ದಿನದ ಸುದ್ದಿ
ಪ್ರಚಾರದ ಕಣ ಬಿರುಸು ; ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಕಸರತ್ತು
ಸುದ್ದಿದಿನ ಡೆಸ್ಕ್ : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪ್ರಚಾರದ ಕಣ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದೆ. ಮತದಾರರ ಒಲೈಕೆಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ, ಮೇ 3 ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ ದೇವೂ ಸಿಂಹ ಚೌಹಾಣ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಮಂಡ್ಯ ಮತ್ತು ವಿಜಯಪುರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತಿತರರು ರೋಡ್ ಶೋನಲ್ಲಿ ಪಾಲ್ಗೊಂಡರು.
ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ, ಪ್ರಚಾರ ನಡೆಸಿದರು.ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೋರು ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು. ವಿಜಯನಗರ ಜಿಲ್ಲೆ ಹೂವಿನಹಗಡಗಲಿಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243