ದಿನದ ಸುದ್ದಿ

ಸಾವು, ನೋವು, ಹಸಿವಿಗೆ ಧರ್ಮವಿದೆಯೇ..? : ಸಿದ್ದರಾಮಯ್ಯ ನುಡಿ‌ ಮುತ್ತು..!

Published

on

ಸುದ್ದಿದಿನ, ಬೆಂಗಳೂರು : ಯಡಿಯೂರಪ್ಪ ಅವರಿಗೆ ಒಂದು ವೇಳೆ ಆಪರೇಷನ್ ಆಗಿ ರಕ್ತ ಬೇಕು ಅಂದ್ರೆ ಹಿಂದೂ ರಕ್ತನೇ ಕೊಡಿ ಎಂದು ಕೇಳುತ್ತಾರೋ? ಹಿಂದೂವಿನ ರಕ್ತ ಸಿಗುವವರೆಗೆ ರಕ್ತವನ್ನೇ ಪಡೆಯುವುದಿಲ್ಲವೇ? ಸಾವು, ನೋವು, ಹಸಿವಿಗೆ ಧರ್ಮವಿದೆಯೇ? ರಾಜಕೀಯದಲ್ಲಿ ಧರ್ಮಪಾಲನೆ ಮಾಡಲಿ, ಧರ್ಮದಲ್ಲಿ ರಾಜಕಾರಣ ಎಂದಿಗೂ ಸಲ್ಲದು‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಇಂದು‌(ಶುಕ್ರವಾರ) ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಕೃಷ್ಣ ಬೈರೇಗೌಡರಿಗೆ ಮತ ನೀಡುವಂತೆ ಕೋರಿದ ಅವರು, ನಾಡಿನ ಪರವಾದ ಧ್ವನಿ‌ ಸಂಸತ್ತಿನಲ್ಲಿ ಮೊಳಗಬೇಕು ಎಂದಾದರೆ ಕೃಷ್ಣಬೈರೇಗೌಡರಂತಹ ನಾಯಕರಿಗೆ ಜನತೆ ಮತ ನೀಡಿ, ಗೆಲ್ಲಿಸಬೇಕು‌ ಎಂದರು.

ಬಿಜೆಪಿ ನಾಯಕರು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ.‌ ಮೋದಿ ಮುಖವಾಡ ಹಾಕಿದ ವ್ಯಕ್ತಿಯನ್ನು ಜೊತೆಗಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವ ಸದಾನಂದ ಗೌಡರಿಗೆ ಸ್ವಂತ ಗುರುತಿಲ್ಲವೆ? ಸ್ವಂತ ಶಕ್ತಿಯಿಂದ ಮತವನ್ನೇ ಕೇಳಲಾಗದವರು, ಸಂಸದರಾಗಿ ಏನು ಸಾಧನೆ ಮಾಡಬಲ್ಲರು?
ಸದಾನಂದಗೌಡರು ಆನಂದದಲ್ಲಿದ್ದಾರೆ ಎಂದು ಹೇಳಿದರು.

ಆದರೆ ಅವರು ತಮ್ಮ ಮತದಾರರನ್ನ ಆನಂದದಲ್ಲಿ ಇಟ್ಟಿದ್ದಾರಾ? ರೈಲ್ವೆ ಖಾತೆಯಿಂದ ನಿಮ್ಮನ್ನ ಯಾಕೆ ಕೆಳಗೆ ಇಳಿಸಿದ್ರು ಎಂದು ನಾನೊಮ್ಮೆ ಅವರನ್ನು ಕೇಳಿದ್ದೆ. ನಾನು ಕೇಳಿದಾಗಲೂ ಸದಾನಂದಗೌಡ್ರು ಸುಮ್ನೆ ನಕ್ಕಿದ್ದರು. ಸದಾನಂದಗೌಡರ ಸಾಮರ್ಥ್ಯವೇನು ಎಂಬುದು ಆಗಲೇ ತಿಳಿಯಿತು‌ ಎಂದು ವ್ಯಂಗ್ಯವಾಡಿದರು.

ಸದಾನಂದಗೌಡ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರಿಗೆ ಏನ್ ಮಾಡಿದ್ದಾರೆ ಎಂದು ಹೇಳಲಿ. ನರೇಂದ್ರ ಮೋದಿ ಅವರು ಉದ್ಯಮಿಗಳ ರೂ.3.5 ಲಕ್ಷ ಕೋಟಿ ಸಾಲಮನ್ನಾ ಮಾಡುವಾಗ ಸದಾನಂದ ಗೌಡರಿಗೆ ರಾಜ್ಯದ ರೈತರ ನೆನಪಾಗಲಿಲ್ಲವೇ?
ಸದಾನಂದಗೌಡರನ್ನ ಬೆಂಗಳೂರಿಗರು ಸುಳ್ಯಗೆ ಕಳುಹಿಸದಿದ್ದರೆ, ಬೆಂಗಳೂರಿನ ಯುವಕರು ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿಯಬೇಕಾಗುತ್ತದೆ‌ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version