ದಿನದ ಸುದ್ದಿ

ರಾಮ ಮಂದಿರ ನಿರ್ಮಾಣವಾಗುವುದು ಬಿಜೆಪಿಗೇ ಬೇಡವಾಗಿದೆ : ಸಿದ್ದರಾಮಯ್ಯ

Published

on

ಸುದ್ದಿದಿನ, ಚಾಮರಾಜನಗರ : ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಮಾತ್ರ ನಮ್ಮ ವಿರೋಧವಿದೆ. 1992 ರಿಂದ ಇವತ್ತಿನವರೆಗೂ ಪ್ರತಿ ಚುನಾವಣೆಯಲ್ಲಿಯೂ ರಾಮಮಂದಿರ ಕಟ್ಟುತ್ತೇವೆ, ಮತ ನೀಡಿ ಎಂದು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ವಾಸ್ತವದಲ್ಲಿ ರಾಮಮಂದಿರ ನಿರ್ಮಾಣವಾಗುವುದು ಬಿಜೆಪಿಗೇ ಬೇಡವಾಗಿದೆ‌‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ‌ ನಡೆಸಿದರು.

ಚಾಮರಾಜನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ಒಂದು ಕಡೆಯಾದರೂ ತಾವು ನೀಡಿದ್ದ ಭರವಸೆಗಳೆಷ್ಟು ಮತ್ತು ಎಷ್ಟು ಈಡೇರಿಸಿದ್ದೇನೆ ಎಂದು ಹೇಳಿದ್ದಾರೆಯೇ? ಧರ್ಮ, ದೇವರು ಈ ವಿಚಾರಗಳನ್ನು ಬಿಟ್ಟು ಹೇಳಲು ಅವರಲ್ಲಿ ಬೇರೇನೂ ಇಲ್ಲ. ಜನರ ಭಾವನೆಗಳೇ ಅವರ ಬಂಡವಾಳ. ಇಂಥ ಕೀಳುಮಟ್ಟದ ರಾಜಕಾರಣ ಮಾಡಲು ಅವರಿಗೆ ನಾಚಿಕೆಯಾಗಬೇಕು‌ ಎಂದು ಕಿಡಿಕಾರಿದರು.

ಸರ್ಜಿಕಲ್ ದಾಳಿಯನ್ನು ರಾಜಕೀಯ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವುದು ದೇಶದ್ರೋಹದ ಕೆಲಸ. ಅದನ್ನೇ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಗಳ ಆಡಳಿತದಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಯುದ್ಧದಲ್ಲಿ ಸೋಲಿಸಲಾಗಿತ್ತು, ಹತ್ತಾರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು. ಅದನ್ನು ನಾವು ಎಂದಾದರೂ ರಾಜಕೀಯಕ್ಕೆ ಬಳಸಿಕೊಂಡಿದ್ದೇವೆಯೇ? ಎಂದರು.

ಬಿಜೆಪಿ ರಾಮಮಂದಿರ ಕಟ್ಟಲು ಊರೂರು ಸುತ್ತಿ ಇಟ್ಟಿಗೆ, ಕಲ್ಲು ಮತ್ತು ಹಣ ಸಂಗ್ರಹಿಸಿತ್ತು. ಅಂದು ಸಂಗ್ರಹಿಸಿದ್ದ ಇಟ್ಟಿಗೆ, ಕಲ್ಲುಗಳು ಅಯೋಧ್ಯೆಯನ್ನು ಮುಟ್ಟಲೇ ಇಲ್ಲ. ಆದರೆ ಜನರು ಕೊಟ್ಟ ಹಣ ಮಾತ್ರ ಭದ್ರವಾಗಿ ಬಿಜೆಪಿಯವರ ಜೇಬು ಸೇರಿತ್ತು ಇದುವರೆಗೂ ರಾಮ ಮಂದಿರ ಕಟ್ಟಲು ಸಂಗ್ರಹಿಸಿದ್ದ ಹಣದ ಲೆಕ್ಕ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.

ನನ್ನ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿಯವರಂತೆ ಸುಳ್ಳು ಹೇಳುವ ಪ್ರಧಾನಿಯನ್ನೇ ಕಂಡಿಲ್ಲ. ಸ್ವಾತಂತ್ರ್ಯ ನಂತರ ಒಂದಾಗಿದ್ದ ಭಾರತೀಯ ಸಮಾಜವನ್ನು ಮತ್ತೆ ‘ಒಡೆದು ಆಳಲು’ ಬಿಜೆಪಿ ಪಕ್ಷ ಹಾತೊರೆಯುತ್ತಿದೆ. ಜಾತಿ-ಧರ್ಮಗಳ ನಡುವೆ ಹುಳಿಹಿಂಡಿ ಜನರನ್ನು ಪರಸ್ಪರ ಶತ್ರುಗಳನ್ನಾಗಿ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ‌ ಸಂಸದರಾದ ಧ್ರುವನಾರಾಯಣ್ ಅವರು ತಮ್ಮ‌ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಿಗೆಯನ್ನು ಜನರ ಮುಂದಿಟ್ಟಿದ್ದಾರೆ. ಜನರಿಂದ ಚುನಾಯಿತರಾದ ಪ್ರತಿಯೊಬ್ಬ ವ್ಯಕ್ತಿ ಕೂಡ ಇದನ್ನು ಅನುಸರಿಸಬೇಕಿದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version