ಬಹಿರಂಗ
‘ಹಿಂದೂ ಸಮಾಜ’ ವೆಂಬುದು ‘ಮಿಥ್ಯ ಪದ’ : ಡಾ.ಬಿ.ಆರ್.ಅಂಬೇಡ್ಕರ್ ಅವರ ಈ ಬರಹ ನಿಮಗಾಗಿ..!
ಜಾತಿಯಿಂದ ಆರ್ಥಿಕ ಕಾರ್ಯಸಾಮರ್ಥ್ಯ ಉತ್ತಮವಾಗುವುದಿಲ್ಲ. ಜಾತಿ ಜನಾಂಗವನ್ನು ಉತ್ತಮಗೊಳಿಸಿಲ್ಲ, ಉತ್ತಮಗೊಳಿಸಲು ಅದಕ್ಕೆ ಸಾಧ್ಯವೂ ಇಲ್ಲ. ಆದರೆ ಅದು ಒಂದನ್ನು ಮಾತ್ರ ಸಾಧಿಸಿದೆ. ಜಾತಿಯು ಹಿಂದೂಗಳನ್ನು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿ ನೀತಿಗೆಡಿಸಿದೆ. ‘ಹಿಂದೂ ಸಮಾಜ ‘ ವೆಂಬುದು ಮಿಥ್ಯ ಪದ . ಇದು ಎಲ್ಲಕ್ಕಿಂತ ಮುಂಚೆ ಒಪ್ಪಿಕೊಳ್ಳಬೇಕಾದ ಮಾತ್ತು ಹಿಂದೂ ಎಂಬ ಈ ಹೆಸರೇ ವಿದೇಶೀಯವಾಗಿದೆ . ಹೊರಗಿನಿಂದ ಬಂದ ಮಹಮ್ಮದೀಯರು ತಮ್ಮಿಂದ ಬೇರೆಯಾದ ಇಲ್ಲಿಯ ನಿವಾಸಿಗಳನ್ನು ಈ ಹೆಸರಿನಿಂದ ಗುರುತಿಸಿದರು.
ಮಹಮ್ಮದೀಯ ದಾಳಿಗಳಿಗೆ ಮುಂಚಿನ ಯಾವ ಸಂಸ್ಕೃತ ಗ್ರಂಥದಲ್ಲಿಯೂ ಈ ಪದದ ಉಲ್ಲೇಖವಿಲ್ಲ . ಎಲ್ಲ ಜನರಿಗೂ ಸಾಮಾನ್ಯವಾದೊಂದು ಹೆಸರಿನ ಅಗತ್ಯವಿದೆಯೆಂದು ಹಿಂದೂಗಳಿಗೆ ಅನ್ನಿಸಲಿಲ್ಲ . ಏಕೆಂದರೆ ಒಂದು ಸುಸಂಘಟಿತ ಸಮುದಾಯದ ಕಲ್ಪನೆಯೇ ಅವರಿಗೆ ಇರಲಿಲ್ಲ . ಹಿಂದೂ ಸಮಾಜ ಎಂಬುದು ಅಸ್ತಿತ್ವದಲ್ಲಿಲ್ಲ . ಅದು ಅನೇಕ ಜಾತಿಗಳ ಒಂದು ಸಮೂಹ . ಪ್ರತಿಯೊಂದು ಜಾತಿಗೂ ತನ್ನ ಅಸ್ತಿತ್ವದ ಎಚ್ಚರವಿದೆ . ತಾನು ಉಳಿಯಬೇಕು , ಇಷ್ಟೇ ಅದರ ಸರ್ವಸ್ವ , ಈ ಜಾತಿಗಳು ಒಂದು ಸಂಯುಕ್ತ ಪದ್ಧತಿಯ ಸಂಘಟನೆಯನ್ನೂ ಮಾಡಿಕೊಂಡಿಲ್ಲ. ಹಿಂದೂ – ಮುಸ್ಲಿಂ ದಂಗೆಯಾದ ಪ್ರಸಂಗವನ್ನು ಬಿಟ್ಟರೆ , ಉಳಿದ ಯಾವ ಕಾಲದಲ್ಲಿ ಆದರೂ ಒಂದು ಜಾತಿಗೂ ಇನ್ನೊಂದು ಜಾತಿಗೂ ಏನೂ ಸಂಬಂಧವಿದ್ದಂತೆ ತೋರುವುದಿಲ್ಲ. ಇತರ ಜಾತಿಗಳಿಗಿಂತ ತಾನು ಬೇರೆಯೆಂದೂ , ವಿಶಿಷ್ಟವೆಂದೂ ತೋರಿಸಿಕೊಳ್ಳಲು ಪ್ರತಿಯೊಂದು ಜಾತಿ ಪ್ರಯತ್ನಿಸುತ್ತದೆ. ಸಹಭೋಜನವಾಗಲೀ , ಮದುವೆಯಾಗಲೀ ಒಂದು ಜಾತಿಯವರು ತಮ್ಮ ಜಾತಿಯವರೊಡನೆ ಮಾತ್ರ ಮಾಡತಕ್ಕದ್ದು , ಇಷ್ಟೇ ಅಲ್ಲ, ತಮ್ಮ ಜಾತಿಗೆ ಇಂತಹದೇ ಉಡುಗೆ ತೊಡುಗೆಯೆಂಬ ನಿರ್ಬಂಧ ಕೂಡ ಇದೆ.
ವಿದೇಶಿ ಪ್ರವಾಸಿಗರಿಗೆ ವಿನೋದವನ್ನೊದಗಿಸುವಂತೆ ಅಸಂಖ್ಯವಾದ ಉಡುಗೆ ತೊಡುಗೆಗಳು ಭಾರತದಲ್ಲಿ ಕಂಡುಬರುವುದಕ್ಕೆ ಇದಕ್ಕಿಂತ ಬೇರೆ ಕಾರಣವೇನಿದೆ ? ಆದರ್ಶ ಹಿಂದೂವೆಂಬುವನು ಹೊರಗಿನ ಯಾರ ಸಂಪರ್ಕವೂ ಇಲ್ಲವೆಂದು ತನ್ನ ಬಿಲದೊಳಗೆ ಹುದುಗಿಕೊಂಡಿರುವ ಒಂದು ಇಲಿಯಾಗಿರಬೇಕು . ಸಮಾಜಶಾಸ್ತ್ರಜ್ಞರು ಹೇಳುವ ಸ್ವಸಮುದಾಯ ಪಜ್ಜೆ ಹಿಂದೂಗಳಲ್ಲಿ ಒಂದಿಷ್ಟೂ ಇಲ್ಲ . ಪ್ರತಿಯೊಬ್ಬ ಹಿಂದೂವಿನಲ್ಲಿ ಇರುವ ಪಜ್ಜೆ ಒಂದೇ , ಅದು ತನ್ನ ಜಾತಿಯ ಪ್ರಜ್ಞೆ ಆದುದರಿಂದ , ಹಿಂದೂಗಳದೇ ಒಂದು ಸಮಾಜವಾಗಲಿ , ರಾಷ್ಟ್ರವಾಗಲಿ ಸಾಧ್ಯವಾಗಿಲ್ಲ . ಭಾರತೀಯರು ಒಂದು ರಾಷ್ಟ್ರವಲ್ಲವೆಂಬ ಮಾತನ್ನು ಒಪ್ಪುವುದಕ್ಕೆ ಎಷ್ಟೋ ಜನರ ದೇಶಾಭಿಮಾನ ಅಡ್ಡ ಬರುತ್ತದೆ . ಹೊರಗೆ ತೋರುವ ಈ ವೈವಿಧ್ಯದ ಒಡಲಲ್ಲಿ ಮೂಲಭೂತವಾದ ಒಂದು ಐಕ್ಯತೆಯಿದ್ದು ಹಿಂದೂಗಳೆಲ್ಲ ಒಂದಾಗಿದ್ದಾರೆಂದು ಅವರು ವಾದಿಸುತ್ತಾರೆ . ಸಂಪ್ರದಾಯಗಳಲ್ಲಿ , ನಂಬಿಕೆಗಳಲ್ಲಿ , ವಿಚಾರಗಳಲ್ಲಿ ಸಮಗ್ರ ಭರತಖಂಡದಲ್ಲೆಲ್ಲ ಸಾಮ್ಯತೆ ಕಾಣುವುದೆಂದು ಹೇಳುತ್ತಾರೆ. ಈ ಸಾಮ್ಯತೆ ಇರುವುದೇನೋ ನಿಜವೆ , ಆದರೆ ಇಷ್ಟರಿಂದಲೇ ಹಿಂದೂಗಳು ಒಂದು ಸಮಾಜವೆಂಬ ನಿರ್ಣಯ ಮಾಡುವುದು ಸರಿಯಲ್ಲ . ಹೀಗೆ ನಿರ್ಣಯಿಸುವವರಿಗೆ ಸಮಾಜದ ಅರ್ಥವೇ ತಿಳಿಯದು . ಒಂದು ಪ್ರದೇಶದಲ್ಲಿ ಹತ್ತಿರ ಹತ್ತಿರ ಇರುವುದರಿಂದಲೇ ಜನರು ಒಂದು ಸಮಾಜವಾಗಿ ಮಾರ್ಪಡುವುದಿಲ್ಲ . ಅದರಂತೆ , ಉಳಿದವರಿಂದ ನೂರಾರು ಮೈಲು ದೂರ ಇರುವುದರಿಂದಲೇ ಸಮಾಜಕ್ಕೆ ಹೊರತಾಗುವುದಿಲ್ಲ. ಎರಡನೆಯದಾಗಿ , ರೂಢಿ , ಸಂಪ್ರದಾಯ , ನಂಬಿಕೆ , ವಿಚಾರ ಮೊದಲಾದವುಗಳಲ್ಲಿ ಸಾಮ್ಯತೆಯೊಂದರಿಂದ ಸಮಾಜ ರೂಪುಗೊಳ್ಳುವುದಿಲ್ಲ . ಇಟ್ಟಿಗೆಗಳಂತೆ ವಿಷಯಗಳನ್ನು ಒಬ್ಬರಿಂದೊಬ್ಬರಿಗೆ ಸಾಗಿಸಬಹುದು.
ಅದೇ ರೀತಿಯಾಗಿ ಒಂದು ಗುಂಪಿನ ಸಂಪ್ರದಾಯ , ವಿಚಾರ , ಶ್ರದ್ಧೆಗಳು ಕೂಡ ಇನ್ನೊಂದು ಗುಂಪಿಗೆ ಸಾಗಿ ಇವೆರಡರಲ್ಲಿ ಸಾಮ್ಯತೆ ತೋರಬಹುದು . ಸಂಸ್ಕೃತಿ ಹೀಗೆ ಪ್ರಸಾರವಾಗುತ್ತದೆ . ಅದರ ಪರಿಣಾಮವಾಗಿ ಸಾಮ್ಯತೆ ಕಂಡುಬರುತ್ತದೆ . ಈ ಸಾಮ್ಯತೆಯ ಆಧಾರದಿಂದ ಆ ಪ್ರಾಚೀನ ಬುಡಕಟ್ಟುಗಳೆಲ್ಲ ಒಂದೇ ಸಮಾಜವಾಗಿದ್ದವೆಂದು ಯಾರೂ ಹೇಳಲಾರರು . ಮನುಷ್ಯರು ಸಮಾಜವಾಗಿ ಸಂಘಟಿತವಾಗಬೇಕಾದರೆ ಸಮಾನಾಧಿಕಾರದ ಕೆಲವಂಶವನ್ನು ಅವರು ಪಡೆದಿರಬೇಕು . ಸಮಾನ ವಸ್ತುಗಳನ್ನು ಅಥವಾ ವಿಷಯಗಳನ್ನು ಹೊಂದಿರುವುದು ಬೇರೆ , ಇತರರೊಡನೆ ಕೆಲವಂಶಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದು ಪರಸ್ಪರ ಸಂಪರ್ಕದಿಂದಲೇ . ಬೇರೆ ಮಾತುಗಳಲ್ಲಿ ಹೇಳುವುದಾದರೆ , ಸಮಾಜ ಮುಂದುವರಿಯುವುದು ಅದರ ಸದಸ್ಯರಲ್ಲಿರುವ ಪರಸ್ಪರ ನಿಕಟ ಸಂಪರ್ಕದ ಮೂಲಕವೇ ಎಂದಾಯಿತು . ಆದರೆ ಸದೃಶವಾಗಿರುವುದೊಂದೇ ಸಾಲದು . ಉದಾಹರಣೆಗಾಗಿ ನೋಡಿ , ಹಿಂದೂಗಳ ವಿವಿಧ ಜಾತಿಗಳು ಆಚರಿಸುವ ಹಬ್ಬಗಳು ಒಂದೇ , ಭಿನ್ನ ಭಿನ್ನವಾಗಿಲ್ಲ . ಹೀಗೆ ಒಂದೇ ರೀತಿಯ ಹಬ್ಬಗಳನ್ನು ಆಚರಿಸುತ್ತಲಿದ್ದರೂ ಈ ಜಾತಿಗಳೆಲ್ಲ ಒಂದು ಪರಿಪೂರ್ಣ ಅಂಗಗಳಾಗಿಲ್ಲ , ಎಲ್ಲಾ ಬಿಡಿಬಿಡಿಯಾಗಿಯೇ ಉಳಿದಿವೆ . ಸಮಾನವಾದ ಚಟುವಟಿಕೆಯೊಂದರಲ್ಲಿ ಭಾಗವಹಿಸುವಾಗ ಪ್ರತಿಯೊಬ್ಬನಲ್ಲಿಯೂ ಸಮಾನ ಭಾವನೆ ಇರುವುದು ಅವಶ್ಯಕ . ಈ ಸರ್ವಸಮಾನವಾದ ಕಾರ್ಯದ ಯಶಸ್ಸು ನನ್ನ ಯಶಸ್ಸು , ಇದರ ಸೋಲು ನನ್ನ ಸೋಲು ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಇದ್ದರೆ ಮಾತ್ರ ಆ ಜನರೆಲ್ಲ ಒಂದು ಸಮಾಜವಾಗಿ ಸಂಘಟಿತರಾಗುತ್ತಾರೆ .
ಹೀಗೆ ಸಮಾನ ಭಾವನೆಯಿಂದ ಒಗ್ಗೂಡುವುದನ್ನು ಜಾತಿಪದ್ಧತಿ ಪ್ರತಿಬಂಧಿಸುತ್ತದೆ . ಹೀಗಾಗಿ ಹಿಂದೂಗಳೆಲ್ಲ ಕೂಡಿ ಸಮಾಜವಾಗುವುದನ್ನು ಅದು ತಪ್ಪಿಸಿದೆ .
ಒಂದು ಗುಂಪು ಅಥವಾ ವರ್ಗ ತಾನು ವಿಶಿಷ್ಟವೆಂಬಂತೆ ಇತರರಿಂದ ಸಿಡಿದು ಪ್ರತ್ಯೇಕವಾಗಿ ನಿಲುತದೆ ಎಂದೂ , ಇದು ಸಮಾಜವಿರೋಧಿ ಭಾವನೆಯೆಂದೂ ಹಿಂದೂಗಳು ಆಗಾಗ ದೂರುತ್ತಾರೆ . ಆದರೆ ಈ ಸಮಾಜವಿರೋಧಿ ಮನೋವೃತ್ತಿಯು ಜಾತಿಪದ್ಧತಿಯ ಅತ್ಯಂತ ದುಷ್ಟವಾದ ಅನನ್ಯ ಲಕ್ಷಣವಾಗಿದೆಯೆಂಬ ಮಾತನ್ನು ಅವರು ಸುಲಭವಾಗಿ ಮರೆಯುತ್ತಾರೆ . ಜಾಗತಿಕ ಯುದ್ಧ ಕಾಲದಲ್ಲಿ ಇಂಗ್ಲಿಷರ ವಿರುದ್ಧವಾಗಿ ಜರ್ಮನರು ದ್ವೇಷಗೀತೆಯನ್ನು ಹಾಡುತ್ತಿದ್ದಂತೆ ಇಲ್ಲಿ ಒಂದು ಜಾತಿ ಇನ್ನೊಂದು ಜಾತಿಯ ವಿರುದ್ಧವಾಗಿ ದ್ವೇಷಗೀತೆ ಹಾಡಿ ಸಂತೋಷ ಪಡುತ್ತದೆ . ಹಿಂದೂಗಳ ಸಾಹಿತ್ಯದಲ್ಲಿ ಮನುಷ್ಯರ ವಂಶಾವಳಿಗಳು ತುಂಬಿವೆ. ಈ ವಂಶಾವಳಿಗಳು ಒಂದು ಜಾತಿಗೆ ಉತೃಷ್ಟ ಮೂಲವನ್ನೂ , ಇತರ ಜಾತಿಗಳಿಗೆ ಹೀನ ಮೂಲವನ್ನೂ ತಿಳಿಸುತ್ತವೆ . ಈ ಬಗೆಯ ವಿರೋಧಿ ಮನೋವೃತ್ತಿ ಜಾತಿಗಳಿಗಷ್ಟೇ ಸೀಮಿತವಾಗಿಲ್ಲ . ಈ ವಿಷ ಇನ್ನೂ ಆಳವಾಗಿ ಒಳಸೇರಿ ಉಪಜಾತಿಗಳಲ್ಲಿ ಕೂಡ ಪರಸ್ಪರ ಸಂಬಂಧ ಕೆಡುವಂತೆ ಮಾಡಿದೆ ನನ್ನ ಪ್ರಾಂತದಲ್ಲಿ ಗೋಲಕ ಬ್ರಾಹ್ಮಣರು , ದೇವರುಖ ಬ್ರಾಹ್ಮಣರು , ಕರಾಡ ಬ್ರಾಹ್ಮಣರು , ಪಲಶೇ ಬ್ರಾಹ್ಮಣರು ಮತ್ತು ಚಿತ್ಪಾವನ ಬ್ರಾಹ್ಮಣರು ಇವರೆಲ್ಲ ತಾವು ಬ್ರಾಹ್ಮಣ ಜಾತಿಯ ಉಪವರ್ಗಗಳೆಂದು ಹೇಳಿಕೊಳ್ಳುತ್ತಾರೆ .
ಬ್ರಾಹ್ಮಣ ಜಾತಿಯ ಈ ಉಪವರ್ಗಗಳಲ್ಲಿ ಕಂಡುಬರುವ ಸಮಾಜ ವಿರೋಧಿ ಪ್ರವೃತ್ತಿಯು ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವೆ ಇರುವ ದ್ವೇಷದಷ್ಟೇ ತೀವ್ರವಾಗಿದೆ . ಇಂತಹ ತೀವ್ರವಾದ ಭೇದಭಾವವಿರುವುದರಿಂದ ಜಾತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಸಂಗ ಬಂದಾಗ ಸಮಾಜವಿರೋಧಿ ಪ್ರವೃತ್ತಿ ಕಂಡುಬರುತ್ತದೆ . ಈ ಪ್ರವೃತ್ತಿ ಇತರ ಗುಂಪುಗಳ ನಡುವೆ ಸಂಪೂರ್ಣವಾಗಿ ವ್ಯವಹಾರವನ್ನು ಸ್ಥಗಿತಗೊಳಿಸುತ್ತದೆ . ಇತರ ವರ್ಗಗಳನ್ನು ತನ್ನಿಂದ ದೂರವಿಡುವ ಪ್ರವೃತ್ತಿ ಜಾಗೃತವಾಗುತ್ತದೆ . ತನಗೆ ದೊರಕಿದುದನ್ನು ಸಂರಕ್ಷಣೆ ಮಾಡುವುದೇ ಈ ಪ್ರವೃತ್ತಿಯ ಉದ್ದೇಶ . ರಾಷ್ಟ್ರಗಳು ತಮ್ಮ ಪ್ರತ್ಯೇಕ ಅಸ್ತಿತ್ವಕ್ಕಾಗಿ ಹೇಗೆ ಹೋರಾಡುತ್ತವೆಯೋ ಹಾಗೆ ಪ್ರತಿಯೊಂದು ಜಾತಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಮಾಜವಿರೋಧಿ ಮನೋವೃತ್ತಿಯನ್ನು ತಾಳುತ್ತದೆ . ಬ್ರಾಹ್ಮಣೇತರರಿಂದ ತಮ್ಮ ಸ್ವಂತ ಹಿತಾಸಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ಬ್ರಾಹ್ಮಣರಿಗೆ ಮುಖ್ಯವಾಗುತ್ತದೆ . ಅದರಂತೆ ಬ್ರಾಹ್ಮಣರಿಂದ ತಮ್ಮ ಹಿತಾಸಕ್ತಿ ಹಾಳಾಗಬಾರದು ಎಂಬುದೇ ಅಬ್ರಾಹ್ಮಣರಿಗೆ ಮುಖ್ಯವಾಗುತ್ತದೆ . ಹೀಗಾಗಿರುವುದರಿಂದ ಹಿಂದೂಗಳು ಭಿನ್ನಭಿನ್ನ ಜಾತಿಗಳ ಒಂದು ಕಲಸುಮೇಲೋಗರವಾಗಿದ್ದಾರೆಂಬುದಷ್ಟೇ ಅಲ್ಲ , ಸ್ವಾರ್ಥ ಸಾಧನೆಯೇ ಪ್ರಾಮುಖ್ಯವೆಂದುಕೊಂಡು ಹಲವಾರು ಪರಸ್ಪರ ವಿರೋಧಿ ಗುಂಪುಗಳಾಗಿ ಹೋರಾಡುತ್ತಾ ನಿಂತಿದ್ದಾರೆ.
ಪ್ರತಿಯೊಂದು ಗುಂಪೂ ತನ್ನ ಸ್ವಾರ್ಥ ಸಾಧನೆಗಾಗಿ ಹೋರಾಡುತ್ತದೆ . ಈಗಿನ ಇಂಗ್ಲಿಷ್ ಜನತೆಯ ಪೂರ್ವಜರು ಗುಲಾಬಿ ಯುದ್ದಗಳಲ್ಲಿ ಹಾಗೂ ಕ್ರಾಮ್ವೆಲ್ ಯುದ್ದದಲ್ಲಿ ಒಂದು ಪಕ್ಷವನ್ನೋ ಇನ್ನೊಂದು ಪಕ್ಷವನ್ನೋ ವಹಿಸಿ ಪರಸ್ಪರವಾಗಿ ಹೊಡೆದಾಡಿದರು . ಆದರೆ ಒಂದು ಪಕ್ಷದವರ ವಂಶದವರು ಇನ್ನೊಂದು ಪಕ್ಷದವರ ವಂಶದವರನ್ನು ದ್ವೇಷಿಸುವುದಿಲ್ಲ . ಸೇಡಿನ ಮನೋಭಾವನೆಯ ಪೂರ್ವಕಾಲದ ಜಗಳ ಮರೆತುಹೋಗಿದೆ . ಆದರೆ ಭಾರತದಲ್ಲಿ ನಡೆದುದೇ ಬೇರೆ . ಬ್ರಾಹ್ಮಣರು ಶಿವಾಜಿಗೆ ಅಪಮಾನ ಮಾಡಿದರೆಂಬುದನ್ನು ನೆನಪಿಟ್ಟುಕೊಂಡು ಈಗಿನ ಬ್ರಾಹ್ಮಣೇತರರು ಈಗಿನ ಬ್ರಾಹ್ಮಣರನ್ನು ಕ್ಷಮಿಸಲಾರರು . ಹಿಂದೊಂದು ಕಾಲದಲ್ಲಿ ಕಾಯಸ್ಥರನ್ನು ಕುಖ್ಯಾತಿಗೆ ಈಡು ಮಾಡಿರುವುದರಿಂದ ಇಂದಿನ ಕಾಯಸ್ಥರು ಇಂದಿನ ಬ್ರಾಹ್ಮಣರನ್ನು ಕ್ಷಮಿಸಲಾರರು . ಇದೆಲ್ಲ ಆದದ್ದು ಯಾತರಿಂದ ? ಖಂಡಿತವಾಗಿ ಜಾತಿಪದ್ಧತಿಯಿಂದಲೇ ಆಯಿತು . ಜಾತಿಪಟ್ಟೆ ಬಲಿಷ್ಠವಾಗಿ ಉಳಿದುಬಂದಿರುವುದರಿಂದ ಪೂರ್ವಕಾಲದ ಜಾತಿ ಕಲಹಗಳ ಸ ಅಚ್ಚಳಿಯದೆ ಉಳಿದು ಐಕ್ಯವನ್ನು ಪ್ರತಿಬಂಧಿಸಿದೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401