕಾನೂನು ಈ ಉದ್ಯೋಗಗಳಿಂದ ನಮ್ಮನ್ನು ದೂರವಿಟ್ಟಿಲ್ಲ. ಅದನ್ನು ಕಾನೂನು ಅನುಮತಿಸಿದೆ. ಆದರೆ ನಮ್ಮನ್ನು ಉಳಿದ ಹಿಂದೂಗಳು ಅಸ್ಪೃಶ್ಯರನ್ನಾಗಿ, ಕೀಳಾಗಿ ಕಾಣುವುದರಿಂದ ಸರ್ಕಾರಿ ಕೆಲಸಗಳು ಸಿಗುತ್ತಿಲ್ಲ. ಯಾವುದೇ ವ್ಯಾಪಾರ ವ್ಯವಹಾರ ಶುರುಮಾಡಲಾಗುತ್ತಿಲ್ಲ. ವ್ಯಾಪಾರ ಶುರುವಿಗೆ ನಮ್ಮ ಬಳಿ ಮೂಲಧನವಿಲ್ಲ ಎಂದು ಒಪ್ಪಿಕೊಂಡರೂ ನಿಜವಾದ ಕಷ್ಟ ಇರುವುದು ಜನರು ನಮ್ಮನ್ನು ಅಸ್ಪೃಶ್ಯರೆಂದು ಪರಿಗಣಿಸಿ ನಮ್ಮಿಂದ ಸಾಮಾನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ.
ಒಟ್ಟಾರೆ ಹೇಳಬೇಕೆಂದರೆ ಅಸ್ಪೃಶ್ಯತೆ ಒಂದು ಸರಳ ವಿಷಯವಲ್ಲ. ನಮ್ಮ ಬಡತನ, ಕೀಳರಿಮೆ ಎಲ್ಲದರ ತಾಯಿ ಅದು. ನಮ್ಮ ಇಂದಿನ ಸ್ಥಿತಿಯ ಕಾರಣ ಅದು. ಅದರಿಂದ ಹೊರಬಂದು ಎದ್ದುನಿಲ್ಲಬೇಕಾದರೆ ನಾವು ಈ ಹೋರಾಟವನ್ನು ಕೈಗೆತ್ತಿಕೊಳ್ಳಲೇಬೇಕು. ಮತ್ಯಾವುದರಿಂದಲೂ ನಮಗೆ ರಕ್ಷಣೆಯಿಲ್ಲ. ಇದು ನಮ್ಮ ಲಾಭಕ್ಕಾಗಿ ಮಾತ್ರವಲ್ಲ, ಸಮಗ್ರ ದೇಶದ ಹಿತಕ್ಕಾಗಿ ನಾವು ಕೈಗೆತ್ತಿಕೊಳ್ಳಬೇಕಾಗಿರುವ ಕೆಲಸ.
ನಿಜವಾದ ಸಾಮಾಜಿಕ ಕ್ರಾಂತಿಗಾಗಿ ನಮ್ಮ ಪ್ರಯತ್ನ ಶುರುವಾಗಿದೆ. ಸಿಹಿಮಾತುಗಳಾಡಿ ನಮ್ಮನ್ನು ಸುಮ್ಮನಾಗಿಸಬಯಸುವವರ ಮಾತುಗಳಿಂದ ಯಾರೂ ಮೋಸ ಹೋಗದಿರಲಿ. ಧೃಢವಿಶ್ವಾಸವೊಂದೇ ಈ ಚಳುವಳಿಯ ಮೂಲಸೆಲೆ, ಅದನ್ನು ಮುನ್ನಡೆಸುವ ಶಕ್ತಿ. ಯಾರೂ ಇದನ್ನು ತಡೆಯಲಾರರು. ಇಂದು ಶುರುವಾಗಿರುವ ಸಾಮಾಜಿಕ ಕ್ರಾಂತಿ ಶಾಂತಿಯುತವಾಗಿ ತನ್ನ ಗುರಿ ಮುಟ್ಟಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಶಾಂತಿಯುತವಾಗಿ ಈ ಕ್ರಾಂತಿ ಮುಂದುವರೆಯುವುದು ಬಿಡುವುದು ನಮಗಿಂತ ಹೆಚ್ಚು ನಮ್ಮ ವಿರೋಧಿಗಳನ್ನವಲಂಬಿಸಿದೆ. ಹಿಂಸೆಯೋ, ಶಾಂತಿಯುತ ಕೊನೆಯೋ – ಅದು ಸವರ್ಣೀಯ ಹಿಂದೂಗಳ ನಡವಳಿಕೆಯನ್ನು ಸಂಪೂರ್ಣ ಅವಲಂಬಿಸಿದೆ. ನಮ್ಮ ವಿರೋಧಿಗಳಿಗೆ ಹೇಳುತ್ತಿದ್ದೇವೆ: ನಮ್ಮನ್ನು ತಡೆಯಬೇಡಿ. ಆ ಸಂಪ್ರದಾಯ, ಪುರಾಣಗಳನ್ನು ಅತ್ತ ಬಿಸಾಡಿ. ನ್ಯಾಯದಂತೆ ನಡೆಯಿರಿ. ನಾವು ಶಾಂತಿಯುತವಾಗಿ ಮುಂದುವರೆಯುತ್ತೇವೆಂದು ನಿಮಗೆ ಭರವಸೆ ಕೊಡುತ್ತೇವೆ.
-ಡಾ.ಬಿ.ಆರ್. ಅಂಬೇಡ್ಕರ್
(ಮಹಾಡ್ ಕೆರೆ ನೀರು ಹೋರಾಟದ ಮುನ್ನ ಮಾಡಿದ ಭಾಷಣದ ಸಂಗ್ರಹ ರೂಪ.
-ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ: ರಾಮಚಂದ್ರ ಗುಹಾ
-ಪಾಯ್ಸನ್ಡ್ ಬ್ರೆಡ್: ಟ್ರಾನ್ಸ್‌ಲೇಷನ್ಸ್ ಫ್ರಂ ಮಾಡರ್ನ್ ಮರಾಠಿ ದಲಿತ್ ಲಿಟರೇಚರ್. ಸಂ:ಅರ್ಜುನ್ ದಾಂಗ್ಳೆ.
-ಮೂಲ: ಚಾಂಗ್‌ದೇವ್ ಖೈರ್‌ಮೋಡೆ ಬರಹಕ್ಕಿಳಿಸಿದ ಭಾಷಣ. -ಇಂಗ್ಲಿಷ್ ಅನುವಾದ: ರಮೇಶ್ಚಂದ್ರ ಸರ್ಕಾರ್,
-ಕನ್ನಡಕ್ಕೆ – ಡಾ. ಎಚ್.ಎಸ್. ಅನುಪಮ)
ಸುದ್ದಿದಿನ.ಕಾಂ|ವಾಟ್ಸಾಪ್|9986715401