ದಿನದ ಸುದ್ದಿ
ದೇಶದ 93 ಲೋಕಸಭಾ ಕ್ಷೇತ್ರಗಳಿಗೆ ಸುಗಮ ಚುನಾವಣೆ; ಒಟ್ಟಾರೆ ಶೇಕಡ 64.58ರಷ್ಟು ಮತದಾನ
ಸುದ್ದಿದಿನ ಡೆಸ್ಕ್ : ದೇಶದ 93 ಲೋಕಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆದಿದೆ. ಕರ್ನಾಟಕದ 14, ಗುಜರಾತ್‌ನ 25, ಮಹಾರಾಷ್ಟ್ರ 11, ಉತ್ತರಪ್ರದೇಶ 10, ಮಧ್ಯಪ್ರದೇಶ 9, ಛತ್ತೀಸ್‌ಗಢ 7, ಬಿಹಾರ 5, ಅಸ್ಸಾಂ, ಪಶ್ಚಿಮ ಬಂಗಾಳದ ತಲಾ 4, ಗೋವಾ, ಕೇಂದ್ರಾಡಳಿತ ಪ್ರದೇಶ ದಾದರ್, ನಗರ್‌ಹವೇಲಿ, ದಾಮನ್, ದಿಯುವಿನ ತಲಾ ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಒಟ್ಟಾರೆಯಾಗಿ 64.58 ರಷ್ಟು ಮತದಾನವಾಗಿದೆ.
ಅಸ್ಸಾಂ ಶೇಕಡ 81.71, ಬಿಹಾರ 58.18, ಛತ್ತೀಸ್‌ಗಢ 71.06, ದಾದರ್ ಮತ್ತು ನಗರ್‌ಹವೇಲಿ ಹಾಗೂ ದಾಮನ್-ದಿಯು ಕ್ಷೇತ್ರದಲ್ಲಿ 69.87, ಗುಜರಾತ್ 59.51, ಕರ್ನಾಟಕ 70.41, ಮಧ್ಯಪ್ರದೇಶ 66.05, ಮಹಾರಾಷ್ಟ್ರ 61.54, ಉತ್ತರಪ್ರದೇಶ 57.34 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇಕಡ 76.52 ರಷ್ಟು ಮತದಾನವಾಗಿದೆ. 120 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದರು. ಚುನಾವಣಾ ಆಯೋಗದ ವೇಳಾಪಟ್ಟಿಯಂತೆ 3ನೇ ಹಂತದಲ್ಲಿ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಬೇಕಿತ್ತು.
ಗುಜರಾತಿನ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ಅಹಮದಾಬಾದ್‌ನ ನಿಶಾನ್ ವಿದ್ಯಾಲಯದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾಧಿತ್ಯ ಸಿಂಧಿಯಾ, ಶಿವರಾಜ್‌ಸಿಂಗ್ ಚೌಹಾಣ್, ದಿಗ್ವಿಜಯ ಸಿಂಗ್, ಸುಪ್ರಿಯಾ ಸುಳೆ, ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಅವರ ರಾಜಕೀಯ ಭವಿಷ್ಯ ತೀರ್ಮಾನವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243