Connect with us

ದಿನದ ಸುದ್ದಿ

ಜೀವನಾಧಾರ ಮತ್ತು ಉತ್ತಮ ಅವಕಾಶಗಳಿಗಾಗಿ ಚಾಲನಾ ವೃತ್ತಿ; ಮಹಿಳೆಯರನ್ನು ಬೆಂಬಲಿಸುವ ರಾಷ್ಟ್ರೀಯ ಅಭಿಯಾನ

Published

on

ಸುದ್ದಿದಿನ,ಬೆಂಗಳೂರು : ಯುನೈಟೆಡ್ ಕಿಂಗ್ಲಂ (ಯುಕೆ) ಮೂಲದ ಶೆಲ್ ಫೌಂಡೇಶನ್ ಮತ್ತು ಯುಕೆ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂವಿಂಗ್ ವುಮೆನ್ ಸೋಷಿಯಲ್ ಇನಿಷಿಯೇಟಿವ್ ಫೌಂಡೇಶನ್ (MOWO) “ಮೂವಿಂಗ್ ಬೌಂಡರೀಸ್” ಎಂಬ ಅಭಿಯಾನವನ್ನು ಆರಂಭಿಸಿದೆ.

ಇದು, ಮಹಿಳೆಯರು ಚಾಲನಾ ಕೌಶಲವನ್ನು ಪಡೆದು ವ್ಯವಸ್ಥೆಯಲ್ಲಿನ ಅಡೆತಡೆಯನ್ನು ನಿವಾರಿಸಿಕೊಂಡು ಸಾರಿಗೆ ವ್ಯವಹಾರ ಕ್ಷೇತ್ರದಲ್ಲಿ ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವುದನ್ನು ಉತ್ತೇಜಿಸುವ ಅಭಿಯಾನವಾಗಿದೆ. ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರಾಗಿ ಅಥವಾ ಇ-ಕಾಮರ್ಸ್ ಕಂಪನಿಗಳಿಗೆ ಡೆಲಿವರಿ ಏಜೆಂಟ್ಸ್ ಆಗಿ ಕಾರ್ಯನಿರ್ವಹಿಸುವುದಕ್ಕೆ ಪ್ರೇರಣೆ ನೀಡಲಾಗುತ್ತದೆ.

ಈ ಅಭಿಯಾನದಲ್ಲಿ, MOWO ಸಂಸ್ಥಾಪಕರಾದ ಜೈ ಭಾರತಿ ಅವರು ತಮ್ಮ ಮೋಟಾರ್ ಬೈಕ್‌ನಲ್ಲಿ ಭಾರತದಾದ್ಯಂತ ಅಕ್ಟೋಬರ್ 11ರಿಂದ 40 ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಈ ಅವಧಿಯಲ್ಲಿ ಅವರು 20 ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿ ಅಲ್ಲಿ ಮಹಿಳೆಯರು ಚಾಲನಾ ಕೌಶಲ ಅಭಿವೃದ್ಧಿ ಪಡಿಸಿಕೊಳ್ಳುವುದರಿಂದ ಅವರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬ ಅರಿವು ಮೂಡಿಸುವುದು ಮತ್ತು ಚಾಲನಾ ವೃತ್ತಿ ಕಲಿಕೆಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಾರೆ.

ಅವರು ಈ ಪ್ರವಾಸದ ಅಂಗವಾಗಿ ಇಂದು ಬೆಂಗಳೂರಿಗೆ ತಲುಪಿದ್ದಾರೆ. ಹೈದರಾಬಾದ್‌ನಿಂದ ಅವರ ಪ್ರವಾಸ ಆರಂಭವಾಗಿದ್ದು, ಮುಂದೆ ಚೆನ್ನೈ, ಕೊಚ್ಚಿ, ಗೋವಾ, ಪುಣೆ, ಮುಂಬೈ, ಸೂರತ್, ಅಹಮದಾಬಾದ್, ಉದಯಪುರ್, ಜೈಪುರ, ಅಮೃತಸರ, ಶ್ರೀನಗರ, ನವದೆಹಲಿ, ಲಖನೌ, ಅಲಹಾಬಾದ್, ಪಟನಾ, ಗುವಾಹಟಿ, ಕೋಲ್ಕತ, ರಾಂಚಿ, ಭುವನೇಶ್ವರ ಮತ್ತು ಇತರೆ ನಗರಗಳಿಗೆ ಭೇಟಿ ನೀಡುವವರಿದ್ದಾರೆ.

ಮಹಿಳೆಯರಲ್ಲಿ ಚಾಲನಾ ಶಕ್ತಿ ಮಹತ್ವವನ್ನು ಸಾರುತ್ತ, ಪ್ರಯಾಣದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುತ್ತ ಅವರು ಸಾಗುತ್ತಿದ್ದಾರೆ. ಅಲ್ಲದೆ, ಮಹಿಳೆಯರು ತಮ್ಮ ಬದುಕಿನ ಎಲ್ಲ ಆಯಾಮಗಳಲ್ಲೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಸುರಕ್ಷಿತವಾಗಿ ಓಡಿಸುವ ಮತ್ತು ಪ್ರಯಾಣಿಸುವ ಶಕ್ತಿಯನ್ನು ಪಡೆದುಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಅವರ ಉದ್ದೇಶ, ಡ್ರೈವಿಂಗ್ ಕಲಿಯುವುದು ಮಾತ್ರವಲ್ಲದೆ ಸ್ವಂತ ಇಲೆಕ್ನಿಕ್ ವಾಹನವನ್ನು ಖರೀದಿಸಿ ಅವುಗಳ ಮೂಲಕ ಆದಾಯ ಗಳಿಸುವುದಕ್ಕೆ ಅನುವು ಮಾಡಿಕೊಡುವುದು. ಇಲೆಕ್ನಿಕ್ ವಾಹನಗಳನ್ನು ಬಳಸುವುದರಿಂದಾಗಿ ಕಾರ್ಬನ್ ಹೊರಸೂಸುವಿಕೆ ತಗ್ಗಿಸುವ ಮೂಲಕ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಸಾಧ್ಯವಾಗಲಿದೆ ಎಂಬ ಆಶಯವನ್ನೂ ಅವರು ಪ್ರಚುರ ಪಡಿಸುತ್ತಿದ್ದಾರೆ.

‘ಇವನ್ ಕಾರ್ಗೊ’ ಎಂಬ ಸಾಮಾಜಿಕ ಉದ್ಯಮವೊಂದು ಇಲೆಕ್ನಿಕ್ ವಾಹನಗಳ ಮಾಲೀಕತ್ವ ಹೊಂದಲು ಮಹಿಳೆಯರಿಗೆ ಬೇಕಾದ ತರಬೇತಿ, ಉದ್ಯೋಗಾವಕಾಶಕ್ಕೆ ಬೇಕಾದ ಕೌಶಲಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಕೂಡ ಈ ಅಭಿಯಾನವನ್ನು ಬೆಂಬಲಿಸುತ್ತಿದೆ.

“ಮೂವಿಂಗ್ ಬೌಂಡರೀಸ್’ ಬಗ್ಗೆ ಪ್ರತಿಕ್ರಿಯಿಸಿದ ‘MOWO’ ಸಂಸ್ಥಾಪಕರಾದ ಜೈ ಭಾರತಿ ಅವರು ಹೇಳಿದ್ದಿಷ್ಟು – ಜಗತ್ತಿನಾದ್ಯಂತ ಮಹಿಳೆಯರ ಓಡಾಟದ ಮೇಲೆ ಒಂದಷ್ಟು ನಿಯಮ, ನಿಬಂಧನೆಗಳು ಇವೆ. ಇದೇ ಕಾರಣಕ್ಕೆ ಅವರು ಒಂದು ಉತ್ತಮ ಶಿಕ್ಷಣ ಪಡೆಯುವುದಕ್ಕೋ ಅಥವಾ ಸಂಕೀರ್ಣ ಉದ್ಯೋಗ ಮಾಡುವುದಕ್ಕೋ ಅಥವಾ ಪ್ರಯಾಣ ಸುರಕ್ಷಿತವಲ್ಲ ಎಂಬ ಕಾರಣಕ್ಕೂ ದೀರ್ಘ ದೂರ ಪ್ರಯಾಣಿಸುವುದು ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಅವರಿಗೆ ಬಹಳ ಸೀಮಿತ ಉದ್ಯೋಗಾವಕಾಶವಷ್ಟೇ ಸಿಗುತ್ತಿದೆ. ದೇಶದ ಎಲ್ಲ ವರ್ಗದ ಮಹಿಳೆಯರನ್ನು ಭೇಟಿ ಮಾಡುವುದಕ್ಕೆ ನನ್ನ ಮೋಟಾರ್ ಬೈಕ್‌ನಲ್ಲಿ ಕೈಗೊಳ್ಳುತ್ತಿರುವ ಈ 40 ದಿನಗಳ ಪ್ರವಾಸ ನಿಜಕ್ಕೂ ಖುಷಿ ಮತ್ತು ಉತ್ತಮ ಅನುಭವವನ್ನು ಕೊಡುವಂಥದ್ದು.

ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಮಹಿಳೆಯರಿಗೆ ಅವರ ಉದ್ಯೋಗ ಮಾಡುವುದಕ್ಕೆ ಉತ್ತೇಜನ ನೀಡುವಂಥದ್ದು ಮತ್ತು ಅದಕ್ಕೆ ಬೇಕಾದ ಕಾರ್ಯಾಗಾರ ಆಯೋಜಿಸುವುದು ಈ ಪ್ರವಾಸದ ಉದ್ದೇಶ, ಚಾಲನೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವುದು ಮಹಿಳೆಯರಿಂದಲೂ ಸಾಧ್ಯವಿದೆ ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಬೇಕು.

ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರಿಗೂ ಅವಕಾಶವಿದ್ದು, ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅವರು ತಮ್ಮ ಸ್ವಂತ ವಾಹನಗಳನ್ನು ಚಲಾಯಿಸಿಕೊಂಡು ಜೀವನೋಪಾಯವನ್ನು ಕಂಡುಕೊಳ್ಳುವಂತೆ ಮಾಡಬೇಕು. ಪುರುಷ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಮಹಿಳೆಯರಿಗೂ ಉದ್ಯೋಗಾವಕಾಶ ಹೆಚ್ಚಿಸುವುದು ಉತ್ತಮ ನಡೆಯಾಗಿದೆ.”

ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸುತ್ತ ಶಲ್ ಫೌಂಡೇಶನ್‌ನ ಶ್ರೀಮತಿ ಶಿಪ್ರಾ ನಯ್ಯರ್, “ನಾವು ‘ಮೂವಿಂಗ್ ಬೌಂಡರೀಸ್ ಗೆ ಚಾಲನೆ ನೀಡಿದ್ದೇವೆ. ಇದು ಮಹಿಳೆಯರಿಗಾಗಿ ಸುರಕ್ಷಿತ, ಕೈಗೆಟಕುವ ಮತ್ತು ಸ್ವಚ್ಛ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಮೂಲಕ ಮಹಿಳೆಯರು ಅವರ ತಮ್ಮ ಬದುಕಿಗೆ ಅಗತ್ಯ ಮೂಲಸೌಕರ್ಯಗಳಾದ ಆರೋಗ್ಯಸೇವೆ, ಶಿಕ್ಷಣ ಮತ್ತು ಉದ್ಯೋಗ ಹೊಂದುವಂತಾಗಬೇಕು.

ಇ-ರಿಕ್ಷಾಗಳು ಮತ್ತು ಡೆಲಿವರಿ ಏಜೆಂಟ್ ಮುಂತಾದ ಕೆಲಸಗಳ ಮೂಲಕ ಸಾರಿಗೆ ಸಂಬಂಧಿತ ವಲಯಗಳಲ್ಲಿ ತಮ್ಮ ವಾಹನಗಳ ಮಾಲೀಕರು, ಉದ್ಯಮಿಗಳಾಗುವುದನ್ನು ಕಲಿಯುವ ಮೂಲಕ ಹೆಚ್ಚಿನ ಮಹಿಳೆಯರು ಈ ಕ್ಷೇತ್ರಕ್ಕೆ ಕಾಲಿರಿಸುವಂತಹ ವಾತಾವರಣವನ್ನು ನಿರ್ಮಿಸುವ ಕಡೆಗೆ ಗಮನಹರಿಸುವುದು. ಮಹಿಳೆಯರು ಹೆಚ್ಚು ಹೆಚ್ಚು ಚಲನಶೀಲರಾಗುವ ನಿಟ್ಟಿನಲ್ಲಿ ಅವರಿಗೆ ನೆರವಾಗುವುದು ಮತ್ತು ಸಮಾನವಾದ ಅವಕಾಶಗಳು ಅವರಿಗೆ ಸಿಗಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ.

ಮುಂದಿನ 5 ವರ್ಷಗಳ ಅವಧಿಯಲ್ಲಿ ಕಡಿಮೆ ಆದಾಯ ಹೊಂದಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಮತ್ತು ಉದ್ಯೋಗ ಒದಗಿಸುವ ಇಂತಹ ಉದ್ಯಮಗಳನ್ನು ಇನ್ನಷ್ಟು ಸ್ಥಾಪಿಸುವುದನ್ನು ಬೆಂಬಲಿಸುವ ಕೆಲಸ ಮಾಡುತ್ತೇವೆ. ಇದರಂತೆ 100 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಗ್ರಾಮಗಳಲ್ಲಿ ಗಣನೀಯವೆನ್ನುವ ಪ್ರಮಾಣದಲ್ಲಿ ಮಹಿಳಾ ಚಾಲಕರು ಸ್ವಂತ ವಾಹನ ಮತ್ತು ಇಲೆಕ್ನಿಕ್ ವಾಹನ ಓಡಿಸುವುದನ್ನು ನಾವು ಕಾಣುವವರಿದ್ದೇವೆ. ಭಾರತದಾದ್ಯಂತ ಇರುವ ಇತರೆ ಮಹಿಳೆಯರಿಗೆ ಇದರಿಂದ ಸುರಕ್ಷಿತ ಸಾರಿಗೆ ಮತ್ತು ಸಂಪರ್ಕವನ್ನು ಇದು ಒದಗಿಸಲಿದೆ.”

ಮಹಿಳೆಯರಿಗಾಗಿ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಉತ್ತೇಜಿಸುವುದು ಶಟ್ ಫೌಂಡೇಶನ್‌ನ ಪ್ರಮುಖ ಗುರಿಯಾಗಿರುತ್ತದೆ. ಯುಕೆ ಸರ್ಕಾರ ಮತ್ತು ಶೆಲ್ ಫೌಂಡೇಶನ್ ಜತೆಯಾಗಿ “POWERED (ಪ್ರೊಮೋಶನ್ ಆಫ್ ವುಮೆನ್ ಇನ್ ಎನರ್ಜಿ ರಿಲೇಟೆಡ್ ಎಂಟರ್‌ಪ್ರೈಸಸ್ ಫಾರ್ ಡೆವಲಪ್‌ಮೆಂಟ್)ಗೆ 2017ರಲ್ಲಿ ಚಾಲನೆ ನೀಡಿದೆ.

ಇದು ಮಹಿಳಾ ಕೇಂದ್ರಿತ ಕಾರ್ಯಕ್ರಮವಾಗಿದ್ದು ಭಾರತದಲ್ಲಿ ಕ್ಲೀನ್ ಎನರ್ಜಿ ಮತ್ತು ಮೊಬಿಲಿಟಿ ವ್ಯಾಲ್ಯೂ ಚೇನ್ ಕ್ಷೇತ್ರದಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಸಾರಿಗೆ ಮತ್ತು ಸರಕು ಸಾಗಣೆ ಕ್ಷೇತ್ರದಲ್ಲಿನ ಉದ್ಯೋಗ ಹೊಂದುವುದಕ್ಕೆ ಅದೇ ರೀತಿ ಸ್ವಂತ ಇಲೆಕ್ನಿಕ್ ವಾಹನಗಳನ್ನು ಹೊಂದಿ ಆದಾಯಗಳಿಸುವುದಕ್ಕೆ POWERED ಪ್ರೋಗ್ರಾಂ ಬೆಂಬಲ ನೀಡುತ್ತದೆ.

ಶಲ್ ಫೌಂಡೇಶನ್ ಪರಿಚಯ

ಶೆಲ್ ಫೌಂಡೇಶನ್ ಎಂಬುದು ಯುಕೆಯಲ್ಲಿ ನೋಂದಾಯಿತ (ನೋಂದಾಯಿತ ದತ್ತಿ ಸಂಖ್ಯೆ: 1080999) ದತ್ತಿ ಸಂಸ್ಥೆಯಾಗಿದೆ. ಕಡಿಮೆ ಆದಾಯ ಹೊಂದಿದ ಸಮುದಾಯದ ಜನರಿಗೆ ಬೆಂಬಲ ನೀಡುತ್ತ ಅವರ ಬಡತನ ಮತ್ತು ಸಂಕಷ್ಟ ನಿವಾರಣೆಗೆ ನೆರವಾವುದಕ್ಕಾಗಿ ಕೆಲಸ ಮಾಡುತ್ತಿದೆ. ವ್ಯಾಪಾರ ಸೃಷ್ಟಿಸಲು ಮತ್ತು ಹೆಚ್ಚಿಸಲು ನಾವು ನೆರವು ನೀಡುತ್ತಿದ್ದು, ವಿಶೇಷವಾಗಿ ಎನರ್ಜಿ ಮತ್ತು ಕೈಗೆಟಕುವ ದರದ ಸಾರಿಗೆ ಅಂದರೆ ಕಾರ್ಯಸಾಧುವಾದ ಯೋಜನೆಗಳಿಗೆ ನೆರವಾಗುತ್ತೇವೆ.

ಭಾರತದಲ್ಲಿ ಯುಕೆ ಸರ್ಕಾರದ ಚಟುವಟಿಕೆ

ಯುಕೆ-ಭಾರತ ಪಾಲುದಾರಿಕೆಯು ಉತ್ತಮ ಕೆಲಸಗಳಿಗೆ ನೆರವಾಗುತ್ತಿದ್ದು, ಹೂಡಿಕೆ ಮತ್ತು ವ್ಯಾಪಾರ ಹೆಚ್ಚಿಸಲು, ಎರಡೂ ರಾಷ್ಟ್ರಗಳಲ್ಲಿ ಉದ್ಯೋಗ ಮತ್ತು ಸಂಪತ್ತು ಹೆಚ್ಚಿಸಲು, ಎರಡೂ ರಾಷ್ಟ್ರಗಳಿಗೂ ಅನ್ವಯಿಸುವ ಜಾಗತಿಕ ವಿಚಾರಗಳು ವಿಶೇಷವಾಗಿ ಬಡತನ, ಹವಾಮಾನ ವೈಪರೀತ್ಯ: ಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ಮೂವಿಂಗ್ ವುಮೆನ್ ಕುರಿತು (MOWO)

ಕ್ರಾಂತಿಕಾರಿ ಉಪಕ್ರಮವಾಗಿರುವ MOWO ನ ಮೂಲ ಹೈದರಾಬಾದ್, ಇದು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ, ಮಹಿಳ ಸ್ವತಂತ್ರಳಾಗಿ ದ್ವಿಚಕ್ರ ಅಥವಾ ತ್ರಿಚಕ್ರ ವಾಹನಗಳ ತರಬೇತಿ ಪಡೆದು ಅವರ ಜೀವನಾಧಾರ ಮತ್ತು ಉದ್ಯೋಗಾವಕಾಶ ಕಂಡುಕೊಳ್ಳಬೇಕು ಎಂಬುದು ಈ ಉಪಕ್ರಮದ ಉದ್ದೇಶ. ಭಾರತದ ಹೈದರಾಬಾದ್‌ನಲ್ಲಿ ಇದ್ದುಕೊಂಡು MOWO ಇದುವರೆಗೆ 10000+ ಮಹಿಳೆಯರನ್ನು ತಲುಪಿದ್ದು, 1500+ ಮಹಿಳೆಯರಿಗೆ ದ್ವಿಚಕ್ರ ವಾಹನ ಚಾಲನೆ ತರಬೇತಿ ನೀಡಿ, ಚಾಲನಾ ಪರವಾನಗಿ ಒದಗಿಸಿದೆ. ಕೆಲವರಿಗೆ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಉದ್ಯೋಗವನ್ನೂ ಕೊಟ್ಟಿದೆ.

ಇವೆನ್ ಕಾರ್ಗೋ ಪರಿಚಯ

ಇವೆನ್ ಕಾರ್ಗೊ – ಇದು ಭಾರತದ ಮೊಟ್ಟ ಮೊದಲ ಮಹಿಳೆಯರೇ ನಡೆಸುವ ಲಾಜಿಸ್ಟಿಕ್ಸ್ ಡೆಲಿವರಿ ಕಂಪನಿಯಾಗಿದ್ದು, ಮಹಿಳೆಯರಿಗೆ ಮೊಬಿಲಿಟಿ ಮತ್ತು ಲಾಜಿಸ್ಟಿಕ್ಸ್ ನಲ್ಲಿ ತರಬೇತಿ ನೀಡಿ ಅವರನ್ನು ಡೆಲಿವರಿ ಏಜೆಂಟ್‌ಗಳಾಗಿ ಉದ್ಯೋಗಕ್ಕೂ ಸೇರಿಸುತ್ತಿದೆ. ಜೀವನಾಧಾರವನ್ನೂ ಖಾತರಿಪಡಿಸುತ್ತಿದ್ದು, ಸುಸ್ಥಿರ ಮತ್ತು ಸಮಾನ ಚಾಲನಾವಕಾಶ ಮತ್ತು ಗೌರವದಿಂದ ಬದುಕಲು ಬೇಕಾದ ಅವಕಾಶವನ್ನು ಒದಗಿಸುತ್ತಿದೆ.

ಇದು ಮಹಿಳಾ ಕೇಂದ್ರಿತ ತರಬೇತಿ, ಸಾಮಾಜಿಕ ಮತ್ತು ಹಣಕಾಸಿನ ನೆರವನ್ನೂ ಕೊಡುತ್ತಿದೆ. ಡೆಲಿವರಿ ಅಸೋಸಿಯೇಟ್ ಆಗಿ ಕೆಲಸ ಮಾಡುವುದಕ್ಕೆ ಇಲೆಕ್ಕಿಕ ಬೈಕ್ ಖರೀದಿಸುವುದಕ್ಕೂ ಅವರು ನೆರವು ನೀಡುತ್ತಿದ್ದು, ಪ್ರಮುಖ ಇ-ಕಾಮರ್ಸ್ ಕಂಪನಿಗಳು ಸೇರಿ ಅನೇಕ ಕಂಪನಿಗಳ ಜತೆಗೆ ಪಾಲುದಾರಿಕೆ ಹೊಂದಿದ್ದಾರೆ. 2016 ರಿಂದೀಚೆಗೆ ಇವನ್ ಲೈವಿಹುಡ್ಸ್ 500 ಮಹಿಳೆಯರಿಗೆ ತರಬೇತಿ ನೀಡಿದೆ ಮತ್ತು 250 ಮಹಿಳೆಯರನ್ನು ಡೆಲಿವರಿ ಅಸೋಸಿಯೇಟ್ಸ್ ಆಗಿ ಕೆಲಸಕ್ಕೆ ಸೇರಿಸಿದೆ. ಇವರು ಈಗ ಭಾರತದ ಏಳು ವಿಭಿನ್ನ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending