ಬಹಿರಂಗ
ತ್ರಿಪಿಟಕಗಳನ್ನು ಆಧರಿಸಿ ಬಾಬಾಸಾಹೇಬ್ ಅಂಬೇಡ್ಕರರು ಹೇಳಿದ ಬುದ್ಧನ ಬೋಧನೆಯ ಸಾರ
“ಬುದ್ಧ ಎಂದಾಕ್ಷಣ ಆತನನ್ನು ಅಹಿಂಸೆಯ ಸಿದ್ಧಾಂತಕ್ಕೆ ಸಂಬಂಧಿಸಿದವ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಬುದ್ಧನ ಬೋಧನೆ ಎಂದರೆ ಇದೇ ಮೊದಲು ಅಂದರೆ ಅಹಿಂಸೆಯೇ ಮೊದಲು ಇದೇ ಕೊನೆ ಅಂದರೆ ಅಹಿಂಸೆಯೇ ಕೊನೆ ಎಂಬಂತೆ ಹೇಳಲಾಗುತ್ತದೆ. ಆದರೆ ವಾಸ್ತವವೆಂದರೆ ಬುದ್ಧ ಬೋಧಿಸಿದ ಬೋಧನೆಗಳು ಅಹಿಂಸೆಗೂ ಮೀರಿ ಅದೆಷ್ಟು ವ್ಯಾಪಕ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ. ಆದ್ದರಿಂದ ಆತನ ತತ್ವಗಳನ್ನು ವಿವರಣಾತ್ಮಕವಾಗಿ ಒಂದೆಡೆ ಹಿಡಿದಿಡುವ ಅಗತ್ಯವಿದೆ. ಈ ದಿಸೆಯಲ್ಲಿ ತ್ರಿಪಿಟಕಗಳನ್ನು ನಾನು ಓದಿ, ನಾನು ಅರ್ಥೈಸಿಕೊಂಡಿರುವ ಆಧಾರದ ಮೇಲೆ ಬುದ್ಧನ ಬೋಧನೆಗಳನ್ನು ಈ ಕೆಳಕಂಡಂತೆ ಪಟ್ಟಿಮಾಡಲಿಚ್ಛಿಸುತ್ತೇನೆ.
- ಒಂದು ಸ್ವತಂತ್ರ ಸಮಾಜಕ್ಕಾಗಿ ಧರ್ಮ ಅತ್ಯಗತ್ಯವಾದುದಾಗಿದೆ.
- ಹಾಗಂತ ಪ್ರತಿಯೊಂದು ಧರ್ಮವೂ ಯೋಗ್ಯ ಎಂಬಂತೆ ಅಲ್ಲ.
- ಈ ನಿಟ್ಟಿನಲ್ಲಿ ಧರ್ಮ ಜೀವನದ ವಾಸ್ತವಗಳಿಗೆ ಸಂಬಂಧಿಸಿದಂತೆ ಇರಬೇಕೆ ಹೊರತು ದೇವರು ಅಥವಾ ಆತ್ಮ ಅಥವಾ ಸ್ವರ್ಗ ಅಥವಾ ಈ ಜಗತ್ತು ಎಂಬ ಊಹೆಗಳಿಗೆ, ಸಿದ್ಧಾಂತಗಳಿಗೆ ಸಂಬಂಧಿಸಿದ್ದಾಗಿರಬಾರದು.
- ದೇವರನ್ನು ಧರ್ಮದ ಕೇಂದ್ರವನ್ನಾಗಿ ಮಾಡುವುದು ತಪ್ಪು.
- ಆತ್ಮವಿಮೋಚನೆಯನ್ನು ಕೂಡ ಧರ್ಮದ ಕೇಂದ್ರವನ್ನಾಗಿ ಮಾಡುವುದು ತಪ್ಪು.
- ಪ್ರಾಣಿ ಬಲಿಯನ್ನು ಕೂಡ ಧರ್ಮದ ಕೇಂದ್ರವನ್ನಾಗಿ ಮಾಡುವುದು ತಪ್ಪು.
- ನಿಜವಾದ ಧರ್ಮವು ಮನುಷ್ಯನ ಹೃದಯಗಳಲ್ಲಿ ಬದುಕುತ್ತದೆಯೋ ಹೊರತು ಶಾಸ್ತ್ರಗಳಲ್ಲಲ್ಲ.
- ಮನುಷ್ಯ ಮತ್ತು ನೈತಿಕತೆಯು ಧರ್ಮದ ಕೇಂದ್ರ ಭಾಗವಾಗಬೇಕು ಮತ್ತು ಅದು ಹಾಗಾಗದಿದ್ದರೆ ಧರ್ಮವು ಅತ್ಯಂತ ಕ್ರೂರ ಮೂಢನಂಬಿಕೆಯಾಗುತ್ತದೆ.
- ಹಾಗೆಯೇ ನೈತಿಕತೆಯು ಕೇವಲ ಜೀವನದ ಆದರ್ಶವಾಗಿ ಮಾತ್ರ ಇರಬಾರದು. ಏಕೆಂದರೆ ದೇವರು ಇಲ್ಲದಿರುವುದರಿಂದ ಅದು(ನೈತಿಕತೆ) ಜೀವನದ ಕಾನೂನಾಗಬೇಕು.
- ಧರ್ಮದ ಕೆಲಸವು ಪ್ರಪಂಚವನ್ನು ಪುನರ್‌ಕಟ್ಟುವುದು ಮತ್ತು ಅದನ್ನು ಸಂತಸದಲ್ಲಿರಿಸುವುದಾಗಬೇಕೆ ಹೊರತು ಅದರ ಉಗಮ ಮತ್ತು ಅಂತ್ಯವನ್ನು ವಿವರಿಸುವುದಾಗಬಾರದು.
- ಈ ಪ್ರಪಂಚದಲ್ಲಿ ಅಸಂತೋಷವುಂಟಾಗಲಿಕ್ಕೆ ಕಾರಣ ಪರಸ್ಪರ ಹಿತಾಸಕ್ತಿಗಳ ಸಂಘರ್ಷವಾಗಿದೆ. ಇದನ್ನು ಪರಿಹರಿಸುವ ಏಕೈಕ ಮಾರ್ಗವೆಂದರೆ ಅಷ್ಠಾಂಗ ಮಾರ್ಗವಾಗಿದೆ.
- ಆಸ್ತಿಯ ಖಾಸಗಿ ಮಾಲೀಕತನವು ಒಂದು ವರ್ಗಕ್ಕೆ ಅಧಿಕಾರವನ್ನು ಮತ್ತೊಂದು ವರ್ಗಕ್ಕೆ ದುಃಖವನ್ನೂ ತರುತ್ತದೆ.
- ಆದ್ದರಿಂದ ಈ ಸಮಾಜದ ಶ್ರೇಯಸ್ಸಿಗಾಗಿ ಆ ದುಃಖವನ್ನು ಮತ್ತು ಆ ದುಃಖಕ್ಕೆ ಕಾರಣವಾದ ಆ ಅಂಶವನ್ನು (ಆಸ್ತಿಯ ಖಾಸಗಿ ಮಾಲೀಕತನ) ತೆಗೆದುಹಾಕುವ ಮೂಲಕ ಪರಿಹರಿಸಬೇಕಿದೆ.
- ಮಾನವ ಜೀವಿಗಳು ಎಲ್ಲರೂ ಸಮಾನರು.
- ಒಬ್ಬ ಮನುಷ್ಯನನ್ನು ಅಳೆಯುವ ಮಾನದಂಡ ಆತನ ಯೋಗ್ಯತೆಯೇ ಹೊರತು ಆತನ ಹುಟ್ಟಲ್ಲ.
- ಹಾಗೆಯೇ ಅತೀ ಮುಖ್ಯವಾದುದು ಯಾವುದು ಎಂದಾಗ ಉನ್ನತ ಆದರ್ಶಗಳು ಮುಖ್ಯವಾಗುತ್ತವೇ ಹೊರತು ಉಚ್ಛ ಕುಲದಲ್ಲಿ ಹುಟ್ಟುವುದಲ್ಲ.
- ಮೈತ್ರಿ ಅಥವಾ ಎಲ್ಲರೆಡೆಗೆ ಸಹೋದರತೆಯನ್ನು ಯಾವುದೇ ಕಾರಣಕ್ಕೂ ತೊರೆಯಬಾರದು. ಹೇಗೆಂದರೆ ವ್ಯಕ್ತಿಯೊಬ್ಬ ತನ್ನ ಶತೃವಿಗೂ ಅಂತಹ ಮೈತ್ರಿಯನ್ನು ತಾನು ಆಚರಿಸುತ್ತೇನೆಂದು ಪ್ರತಿಜ್ಞೆಕೈಗೊಳ್ಳಬೇಕು.
- ಪ್ರತಿಯೊಬ್ಬ ಮನುಷ್ಯನಿಗೂ ಕಲಿಯುವಿಕೆಯ(ಶಿಕ್ಷಣ) ಹಕ್ಕಿದೆ. ಹೇಗೆಂದರೆ ಬದುಕಲಿಕ್ಕೆ ಆಹಾರವು ಹೇಗೆ ಅವಶ್ಯಕವೋ ಹಾಗೆ ಮನುಷ್ಯನಿಗೆ ಶಿಕ್ಷಣವೂ ಅತ್ಯವಶ್ಯಕ.
- ಉತ್ತಮ ನಡತೆಯಿಲ್ಲದ ಕಲಿಕೆ(ಶಿಕ್ಷಣ) ಅಪಾಯಕಾರಿ.
- ಯಾವುದೂ ಕೂಡ ಪ್ರಶ್ನಾತೀತವಲ್ಲ, ಯಾವುದೂ ಕೂಡ ಸದಾ ಕಾಲಕ್ಕೆ ಶಾಶ್ವತವಲ್ಲ. ಪ್ರತಿಯೊಂದು ಕೂಡ ಪುನರ್‌ಪರಿಶೀಲನೆಗೆ, ಪರೀಕ್ಷೆಗೆ ಒಳಪಡಲೇಬೇಕು.
- ಯಾವುದು ಕೂಡ ಅಂತಿಮವಲ್ಲ.
- ಎಲ್ಲವೂ ಕೂಡ ಕಾರಣ-ಪರಿಣಾಮದ ನಿಯಮಕ್ಕೆ ಒಳಪಡುತ್ತವೆ.
- ಸನಾತನವಾದುದು, ಶಾಶ್ವತವಾದುದು ಎಂಬುದು ಯಾವುದೂ ಇಲ್ಲ. ಪ್ರತಿಯೊಂದೂ ಪರಿವರ್ತನೆಗೆ ಒಳಪಡುತ್ತವೆ. ಇರುವುದೆಂದರೆ (ಬದುಕುವುದೆಂದರೆ) ನಿರಂತರವಾಗಿ ರೂಪುಗೊಳ್ಳುವುದೆಂದರ್ಥ.
- ಸತ್ಯ ಮತ್ತು ನ್ಯಾಯಕ್ಕಾಗಿ ಅಲ್ಲದೆ ಇನ್ನಾವುದೇ ಕಾರಣಕ್ಕೂ ಯುದ್ಧ ನಡೆದರೆ ಅದು ತಪ್ಪು.
- ಯುದ್ಧದಲ್ಲಿ ಗೆದ್ದವನು ಸೋತವನನ್ನು ರಕ್ಷಿಸುವ ಕರ್ತವ್ಯ ಹೊಂದಿರುತ್ತಾನೆ.
ಇವಿಷ್ಟು ಒಂದು ಸಾರದ ರೂಪದಲ್ಲಿ ಬುದ್ಧನ ಬೋಧನೆಯ ಮೂಲತತ್ವಗಳಾಗಿವೆ. ಈ ದಿಸೆಯಲ್ಲಿ ಇವು ಎಷ್ಟು ಪ್ರಾಚೀನವಾಗಿವೆಯೋ ಅಷ್ಟೇ ತಾಜಾ ಕೂಡ ಆಗಿವೆ! ಹಾಗೆಯೇ ಆತನ ಈ ಬೋಧನೆಗಳು ಅದೆಷ್ಟು ಆಳವಾಗಿವೆ, ಅದೆಷ್ಟು ವಿಶಾಲವಾಗಿವೆ ಎಂಬುದು…”
-ಡಾ.ಬಾಬಾಸಾಹೇಬ್ ಅಂಬೇಡ್ಕರ್
(ಆಧಾರ: ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಇಂಗ್ಲಿಷ್ ಸಂ.3, ಪು.442, ಕನ್ನಡಕ್ಕೆ ರಘೋತ್ತಮ ಹೊ.ಬ)
ಸುದ್ದಿದಿನ.ಕಾಂ|ವಾಟ್ಸಾಪ್|9986715401