ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಬರ ಅಧ್ಯಯನ ಕೈಗೊಂಡ ಕೇಂದ್ರ ತಂಡ ; ಬೆಳೆ ವೀಕ್ಷಣೆ
ಸುದ್ದಿದಿನ,ದಾವಣಗೆರೆ : ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿಗೆ ಭೇಟಿ ನೀಡಿತು.
ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್, ಎಂ.ಎನ್.ಸಿ.ಎಫ್.ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡವನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಅವರು ಸ್ವಾಗತಿಸಿದರು.
ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್ ಕುಮಾರ್ ನೇತೃತ್ವದ ತಂಡವು ಜಗಳೂರು ತಾಲ್ಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.
ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ಕೇಂದ್ರ ಬರ ಅಧ್ಯಯನ ತಂಡವು ಮೊದಲಿಗೆ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ರೈತರಾದ ಜಯಮ್ಮ ಅವರ 4 ಎಕರೆ ರಾಗಿ, ಸೋಮಶೇಖರ್ ಅವರ 1.39 ಎಕರೆಯಲ್ಲಿ ಬೆಳೆದಿರುವ ರಾಗಿ, ತಿಪ್ಪೇರುದ್ರಪ್ಪ ಅವರ 3 ಎಕರೆ ಮೆಕ್ಕೆಜೋಳ ಬೆಳೆ ವೀಕ್ಷಣೆ ನಂತರ ಶಾಂತಮ್ಮ ನವರು ಬೆಳೆದ ನವಣೆ ವೀಕ್ಷಣೆ ಮಾಡಿತು. ರೈತರು ಹಾಗೂ ಅಧಿಕಾರಿಗಳು ಮಳೆಯ ಕೊರತೆಯಿಂದ ಬೆಳೆ ಹಾನಿಯಾದ ಬಗ್ಗೆ ಪೈರುಗಳನ್ನು ತೋರಿಸಿ, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ರೈತರು ಮುಂಗಾರು ಮಳೆ ಇಲ್ಲದೆ ಬೆಳೆ ಹಾನಿಯಾದ ಬಗ್ಗೆ ಹಾಗೂ ಉಂಟಾದ ನಷ್ಟದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡು, ಬೆಳೆ ನಷ್ಟ ಪರಿಹಾರಕ್ಕೆ ರೈತರು ಮನವಿ ಮಾಡಿದರು.
ದಾವಣಗೆರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯ ಬರಪರಿಸ್ಥಿತಿ ಅಧ್ಯಯನ ಮಾಡಲು ಹಾಗೂ ವಿಸ್ತøತÀ ವರದಿ ನೀಡಲು ಜಿಲ್ಲೆಯ ಜಗಳೂರು ತಾಲ್ಲೂಕಿಗೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದ್ದು, ಜಗಳೂರು ತಾಲ್ಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಬರಪರಿಶೀಲನೆ ನಡೆಸಲಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಶೇ.93ರಷ್ಟು ಬಿತ್ತನೆಯಾಗಿದ್ದು, ತೀವ್ರ ಬರಪರಿಸ್ಥಿತಿ ಕಾರಣದಿಂದಾಗಿ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಅದರಂತೆ ಜಂಟಿ ಸಮೀಕ್ಷೆ ಮಾಡಿ 1.57 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಇನ್‍ಪುಟ್ ಸಬ್ಸಿಡಿ ನೀಡುವಂತೆ ವರದಿ ಸಲ್ಲಿಸಿದ್ದು, ಆ ವರದಿಯಂತೆ ಬರಪರಿಸ್ಥಿತಿ ಪರಿಶೀಲಿಸಿ, ವಿಸ್ತøತ ವರದಿ ನೀಡಲು ಕೇಂದ್ರ ಬರ ಅಧ್ಯಯನ ಮೂರನೇ ತಂಡದ ನೇತೃತ್ವ ವಹಿಸಿರುವ ತಂಡ ಆಗಮಿಸಿದ್ದು, ಈ ತಂಡವು ರಾಗಿ ಮತ್ತು ಮೆಕ್ಕೆಜೋಳ ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಇನ್ನೂ ಹಲವು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಲಿದೆ. ಒಟ್ಟಾರೆಯಾಗಿ ಜಿಲ್ಲೆಯ ಬರದ ಸ್ಥಿತಿಯ ಕುರಿತು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರ ಪರಿಹಾರ ನೀಡಿದ ತಕ್ಷಣ ಎಲ್ಲ ರೈತರಿಗೆ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ 2.27 ಲಕ್ಷ ಹೆಕ್ಟೇರ್ ಪೈಕಿ 1.57 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ವಿಮೆ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು 47 ಸಾವಿರ ರೈತರಿಗೂ ಬೆಳೆ ವಿಮೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ, ತೋಟಗಾರಿಕೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243