ದಿನದ ಸುದ್ದಿ

ಜಾತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ : ಡಾ.ಬಿ.ಆರ್.ಅಂಬೇಡ್ಕರ್ ಈ ಬರಹ ನಿಮಗಾಗಿ

Published

on

ಸಾಮೂಹಿಕ ಸಂಪ್ರದಾಯ,ಅಧಿಕಾರ ಮತ್ತು ಹಿತಗಳನ್ನು ಮೀರಿ ತನ್ನ ಸ್ವಂತ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಸ್ವತಂತ್ರವಾಗಿ ಒಬ್ಬ ವ್ಯಕ್ತಿ ಹೇಳತೊಡಗುವುದೇ ಎಲ್ಲಾ ಬಗೆಯ ಸುಧಾರಣೆಗಳ ಆರಂಭ. ಈ ಸುಧಾರಣೆ ಮುಂದುವರಿಯುವುದೋ ಇಲ್ಲವೋ ಎನ್ನುವುದು ಆ ಸಮೂಹ ಆತನಿಗೆ ಒದಗಿಸುವ ಅವಕಾಶವನ್ನು ಅವಲಂಬಿಸುತ್ತದೆ.

ಸಮೂಹ ಅಥವಾ ಸಮಾಜ ತಾಳೆಯಿಂದ ನ್ಯಾಯಬುದ್ದಿಯಿಂದ ಅಹ ವ್ಯಕ್ತಿಗಳನ್ನು ನೋಡಿಕೊಂಡರೆ ಆ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸುತ್ತಾ ಆಗಿ, ಕೊನೆಗೆ ಅವರನ್ನೆಲ್ಲ ಮನವೊಲಿಸಿ ತಮ್ಮ ಹೊಸ ವಿಚಾರಗಳಿಗೆ ಒಪ್ಪಿಸುವುದೂ ಸಾಧ್ಯ . ಸಮೂಹಕ್ಕೆ ಬೇಡವಾದರೆ ಆ ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಹಾಗಾದಾಗ ಸುಧಾರಣೆಯ ಪ್ರಯತ್ನ ಸತ್ತು ಹೋಗುತ್ತದೆ. ಜಾತಿಯ ಕೈಯಲ್ಲಿ ಬಹಿಷ್ಕಾರವೆಂಬುದೊಂದು ಬಲಿಷ್ಠವಾದ ಹಕ್ಕು ಇದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ . ಜಾತಿಯ ನಿಯಮಗಳನ್ನು ಮೀರಿದವನಿಗೆ ಕೊಡುವ ತೀವ್ರತರವಾದ ಶಿಕ್ಷೆಯೆಂದರೆ ಈ ಬಹಿಷ್ಕಾರ.

ಬಹಿಷ್ಕೃತ ವ್ಯಕ್ತಿ ತನ್ನ ಜಾತಿಯ ಯಾವನೊಂದಿಗೂ ಸಂಬಂಧವಿಟ್ಟುಕೊಳ್ಳುವಂತಿಲ್ಲ. ಹೀಗೆ ಎಲ್ಲರಿಗೂ ಬೇಡವಾಗಿ ಬದುಕುವುದೆಂದರೆ ಸತ್ತಂತೆಯೇ ಸರಿ . ಈ ಬಹಿಷ್ಕಾರದ ಭಯ ಬಲವಾಗಿರುವುದರಿಂದ ಯಾವ ಹಿಂದೂವಾದರೂ ಜಾತಿ ನಿಯಮಕ್ಕೆ ವಿರೋಧವಾಗಿ ತನ್ನ ಸ್ವಂತ ಅಭಿಪ್ರಾಯಗಳನ್ನು ಹೇಳುವ ಧೈರ್ಯ ಮಾಡಲಾರನು. ಸಮಾಜವನ್ನು ಬಿಟ್ಟು ಮನುಷ್ಯ ಬದುಕಲಾರ. ತಾನು ಹೇಳಿದಂತೆ ಅದು ಕೇಳದಿದ್ದರೆ, ಅದು ಹೇಳಿದಂತೆ ತಾನು ಕೇಳಬೇಕು . ಸಂಪೂರ್ಣವಾಗಿ ಅದಕ್ಕೆ ಶರಣಾಗುವ ಪ್ರಸಂಗ ಬಂದರೂ ಪರವಾಗಿಲ್ಲ . ವ್ಯಕ್ತಿಯ ಈ ದೌರ್ಬಲ್ಯದ ಲಾಭ ಪಡೆದುಕೊಳ್ಳಲು ಜಾತಿ ಯಾವಾಗಲೂ ಸಿದ್ದವಾಗಿರುತ್ತದೆ.

ಸುಧಾರಕನ ಜೀವನವನ್ನೊಂದು ನರಕವಾಗಿಸಬಲ್ಲ ಕುತಂತ್ರ ಜಾತಿಯಿಂದ ನಡೆಯಬಹುದು. ಕುತಂತ್ರ ಒಂದು ಅಪರಾಧವಾಗಿದ್ದ ಪಕ್ಷದಲ್ಲಿ ಧೈರ್ಯಶಾಲಿಯೊಬ್ಬನು ಜಾತಿಗೆ ವಿರೋಧವಾಗಿ ನಿಂತನೆಂದು ಅವನನ್ನು ಬಹಿಷ್ಕರಿಸುವ ಈ ದುಷ್ಪಕೃತ್ಯವನ್ನು ಕಾನೂನು ರೀತಿಯಲ್ಲಿ ಶಿಕ್ಷಾರ್ಹವೆಂದು ಏಕೆ ಪರಿಗಣಿಸಬಾರದೋ ನಾನರಿಯೆ. ಆದರೆ ಕಾನೂನು ಆಯಾ ಜಾತಿಗೆ ಅದರದರ ನಿಯಮಗಳ ಸ್ವಾತಂತ್ರ್ಯವಿತ್ತಿದೆ; ತಪ್ಪಿತಸ್ಥರಿಗೆ ಬಹಿಷ್ಕಾರ ಹಾಕುವ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಿಲ್ಲ . ಸಂಪ್ರದಾಯಬದ್ದ ಜನರ ಕೈಯಲ್ಲಿ ಜಾತಿ ಒಂದು ಬಲಿಷ್ಟ ಆಯುಧವಾಗಿದ್ದು , ಅದ್ದರಿಂದ ಸುಧಾರಕನನ್ನೂ ಸುಧಾರಣೆಗಳನ್ನೂ ಅದು ನಿರ್ಮೂಲನೆಗೊಳಿಸಬಲ್ಲದು.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version