ಬಹಿರಂಗ
ಧರ್ಮವು ಕಟ್ಟಿದ್ದ ಬೃಹತ್ ಸಾಮ್ರಾಜ್ಯವನ್ನು ವಿಜ್ಞಾನಿಗಳು ಸ್ವಲ್ಪ ಸ್ವಲ್ಪವಾಗಿ ನಾಶಮಾಡಿದರು : ಡಾ.ಬಿ.ಆರ್.ಅಂಬೇಡ್ಕರ್
ಚರಿತ್ರೆಯ ಅಭ್ಯಾಸಿಗಳಿಗೆ ಒಂದು ಧಾರ್ಮಿಕ ಕ್ರಾಂತಿಯ ಪರಿಚಯವಿದೆ. ಧರ್ಮದ ವ್ಯಾಪ್ತಿ ಮತ್ತು ಅದರ ಅಧಿಕಾರ ಶಕ್ತಿಗೆ ಸಂಬಂಧಿಸಿದಂತೆ ಈ ಕ್ರಾಂತಿ ನಡೆಯಿತು. ಒಂದಾನೊಂದು ಕಾಲದಲ್ಲಿ ಮನುಷ್ಯನ ಜ್ಞಾನದ ಸರ್ವವನ್ನೂ ಧರ್ಮವು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿತು. ತನ್ನ ಉಪದೇಶಗಳು ಅಂತಿಮ ವಿಚಾರಗಳೆಂದೂ, ಅಲ್ಲಿ ತಪ್ಪಿಗೆ ಅವಕಾಶವೇ ಇಲ್ಲವೆಂದೂ ತಿಳಿದಿತ್ತು.
ಖಗೋಳ ವಿಜ್ಞಾನವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು, ತನ್ನದೇ ಆದ ವಿಶ್ವ ಸಿದ್ದಾಂತವೊಂದನ್ನು ಧರ್ಮವು ಪ್ರತಿಪಾದಿಸಿತು. ಅದರ ಸುತ್ತ ಸೂರ್ಯ – ಚಂದ್ರ – ನಕ್ಷತ್ರಾದಿ ಗ್ರಹಗಳು ತಮ್ಮ ತಮ್ಮ ಕಕ್ಷೆಯಲ್ಲಿ ಸುತ್ತುತ್ತಿವೆಯೆಂದು ಹೇಳಲಾಯಿತು.
ಜೀವನಶಾಸ್ತ್ರ ಮತ್ತು ಭೂಗರ್ಭಶಾಸ್ತ್ರಗಳನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಒಂದು ಸಿದ್ದಾಂತವನ್ನು ಮುಂದಿಟ್ಟು ಭೂಮಿ ಮತ್ತು ಸಕಲ ಜೀವರಾಶಿಗಳನ್ನೂ ಒಂದೇ ಬಾರಿಗೆ ಸೃಷ್ಟಿಸಿ ಕಾಲ ಕಾಲಕ್ಕೆ ಸಂರಕ್ಷಿಸಿಕೊಂಡು ಬರಲಾಯಿತೆಂದು ಹೇಳಿದರು. ಅತಿ ಮಾನುಷ ಜೀವಿಗಳಿಗೂ, ಪ್ರಾಣಿ – ಸಸ್ಯ ಸಮಸ್ತವೆಲ್ಲದರ ಅಸ್ತಿತ್ವಕ್ಕೂ ಇದೇ ವಿವರಣೆಯನ್ನು ಅನ್ವಯಿಸಿದರು .
ವೈದ್ಯಶಾಸ್ತ್ರವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ರೋಗಗಳಿಗೆ ಕಾರಣ ಮನುಷ್ಯನ ಪಾಪವೆಂದೂ, ಅದಕ್ಕೆ ಶಿಕ್ಷೆಯಾಗಿ ರೋಗ ಬರುತ್ತದೆ ಅಥವಾ ಭೂತಗಳ ಉಪದ್ರವವೆಂದು ಭಾವಿಸಿದರು. ರೋಗವನ್ನು ಗುಣಪಡಿಸಲು ಸಾಧುಸಂತರು ಆಗಮಿಸಿ ಅಥವಾ ಅವರ ಪವಿತ್ರ ಸಂಕೇತಗಳನ್ನು ಕಳಿಸಿ ಪ್ರಯತ್ನಿಸಬೇಕು. ಪ್ರಾರ್ಥನೆ, ಪೂಜೆ, ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗಬೇಕು. ಭೂಗತ ಉಪದ್ರವವಾಗಿದ್ದರೆ ಮಾಟದ ಆಚರಣೆಗಳ ಮೂಲಕ ಭೂಗತಗಳಿಗೆ ಅಸಹ್ಯ ಹುಟ್ಟಿಸಬೇಕು. ಇದನ್ನು ರೋಗಗಳ ವಿಚಾರದಲ್ಲಿಯೂ ಅನುಸರಿಸಬಹುದು .
ದೇಹಶಾಸ್ತ್ರ ಮತ್ತು ಮನೋವಿಜ್ಞಾನವನ್ನು ಧರ್ಮವು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು, ದೇಹ ಮತ್ತು ಆತ್ಮಗಳನ್ನು ಎರಡು ಪ್ರತ್ಯೇಕ ಉಪಾಧಿಗಳೆಂದು ತಿಳಿಯಲಾಯಿತು.ಧರ್ಮವು ಕಟ್ಟಿದ್ದ ಈ ಬೃಹತ್ ಸಾಮ್ರಾಜ್ಯವನ್ನು ವಿಜ್ಞಾನಿಗಳು ಸ್ವಲ್ಪ ಸ್ವಲ್ಪವಾಗಿ ನಾಶಮಾಡಿದರು. ಕೊಪರ್‌ನಿಕಸ್‌ನ ಕ್ರಾಂತಿಯಿಂದಾಗಿ ಖಗೋಳ ವಿಜ್ಞಾನವು ಧರ್ಮದ ಕಟ್ಟುಪಾಡಿನಿಂದ ಬಿಡುಗಡೆಯಾಯಿತು. ಡಾರ್ವಿನ್ನನ ಕ್ರಾಂತಿಯಿಂದಾಗಿ ಜೀವಶಾಸ್ತ್ರ ಮತ್ತು ಭೂಗರ್ಭಶಾಸ್ತ್ರಗಳು ಬಿಡುಗಡೆಯಾದವು. ವೈದ್ಯಶಾಸ್ತ್ರದ ಮಟ್ಟಿಗೆ ಧರ್ಮದ ಹಿಡಿತವಿನ್ನೂ ಸಂಪೂರ್ಣವಾಗಿ ಸಡಿಲವಾಗಿಲ್ಲ. ವೈದ್ಯಕೀಯ ವಿಚಾರಗಳಲ್ಲಿ ಧರ್ಮವು ಇಂದಿಗೂ ತಲೆ ಹಾಕುತ್ತಿದೆ. ಜನನ ನಿಯಂತ್ರಣ, ಗರ್ಭಪಾತ, ರೋಗಗ್ರಸ್ತ ಭ್ರೂಣಗಳ ಹತ್ಯೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಧರ್ಮದ ನಿಯಮಗಳು ಅಡ್ಡಿಪಡಿಸುತ್ತಿವೆ.
ಮನಶ್ಯಾಸ್ತವೂ ಅದರ ಸಂಕೋಲೆಯಿಂದ ಪೂರ್ತಿ ಮುಕ್ತವಾಗಿಲ್ಲ. ಆದರೂ ಡಾರ್ವಿನ್ನನ ವಾದದ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ, ಅಲ್ಲಿಂದ ಮುಂದೆ ತತ್ತರಿಸಿಹೋದ ಧರ್ಮದ ಸಾಮ್ರಾಜ್ಯವು ಮತ್ತೆ ಚೇತರಿಸಿಕೊಳ್ಳಲಿಲ್ಲ.ಧರ್ಮದ ಸಾಮ್ರಾಜ್ಯವು ಹಾಗೆ ಅಲ್ಲೋಲಕಲ್ಲೋಲವಾದ ಘಟನೆ ನಿಜಕ್ಕೂ ಒಂದು ಮಹಾಕ್ರಾಂತಿ ಎಂದೇ ಹೇಳಬಹುದು.
ಸತತವಾಗಿ ನಾಲ್ಕುನೂರು ವರ್ಷಗಳ ಕಾಲ ವಿಜ್ಞಾನವು ಧರ್ಮದ ವಿರುದ್ದ ಸಮರ ಹೂಡಿ ಹೋರಾಡಿದ್ದರ ಫಲವಾದ ಈ ಕ್ರಾಂತಿಯ ಉತ್ತೇಜನ ಉಲ್ಲೇಖನೀಯವಾದುದು. ಈ ಕ್ರಾಂತಿಯು ಬೆಳಗಿದ ಪ್ರಖರತೆಯನ್ನು ಯಾರೂ ಮರೆಯುವಂತಿಲ್ಲ. ಧರ್ಮದ ಕ್ಷೇತ್ರದಲ್ಲಾದ ಈ ಕ್ರಾಂತಿ ಒಂದು ವರವಾಗಿ ಪರಿಣಮಿಸಿತು. ಮುಕ್ತವಾದ ಚಿಂತನೆಯನ್ನು ಅದು ಸ್ಥಿರಗೊಳಿಸಿತು. ಇದರಿಂದ ಸಮಾಜಕ್ಕೆ “ ತನ್ನ ನಿಯಂತ್ರಣದ ಸೂತ್ರಗಳನ್ನು ತಾನೆ ಹಿಡಿಯುವಂತಾಯಿತು. ಒಂದು ಕಾಲದಲ್ಲಿ ಮೂಢನಂಬಿಕೆಗಳಿಂದ ತುಂಬಿದ್ದ ಪರಿಸರವನ್ನು ತನ್ನದನ್ನಾಗಿ ಪರಿವರ್ತಿಸಿತು. ಹಿಂದಿನ ಭಯಗಳನ್ನು ಧೈರ್ಯವಾಗಿ ಎದುರಿಸಿ, ಗೂಢವಾದ ಆಚರಣೆಗಳಿಂದ ತುಂಬಿದ್ದ ಸಾಮ್ರಾಜ್ಯದಿಂದಲೇ ಒಂದು ಹೊಸ ಪರಿಸರವನ್ನು ಸೃಷ್ಟಿಸಲು ಸಾಧ್ಯವಾಯಿತು. ಮುಕ್ತವಾದ ಚಿಂತನೆ ಮತ್ತು ಅಡೆತಡೆಗಳಿಲ್ಲದ ಕಾರ್ಯೋನ್ಮುಖತೆಗೆ ಅವಕಾಶವಾಯಿತು. ” ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿ ನಾಗರಿಕತೆಯನ್ನು ಧರ್ಮ ನಿರಪೇಕ್ಷಗೊಳಿಸುವ ಪ್ರಕ್ರಿಯೆಗಳನ್ನು ವಿಜ್ಞಾನಿಗಳು ಸ್ವಾಗತಿಸಿದರು. ಧರ್ಮವು ಕಟ್ಟಿದ್ದ ಈ ಬೃಹತ್ ಸಾಮ್ರಾಜ್ಯವನ್ನು ವಿಜ್ಞಾನಿಗಳು ಸ್ವಲ್ಪ ಸ್ವಲ್ಪವಾಗಿ ನಾಶಮಾಡಿದರು.
(ಡಾ . ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ – 3)
ಸುದ್ದಿದಿನ.ಕಾಂ|ವಾಟ್ಸಾಪ್|9980346243