ದಿನದ ಸುದ್ದಿ
ಮರಕ್ಕೆ ಡ್ರಿಪ್ಸ್ ಹಾಕ್ತಾರೆಂದರೆ ನಂಬ್ತೀರಾ?
ಸುದ್ದಿದಿನ ವಿಶೇಷ : ಮನುಷ್ಯರಿಗೆ ಆರೋಗ್ಯ ಸರಿಯಿಲ್ಲೆಂದರೆ ವೈದ್ಯರ ಸಲಹೆಯಂತೆ ಡ್ರಿಪ್ಸ್ ಹಾಕೋದು ಸಹಜ. ಆದರೆ, ಮರಕ್ಕೆ ಡ್ರಿಪ್ಸ್ ಹಾಕ್ತಾರೆಂದರೆ ನಂಬ್ತೀರಾ. ಇದು ನಂಬಲೇ ಬೇಕಾದ ವಿಷಯ..!
ಅದು ತೆಲಂಗಾಣ ರಾಜ್ಯದ ಮಹಬೂಬ್ ನಗರ ಜಿಲ್ಲೆಯ ದಡ್ಡಡವಿ. ಅಲ್ಲಿ ಸಾವಿರಾರು ಬಗೆಯ ಸಸ್ಯ ಸಂಕುಲವೇ ಇದೆ. ಇದರಲ್ಲೊಂದು 700 ವರ್ಷಗಳ ಪುರಾತನ ಆಲದ ಮರವಿದೆ. ಇದಕ್ಕೆ ಗೆದ್ದಲು ಹತ್ತಿದ್ದರಿಂದ ಆನಾರೋಗ್ಯಕ್ಕೆ ಒಳಗಾಗಿ ಅಳಿವಿನಂಚಿಗೆ ತಲುಪಿದೆ. ಇದನ್ನು ಉಳಿಸಿಕೊಳ್ಳಲು ಆ ರಾಜ್ಯದ ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ದೇಶದ ಎರಡನೇ ಅತಿದೊಡ್ಡದಾದ ಈ ಆಲದ ಮರವು ಅಂದಾಜು 3 ಎಕರೆಯಲ್ಲಿ ಹರಡಿಕೊಂಡಿದೆ. ಇದು ಮರದ ತುಂಬ ಹರಡಿಕೊಂಡಿದ್ದು, ಅವಸಾನದ ಅಂಚಿಗೆ ಬಂದಿದೆ. ಅರಣ್ಯಾಧಿಕಾರಿಗಳು ಕೂಡಲೇ ಪ್ರವಾಸಿಗರು ವೀಕ್ಷಣೆಗೆ ಬರುವುದನ್ನು ನಿರ್ಬಂಧಿಸಿ ನಾಲ್ಕು ಹಂತದಲ್ಲಿ ಆ ಮರಕ್ಕೆ ಚಿಕಿತ್ಸೆ ನೀಡಲು ಯೋಜನೆ ರೂಪಿಸಿಕೊಂಡರು.
ಬೃಹತ್ ಆಲದ ಮರಕ್ಕೆ ಮಾರ್ಚ್‌ನಲ್ಲಿ ಚಿಕಿತ್ಸೆ ಆರಂಭವಾಯಿತು. ಮೊದಲು ಆಲದ ಮರದ ಸುತ್ತ ಟ್ರೆಂಚ್ (ತಂತಿ ಬೇಲಿ) ಹಾಕಿದರು. ನಂತರ ತಾಯಿ ಬೇರುಗಳಿಗೆ ಚಿಕಿತ್ಸೆ ನೀಡಿದರು. ಮೆಕಾನಿಕಲ್ ಸಪೋರ್ಟ್ ಮತ್ತು ರೆಂಬೆ, ಕೊಂಬೆಗಳಿಗೆ ಆರೈಕೆ ಮಾಡುವ ಯೋಜನೆ ರೂಪಿಸಿಕೊಂಡರು.
ಮರದ ತಾಯಿ ಬೇರುಗಳಿಗೆ ನಿಯಮಿತವಾಗಿ ಒಂದು ಲೀಟರ್ ನೀರಿನೊಂದಿಗೆ 20 ಎಂಎಲ್ ಕ್ಲೋರಿಪಿರಿಫೊಸ್ ಹಾಯಿಸಲಾಗುತ್ತಿತ್ತು. ರೆಂಬೆ ಕೊಂಬೆಗಳಲ್ಲಿ ಎರಡು ಮೀಟರ್‌ಗೊಂದರಂತೆ ರಂಧ್ರ ಮಾಡಿ ಡ್ರಿಪ್ ಮೂಲಕ ಔಷಧ ನೀಡಲಾಗುತ್ತಿದೆ. ಅಲ್ಲದೇ ರೆಂಬೆಗಳಿಗೆ ಗೆದ್ದಲು ಹತ್ತದಂತೆ ರಕ್ಷಣೆ ಮಾಡಲು ಆರ್.ಆರ್.ಸಿ ಪಿಲ್ಲರ್ ಹಾಕಲಾಗಿದೆ. ಇದು ಮೆಕಾನಿಕಲ್ ಪ್ರೊಸಿಜರ್ ಆಗಿದೆ. ಈ ರೀತಿ ಮಾಡುತ್ತಿರುವುದರಿಂದ ಬೃಹತ್ ಆಲದ ಮರವು ದಿನದಿಂದ ಚೇತರಿಸಿಕೊಳ್ಳುತ್ತಿದೆ.