ಬಹಿರಂಗ
ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಯನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅವರ ಅನುಯಾಯಿಗಳು..!
- ರಘೋತ್ತಮ ಹೊ.ಬ
ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು. ಇದನ್ನು ಉಲ್ಲೇಖಿಸುತ್ತ ಅಂಬೇಡ್ಕರ್ ರವರು ಆ ಪಕ್ಷವೇ ಹೀಗೆ ಭಿನ್ನಮತದಿಂದ ಒತ್ತಿ ಉರಿಯುತ್ತಿದೆ ಇನ್ನು ದಲಿತರು ಅಲ್ಲಿ ಹೋದರೆ ನಿಮಗೇನು ಸಿಗುತ್ತದೆ ಎಂಬ ಅರ್ಥದಲ್ಲಿ ಆ ಹೇಳಿಕೆ ಹೇಳಿದ್ದರು. ಬದಲಿಗೆ ತಾವೇ ಸ್ಥಾಪಿಸಿರುವ ನಮ್ಮ ಸ್ವಂತ ಪಕ್ಷ “ಪರಿಶಿಷ್ಟ ಜಾತಿಗಳ ಒಕ್ಕೂಟ”ಕ್ಕೆ ಬನ್ನಿ ಎಂದು ಅಂಬೇಡ್ಕರ್ ರವರು ಶೋಷಿತ ಸಮುದಾಯಗಳವರಿಗೆ ಕರೆ ನೀಡಿದ್ದರು.
ದುರಂತವೆಂದರೆ ಇತಿಹಾಸದಲ್ಲಿ ದಾಖಲಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ರವರ ಈ ಹೇಳಿಕೆಯನ್ನು ಬಹುತೇಕ ದಲಿತ ರಾಜಕಾರಣಿಗಳು ಈಗಿನ ಕಾಲಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು, ಇತರೆ ಪಕ್ಷಗಳನ್ನು ಸೇರಲು ಲೈಸೆನ್ಸ್ ರೀತಿ ಬಳಸಿಕೊಳ್ಳುತ್ತಿರುವುದು! ಹಾಗಿದ್ದರೆ ಅಂಬೇಡ್ಕರ್ ರವರು ಹೇಳಿರುವ ಆ ರಾಜಕೀಯ ಹೇಳಿಕೆಯ ಒಟ್ಟಾರೆ ತಾತ್ಪರ್ಯವೇ ಅಪ್ರಸ್ತುತವೇ? ಖಂಡಿತ ಇಲ್ಲ. ಅವರು ಹೇಳಿದ ಶೋಷಿತ ಸಮುದಾಯಗಳ ಸ್ವತಂತ್ರ ರಾಜಕಾರಣ ಈಗಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿ ಇದೆ. ಅವರು ಜೀವನದುದ್ದಕ್ಕೂ ವಿರೋಧಿಸಿದ ಮೇಲ್ಜಾತಿ ಹಿಂದೂ ರಾಜಕೀಯ ಪಕ್ಷಗಳೂ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇವೆ!
ನಿಜ, ಇಂತಹ ರಾಜಕೀಯ ಸೂಕ್ಷ್ಮತೆಗಳನ್ನು ಸಾರ್ವಜನಿಕವಾಗಿ ಹೇಳುವುದು ತಪ್ಪು ಎಂದು ವಯಕ್ತಿಕವಾಗಿ ನನಗೆ ಗೊತ್ತಿದೆ ಆದರೆ ಬಾಬಾಸಾಹೇಬ್ ಅಂಬೇಡ್ಕರರ ಹೇಳಿಕೆಗಳ, ಬರಹಗಳ, ಚಿಂತನೆಗಳ ಮಹತ್ವವನ್ನು ಉಳಿಸುವ ದೃಷ್ಟಿಯಲ್ಲಿ ನನ್ನಂತಹವರು ಇಂತಹ ವಿಚಾರಗಳನ್ನು ಮುಕ್ತವಾಗಿ ಬಾಯಿಬಿಟ್ಟು ಹೇಳಲೇಬೇಕಿದೆ. ಅವರ ಬರಹಗಳ ಪ್ರಸ್ತುತತೆಯನ್ನು ನೈಜ ಅರ್ಥದಲ್ಲಿ ವಿಶ್ಲೇಷಿಸಿ ಸದಾ ಕಾಲ ಕಾಪಿಟ್ಟುಕೊಳ್ಳಬೇಕಿದೆ. ಜೈಭೀಮ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243