ದಿನದ ಸುದ್ದಿ

15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ, ಜುಲೈ 25 ರಂದು ಪ್ರಮಾಣ ವಚನ ಸ್ವೀಕಾರ

Published

on

ಸುದ್ದಿದಿನ ಡೆಸ್ಕ್ : ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ಈ ಹುದ್ದೆಗೇರಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು ಅವರು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಇದೇ 18ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ 64ವರ್ಷದ ದ್ರೌಪದಿ ಮುರ್ಮು ಅವರು ಶೇಕಡಾ 64ರಷ್ಟು ಮತಗಳಿಸುವ ಮೂಲಕ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ವಿರುದ್ಧ ಜಯಗಳಿಸಿದ್ದಾರೆ ಎಂದು ರಾಷ್ಟ್ರಪತಿ ಚುನಾವಣೆ ಹಾಗೂ ರಾಜ್ಯಸಭಾ ಮುಖ್ಯ ಕಾರ್ಯದರ್ಶಿ ಪಿ ಸಿ ಮೋದಿ ತಿಳಿಸಿದ್ದಾರೆ.

ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಶೇಕಡಾ 36ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಒಡಿಶಾದಲ್ಲಿ ಕೌನ್ಸಿಲರ್ ಆಗಿ ರಾಜಕೀಯ ಜೀವನ ಪ್ರಾರಂಭಿಸಿದ ಮತ್ತು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಜಾರ್ಖಂಡ್‌ನ ಮಾಜಿ ಗವರ್ನರ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಸುಲಭ ಜಯ ಸಾಧಿಸಿದ್ದಾರೆ.

ರಾಮನಾಥ್ ಕೋವಿಂದ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುರ್ಮು ಗೆಲುವಿಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಸಚಿವರು ಸೇರಿದಂತೆ ಹಲವಾರು ನಾಯಕರು ಶುಭಾಶಯ ತಿಳಿಸಿದ್ದಾರೆ.

ದ್ರೌಪದಿ ಮರ್ಮು ಅವರು ಆಳವಾದ ಆಧ್ಯಾತ್ಮಿಕ ಮತ್ತು ಮೃದು ಸ್ವಭಾವದ ವ್ಯಕ್ತಿ ಎಂದು ಬಿಜೆಪಿ ನಾಯಕ ಮತ್ತು ಲೋಕಸಭಾ ಸದಸ್ಯ ಬಸಂತ್ ಕುಮಾರ್ ಪಾಂಡ ಹೇಳಿದ್ದಾರೆ.

ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್ ಸಮುದಾಯದಲ್ಲಿ ಜನಿಸಿರುವ ಮುರ್ಮು ಸವಾಲುಗಳ ನಡುವೆಯೂ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮಾಡಿದ್ದರು. 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್‌ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. ದ್ರೌಪದಿ ಮುರ್ಮು 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015 ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version