ದಿನದ ಸುದ್ದಿ
ಅನಾನಸಿನಲ್ಲಿ ಪಟಾಕಿಯಿಟ್ಟದ್ದು ಗರ್ಭಿಣಿ ಆನೆಗಲ್ಲ, ತಾಯ್ತನಕ್ಕೆ..!
- ಸಿದ್ದು ಸತ್ಯಣ್ಣನವರ್
ಇವರು ಅವಳ ಅನ್ನ ಕಸಿದುಕೊಂಡರು. ಅವಳು ಅನ್ನ ಅರಸಿ ಇವರಿದ್ದಲ್ಲಿಗೆ ಬಂದಳು. ಅನ್ನ ಅರಸಿ ಹಸಿದು ಬಂದ ಆ ಗರ್ಭಿಣಿಗೆ ಮನುಷ್ಯನೆಂಬ ನೀಚ ಪ್ರಾಣಿ ಅನಾನಸ್ ಹಣ್ಣಿನಲ್ಲಿ ಪಟಾಕಿ ತುಂಬಿಸಿ ನೀಡಿದ. ಹಾಗೇ ಅನ್ನವೆಂದುಕೊಂಡೇ ಅದನ್ನು ತಿಂದವಳು ಹಸಿವೆಗೆ ನರಳಿ ನಾಡಿನತ್ತ ಬಂದ ಗರ್ಭಿಣಿ ಆನೆ. ಮನುಷ್ಯನ ಕ್ರೂರತನ ಯಾವ ಮಟ್ಟದ್ದು? ಯೋಚಿಸಿದರೆ ಆ ಆನೆಯ ನೋವಿನ ಸಂಕಟಕ್ಕೆ ಅದು ನೀರಲ್ಲಿ ನಿಂತ ಚಿತ್ರ ಕಾಡುತ್ತದಷ್ಟೆ.
ಕೇರಳದ ವೆಲ್ಲಿಯಾರ್ ಎಂಬಲ್ಲಿನ ಈ ಅಮಾನವೀಯ ಘಟನೆಯನ್ನು ಮಾನವ ಸಂಘಜೀವಿ ಎಂಬ ನೆಲೆಗಟ್ಟಿನಲ್ಲಿ ನೋಡುವುದಾದರೆ, ಗ್ರಹಿಸುವುದೇಗೆ ಅವನ ರಾಕ್ಷಸಿತನವನ್ನು. ಕೇರಳದ ವೆಲ್ಲಿಯಾರ್ ಎಂಬಲ್ಲಿನ ಅರಣ್ಯಾಧಿಕಾರಿ ಮೋಹನ್ ಕೃಷ್ಣ ಎಂಬುವವರು ಆ ಗರ್ಭಿಣಿ ಆನೆಯ ಸ್ಥಿತಿ ನೆನೆದು ತಮ್ಮ ನೋವನ್ನು ಬರೆದುಕೊಳ್ಳದೆ ಹೋಗಿದ್ದರೆ ಇದಾವುದು ಬೆಳಕಿಗೆ ಬರುತ್ತಲೇ ಇರಲಿಲ್ಲ.
ಪಟಾಕಿ ತುಂಬಿದ ಅನಾನಸ್ ತಿಂದ ಮೇಲೆ ಆನೆ ಊರ ತುಂಬಾ ಓಡಾಡಿದರೂ ಯಾರಿಗೂ ಸಣ್ಣ ಹಾನಿಯನ್ನೂ ಮಾಡಿಲ್ಲ. ಗಂಟಲು ಹಾಗೂ ದೇಹದೊಳಗಿನ ಉರಿಗೆ ನಡು ನೀರಿನಲ್ಲಿ ನಿಂತ ಆ ಆನೆ ಅಲ್ಲೇ ಅಸುನೀಗುವಾಗ ಎಷ್ಟು ಸಂಕಟಪಟ್ಟಿರಬಹುದು. ಕಳೆದ ಕೆಲ ದಿನಗಳ ಹಿಂದೆ ನಾಯಿಯೊಂದರ ನಾಲ್ಕು ಕಾಲೂ ಕಟ್ಟಿ ನೀರಿಗೆ ಎಸೆದವರು, ಖುಷಿಪಡುವುದು ವಿಡಿಯೋವೊಂದರಲ್ಲಿ ಸೆರೆಯಾಗಿತ್ತು.
ಈಗ ಆನೆಯ ಅನ್ನದಲ್ಲಿ ಪಟಾಕಿ ಇಟ್ಟು ಕೊಂದದ್ದು. ಮಾಂಸಾಹಾರಿ ಪ್ರಾಣಿಗಳು ಸಹ ದುರ್ಬಲ ಪ್ರಾಣಿಗಳನ್ನು ಕೊಂದು ಆಹಾರ ಕ್ರಮ ಅನುಸರಿಸಿದರೂ, ಮನುಜನ ನೀಚತನದ ಸಮೀಪಕ್ಕೂ ಸುಳಿಯಲಾರವು. ಹೆಣ್ತನದ ಭಿಕ್ಷೆಯಲ್ಲೇ ಬದುಕುವ ಈ ಗಂಡಸೆಂಬ ಯಕಶ್ಚಿತ್ ಪ್ರಾಣಿಯ ನೀಚತನ ಯಾವ ಮೇರೆಯದ್ದು. ಥತ್ !
ಸುದ್ದಿದಿನ.ಕಾಂ|ವಾಟ್ಸಾಪ್|9980346243