ಬಹಿರಂಗ

ಜಾತಿ ಹೃದಯ ವೈಶಾಲ್ಯತೆಯನ್ನು ಹಾಳುಮಾಡಿದೆ : ಡಾ.ಬಿ.ಆರ್.ಅಂಬೇಡ್ಕರ್‌ ಓದಿ ಈ ಬರಹ

Published

on

ಜಾತಿಯಿಂದಾಗಿ ಹಿಂದೂಗಳ ನೈತಿಕತೆ ಶೋಚನೀಯ ಅವಸ್ಥೆಗೆ ಮುಟ್ಟಿದೆ. ಜಾತಿ ಸಾರ್ವಜನಿಕ ಭಾವನೆಯನ್ನು ನಾಶಗೊಳಿಸಿ, ಹೃದಯ ವೈಶಾಲ್ಯವನ್ನು ಹಾಳುಮಾಡಿದೆ; ಸಾರ್ವಜನಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮಾಡಿದೆ. ಹಿಂದೂವಿನ ಸಮಾಜ ಹಾಗೂ ಹೊಣೆಗಾರಿಕೆ ಅವನ ಜಾತಿಗೆ ಸೀಮಿತವಾದುದು. ಅವನ ನಿಷ್ಠೆ ಜಾತಿಗೆ ಪರಿಮಿತವಾಗಿದೆ. ಸದ್ಗುಣ ಹಾಗೂ ನೀತಿ ಎರಡೂ ಜಾತೀಯತೆಯ ಮುಷ್ಟಿಯಲ್ಲಿ ಸಿಕ್ಕಿಕೊಂಡಿದೆ. ಸಹಾನುಭೂತಿ ಯಾರಿಗೆ ಅವಶ್ಯಕವೋ ಅವನಿಗೆ ಅದು ಸಿಕ್ಕುತ್ತಿಲ್ಲ .

ಶ್ಲಾಧ್ಯತೆ ದೊರೆಯಬೇಕಾದವರಿಗೆ ಅದು ದೊರೆಯುತ್ತಿಲ್ಲ. ದಾನಧರ್ಮ ಬೇಡುವವರಿದ್ದಾರೆ, ಅವರಿಗೆ ಕೊಡುವವರು ಇಲ್ಲ, ಸಂಕಷ್ಟಗಳನ್ನು ಕೇಳುವವರಿಲ್ಲ. ದಯೆದಾನ ಇಲ್ಲವೆಂದೇನೂ ಅಲ್ಲ. ಆದರೆ ಅದು ಜಾತಿಯನ್ನು ದಾಟಿ ಹೋಗಲಾರದು. ಸಹಾನುಭೂತಿ ತಮ್ಮ ಜಾತಿಯವರಿಗೆ ಮಾತ್ರ ಉಂಟು, ಇತರರಿಗೆ ಇಲ್ಲ. ಸದ್ಗುಣಿಯಾದ ಮಹಾಪುರುಷನು ನೇಕಾರನಾಗಿ ಬಂದರೆ ಹಿಂದೂವು ಅವನನ್ನು ಅನುಸರಿಸುವನೆ ? ಆತನು ಮಹಾತ್ಮನೇ ಆಗಲಿ, ಅವನನ್ನು ಮುಂದಾಳೆಂದು ಒಪ್ಪಿಕೊಳ್ಳಬೇಕಾದರೆ ಅವನು ತಮ್ಮ ಜಾತಿಯವನೇ ಆಗಿರತಕ್ಕದ್ದು, ಮುಂದಾಳು ಬ್ರಾಹ್ಮಣನಾಗಿದ್ದರೆ ಮಾತ್ರ ಬ್ರಾಹ್ಮಣರು ಅವನ ಅನುಯಾಯಿಯಾಗುತ್ತಾರೆ.

ಕ್ಷತ್ರಿಯರು ಮುಂದಾಳಾದರೆ ಮಾತ್ರ ಕ್ಷತ್ರಿಯರು ಅವನ ಅನುಯಾಯಿಗಳಾಗುತ್ತಾರೆ. ಇತರ ಜಾತಿಗಳಿಗೂ ಈ ಮಾತು ಹೀಗೆಯೇ ಅನ್ವಯಿಸುತ್ತದೆ. ಒಬ್ಬ ಮನುಷ್ಯನ ಜಾತಿ ಯಾವುದೇ ಇರಲಿ ಅವನ ಯೋಗ್ಯತೆಯನ್ನು ಪರಿಗಣಿಸಬೇಕೆಂಬ ಬುದ್ದಿ ಅಥವಾ ಹಾಗೆ ಮಾಡುವ ಧೈರ್ಯ ಹಿಂದೂವಿಗೆ ಇಲ್ಲ. ತಮ್ಮ ಜಾತಿಯವನಾದರೆ
ಮಾತ್ರ ಅವನನ್ನು ಪರಿಗಣಿಸುತ್ತಾನೆ. ಅನಾಗರಿಕ ಜನರ ಗುಂಪಿನ ನೀತಿ ಎಷ್ಟು ಸಂಕುಚಿತವೋ ಅಷ್ಟು ಸಂಕುಚಿತವಾಗಿದೆ ಜಾತಿಯ ನೀತಿ. ಸರಿಯಿರಲಿ, ತಪ್ಪಿರಲಿ ತನ್ನ ಜಾತಿ ಮುಖ್ಯ. ಸಜ್ಜನನಿರಲಿ, ದುರ್ಜನನಿರಲಿ ತಮ್ಮ ಜಾತಿಯವನೆನ್ನುವುದೇ ಮುಖ್ಯ. ಹೀಗೆ ತಮ್ಮ ತಮ್ಮ ಜಾತಿಯ ಹಿತವನ್ನೇ ನೋಡಿಕೊಳ್ಳುತ್ತ ಹಿಂದೂಗಳು ದೇಶಕ್ಕೆ ದ್ರೋಹ ಬಗೆದಿಲ್ಲವೆ ?

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version