ಬಹಿರಂಗ

ಹಿಂದೂಗಳು ‘ಜಾತಿ‌‌ ಎಂಬ ಭ್ರಾಂತಿ’ಯಿಂದ ಮುಕ್ತರಾಗ ಬೇಕು : ಎಲ್ಲರೂ ಓದಲೇ ಬೇಕಾದ ಡಾ.ಬಿ.ಆರ್. ಅಂಬೇಡ್ಕರ್ ರ ಈ ಬರಹ

Published

on

ಒಬ್ಬ ಮಹಮ್ಮದೀಯನನ್ನೋ, ಸಿಖ್ಖನನ್ನೋ, ನೀನು ಯಾರು? ” ಎಂದು ಕೇಳಿ, ತಾನು ಮಹಮ್ಮದೀಯನೆಂದೂ, ಸಿಖ್ಖ ನೆಂದೂ ಹೇಳುತ್ತಾರೆ. ತನಗೆ ಒಳಜಾತಿಯೊಂದಿದ್ದರೂ ಅದನ್ನು ಅವನು ತಿಳಿಸುವುದಿಲ್ಲ.

ತಾನು ಮುಸ್ಲಿಮನೆಂದು ಅವನು ಹೇಳಿದರೆ, “ ನೀನು ಶಿಯಾ ಅಥವಾ ಸುನ್ನಿ , ಶೇಖ್ ಅಥವಾ ಸೈಯದ್, ಖಟಕ್ ಅಥವಾ ಪಿಂಜಾರ ಇವುಗಳಲ್ಲಿ ಸೇರಿದವನು ? ” ಎಂದು ಕೇಳುವುದಿಲ್ಲ. ತಾನು ಸಿಬ್ಬನೆಂದು ಹೇಳಿದರೆ, “ ಜಾಟ್, ರೋಡ್, ಮಜಬಿ, ರಾಮದಾಸಿ ಇವುಗಳಲ್ಲಿ ನೀನು ಯಾವ ಪಂಗಡಕ್ಕೆ ಸೇರಿದವನು ? ” ಎಂದು ನೀವು ಕೇಳುವುದಿಲ್ಲ.

ಆದರೆ ಅದೇ ಒಬ್ಬನು ತಾನು “ ಹಿಂದೂ ” ಎಂದಿಷ್ಟೆ ಹೇಳಿದರೆ ನಿಮಗೆ ಸಾಲದು, ಯಾವ ಜಾತಿಯೆಂದು ಕೇಳದೆ ಬಿಡುವುದಿಲ್ಲ. ಅದೇಕೆ ? ಹಿಂದೂಗಳಲ್ಲಿ ಜಾತಿ ಅಷ್ಟು ಮುಖ್ಯವಾಗಿದೆ. ಅದು ತಿಳಿಯದೇ ಅ ಮನುಷ್ಯ ಎಂಥವನೆಂದು ನಿಮಗೆ ತಿಳಿಯಲಾರದು. ಜಾತಿಯ ಅರ್ಥ ಹಿಂದೂಗಳಲ್ಲಿ ಬೇರೆ ಇತರರಲ್ಲಿ ಬೇರೆಯೆಂಬುದು ನಿಮಗೆ ಸಷ್ಟವಾಗಬೇಕಾದರೆ ಹಿಂದೂಗಳಲ್ಲಿ ಜಾತಿಯ ಕಟ್ಟುಗಳನ್ನು ಮೀರಿದವರಿಗೆ ಏನಾಗುವುದೆಂಬುದನ್ನು ಗಮನಿಸಬೇಕು.

ಮುಸ್ಲಿಮರಲ್ಲಾಗಲಿ ಸಿಬ್ಬರಲ್ಲಾಗಲಿ ಜಾತಿಭಂಗ ಮಾಡಿದವನಿಗೆ ಬಹಿಷ್ಕಾರ ಹಾಕುವುದಿಲ್ಲ. “ ಬಹಿಷ್ಕಾರ ‘ ವೆಂಬ ಕಲ್ಪನೆ ಕೂಡ ಅವರಲ್ಲಿ ಇಲ್ಲ. ಹಿಂದೂಗಳಲ್ಲಿ ಅದು ನಿಶ್ಚಿತ ಶಿಕ್ಷೆ , ಜಾತಿ ವಿಷಯದಲ್ಲಿ ಹಿಂದೂ ಹಾಗೂ ಇತರರಲ್ಲಿರುವ ಎರಡನೆಯ ಭೇದವಿದು, ಇನ್ನು ಮೂರನೆಯ ಭೇದವೊಂದಿದೆ ; ಅದು ಹೆಚ್ಚು ಮಹತ್ವದ್ದೂ ಆಗಿದೆ. ಹಿಂದೂಗಳಲ್ಲಿ ಇದ್ದಂತೆ ಇತರರಲ್ಲಿ ಜಾತಿಗೆ ಧಾರ್ಮಿಕ ಪ್ರತಿಷ್ಠೆಯಿಲ್ಲ. ಇತರರಲ್ಲಿ ಜಾತಿಯೆಂಬುದು ಒಂದು ವ್ಯವಹಾರ ಅಥವಾ ರೂಢಿಮಾತ್ರ, ಅದೊಂದು ಪಾವನವಾದ ಏರ್ಪಾಡಲ್ಲ. ಅದನ್ನು ಅವರೇ ನಿರ್ಮಿಸಲಿಲ್ಲ.

ಹೇಗೂ ಹಿಂದಿನಿಂದ ಉಳಿದುಕೊಂಡು ಬಂದ ಒಂದು ಅಂಶವದು . ಅದನ್ನೊಂದು ಧಾರ್ಮಿಕ ವಿಧಿಯೆಂದು ಅವರು ಪರಿಗಣಿಸುವುದಿಲ್ಲ . ಹಿಂದೂಗಳಲ್ಲಾದರೆ ಜಾತಿಜಾತಿಗಳನ್ನು ಪ್ರತ್ಯೇಕವಾಗಿರಿಸುವಂತೆ ಧರ್ಮ ವಿಧಿಸುತ್ತದೆ.ಅದೊಂದು ಸದಾಚಾರವೆಂದು ಹೇಳುತ್ತದೆ.

ಹಿಂದೂಗಳಲ್ಲಿ ಜಾತಿಯನ್ನು ಮೀರಿದರೆ ಧರ್ಮವನ್ನು ಮೀರಿದಂತೆಯೇ. ಇತರರಲ್ಲಿ ಹಾಗೇನೂ ಅಲ್ಲ. “ಇತರರಲ್ಲಿಯೂ ಜಾತಿಗಳಿರುವುದರಿಂದ ನಮ್ಮಲ್ಲಿ ಜಾತಿಗಳಿರುವುದೇನು ಮಹಾ” ಎಂದುಕೊಳ್ಳುವುದು ಅಪಾಯಕರವಾದ ಭ್ರಾಂತಿ. ಹಿಂದೂಗಳು ಈ ಭ್ರಾಂತಿಯಿಂದ ಎಷ್ಟು ಬೇಗನೆ ಮುಕ್ತರಾಗುವವರೋ ಅಷ್ಟು ಒಳ್ಳೆಯದು.

-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version