ರಾಜಕೀಯ
ಖರ್ಗೆ ಗೆದ್ದರೆ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬಂದಂತೆ : ಸಿದ್ದರಾಮಯ್ಯ
ಸುದ್ದಿದಿನ,ಕಲಬುರಗಿ: ಕೇಂದ್ರದಲ್ಲಿ ಬಿಜೆಪಿ ಆಡಳಿತ ಕೊನೆಗೊಂಡು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಮ್ಮ ಕಾರ್ಯಕರ್ತರು ಈ ಬಾರಿ ಸಂಕಲ್ಪ ಮಾಡಿ ಚುನಾವಣೆಯಲ್ಲಿ ಹೋರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆಕೊಟ್ಟರು.
ಕಲಬುರಗಿಯಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ, ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಇತ್ತೀಚೆಗೆ ಕಲಬುರಗಿಗೆ ಬಂದಿದ್ದರು. ಹಾಗೆಯೇ ಅವರು ದೇಶದ ಯಾವುದೇ ಭಾಗದಲ್ಲಿ ಭಾಷಣ ಮಾಡಿದರೂ ಅಭಿವೃದ್ಧಿ ಕುರಿತು ಚಕಾರ ಎತ್ತುವುದಿಲ್ಲ. ಚುನಾವಣೆ ಪೂರ್ವದಲ್ಲಿ ದೇಶದ ಜನರಿಗೆ ಕೊಟ್ಟ ಭರವಸೆಗಳೆಷ್ಟು, ಈಡೇರಿಸಿದ ಆಶ್ವಾಸನೆಗಳು ಎಷ್ಟು? ಎಂಬುದನ್ನು ಹೇಳುವುದಿಲ್ಲ. ಬದಲಿಗೆ ಭಾವನಾತ್ಮಕವಾಗಿ ಮಾತನಾಡಿ ಜನತೆಯ ದಿಕ್ಕು ತಪ್ಪಿಸುತ್ತಾರೆ ಎಂದು ಕಿಡಿಕಾರಿದರು.
ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಆಗಿದ್ದಾಗ ಎರಡು ಬಾರಿ ಮೋದಿಯವರಿಗೆ ಶಿಫಾರಸು ಮಾಡಿದ್ದೆ, ಆದರೆ ಅವರು ತಿರಸ್ಕರಿಸಿದ್ದರು. ರಾಹುಲ್ ಗಾಂಧಿಯವರು ಪ್ರಧಾನಿಯಾದರೆ ಖಂಡಿತಾ ಇದನ್ನು ಪರಿಶೀಲನೆ ನಡೆಸುತ್ತಾರೆ. ಈ ಬಗ್ಗೆ ಅವರಲ್ಲಿ ಈಗಾಗಲೇ ಮನವಿ ಮಾಡಿದ್ದೇನೆ ಎಂದರು.
ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಶ್ರಮಿಸಿದವರು ಖರ್ಗೆಯವರು. ಸಂಸತ್ತಿನಲ್ಲಿ ಸದಾಕಾಲ ನಾಡಿನ ಪರವಾದ ಧ್ವನಿಯಾಗಿ ನಿಂತವರು ಇವರು. ಇಂತಹ ಮುತ್ಸದ್ದಿ ನಾಯಕರು ರಾಜಕಾರಣದಲ್ಲಿ ಗೆಲ್ಲಬೇಕು, ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ಬರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401