ದಿನದ ಸುದ್ದಿ
ಎಂಟು ಡ್ರೋಣ್ ಕ್ಯಾಮೇರಾಗಳಲ್ಲಿ ಸೆರೆಯಾಗಲಿದೆ ಕೊಡಗು ಪ್ರವಾಹ ಚಿತ್ರಣ : ಭಾಸ್ಕರ್ ರಾವ್
ಸುದ್ದಿದಿನ, ಮಡಿಕೇರಿ : ಮಳೆಹಾನಿಯಲ್ಲಿ ತುತ್ತಾದ ಜನರ ರಕ್ಷಣಾ ಕಾರ್ಯದಲ್ಲಿ ಸರ್ಕಾರ, ಸಾರ್ವಜನಿಕರು ಮಾಡಿದಂತಹ ಕೆಲಸವು ಶ್ಲಾಘನೀಯವಾದದ್ದು ಎಂದು ಎಡಿಜಿಪಿ ಭಾಸ್ಕರ್ ರಾವ್ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು ಅವರು ಉತ್ತಮ ಸಹಕಾರ ನೀಡಿದು,ಭಾರತೀಯ ಭೂಸೇನೆ, ವಾಯುಸೇನೆ ಉತ್ತಮ ಸಹಕಾರ ನೀಡಿದ್ದಾರೆ. ಮಳೆಹಾನಿಗೆ ಸಿಲುಕಿಕೊಂಡವರ ರಕ್ಷಣೆ ಮಾಡಿದ್ದು, ಇದುವರೆಗೂ 1750 ಜನರನ್ನು ಜಿಲ್ಲೆಯಾದ್ಯಂತ ಮಳೆಹಾನಿಗೆ ತುತ್ತಾದ ಪ್ರದೇಶದಿಂದ ರಕ್ಷಣೆ ಮಾಡಲಾಗಿದ್ದು ಇಂದಿಗೆ ಅಧಿಕೃತವಾಗಿ ರಕ್ಷಣಾ ಕಾರ್ಯ ಮುಕ್ತಾಯವಾಗಿದ್ದು, ಯಾವುದೇ ಸಂದರ್ಭದಲ್ಲಾದರೂ ರಕ್ಷಣಾ ಕಾರ್ಯಕ್ಕೆ ರಕ್ಷಣಾ ತಂಡಗಳು ಜಿಲ್ಲೆಯಲ್ಲಿ ಸನ್ನದ್ದವಾಗಿರುತ್ತದೆ. ಅಗತ್ಯವಿರುವ ಕಡೆ ಕಾರ್ಯ ನಿರ್ವಹಿಸಲು ಸನ್ನದ್ದವಾಗಿವೆ ಎಂದು ತಿಳಿಸಿದರು.
ಕರ್ನಾಟಕದ ಉತ್ತರ ಭಾಗದ ಎಂಟು ಡ್ರೋನ್ ಕ್ಯಾಮರಾಗಳನ್ನು ಜಿಲ್ಲೆಗೆ
ತರಿಸಿಕೊಳ್ಳಲಾಗುತ್ತಿದ್ದು, ಪರಿಹಾರ ಕಾರ್ಯಾಚರಣೆಗೆ ಕೊಡಗಿನಲ್ಲಿ ಪ್ರಥಮ ಬಾರಿಗೆ ಬಳಸಿಕೊಳ್ಳಲಾಗುತ್ತಿದ್ದು ಪರಿಹಾರ ಕಾರ್ಯಾಚರಣೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವವರ ಮನೆಗಳಿಗೆ ಅಗತ್ಯ ರಕ್ಷಣೆ ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಗೃಹ ರಕ್ಷಕ ಸಿಬ್ಬಂದಿಯವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದ್ದು ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ ಎಂದು ಅವರು ನುಡಿದರು.
ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನಗದು ಸಹಾಯವನ್ನು ಮಾಡಲು ಇಚ್ಚಿಸುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾದ ಸುಳ್ಳು ವದಂತಿಗಳನ್ನು ಹರಡುತ್ತಿದ್ದು, ಅಂತಹ ವದಂತಿಗಳಿಗೆ ಕಿವಿಗೊಡಬಾರದು, ಸುಳ್ಳು ವದಂತಿಗಳನ್ನು ಹರಡುವವರ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅವರು ಎಚ್ಚರಿಕೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401