ರಾಜಕೀಯ

ಕೋಟೆನಾಡಿನಲ್ಲಿ ಕಾಂಗ್ರೆಸ್ ಛಿದ್ರ: ನೈತಿಕ ಹೊಣೆ ಹೊರುವರೇ ಮಾಜಿ ಸಚಿವ ಆಂಜನೇಯ ?

Published

on

ಸುದ್ದಿದಿನ, ಚಿತ್ರದುರ್ಗ: ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆ ಈಗ ಕೈ ತಪ್ಪಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಚಳ್ಳಕೆರೆ ಹೊರತು ಪಡಿಸಿ ಐದರಲ್ಲಿ ಕಾಂಗ್ರೆಸ್ ಅಕ್ಷರಶಃ ಮಾಕಾಡೆ ಮಲಗಿದೆ.

ಆ.31ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿತ್ರದುರ್ಗ ಮತ್ತು ಹೊಸದುರ್ಗದಲ್ಲಿ ಕೈ ಛಿದ್ರವಾಗಿದೆ. ಚಳ್ಳಕೆರೆ ನಗರಸಭೆಯಲ್ಲಿ ಮಾತ್ರ ಸರಳ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ತನ್ನ ಕೊನೆಯ ಉಸಿರು ಉಳಿಸಿಕೊಂಡಿದೆ.

ಸದ್ಯದ ಕಾಂಗ್ರೆಸ್‍ನ ಈ ಸ್ಥಿತಿಗೆ ಕಾರಣ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎಚ್.ಆಂಜನೇಯ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಈ ಮಾತು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಐದು ವರ್ಷ ಅಧಿಕಾರದಲ್ಲಿದ್ದರೂ ಕೂಡ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡಲಿಲ್ಲ ಎಂಬ ಆರೋಪಗಳು ಸ್ವ ಪಕ್ಷದವರಿಂದಲೇ ಕೇಳಿಬರುತ್ತಿವೆ.

Read This: ಮಾಜಿ ಸಚಿವ ಎಚ್.ಆಂಜನೇಯ ಪ್ರತಿಷ್ಠೆ ಮಣ್ಣುಪಾಲು !

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಿಗೆ ಸಮರ್ಥರಿಗೆ ಅವಕಾಶ ನೀಡಲಿಲ್ಲ. ನಿಗಮ ಮಂಡಳಿ ಸೇರಿದಂತೆ ಕೆಲವು ಸ್ಥಾನಗಳಿಗೆ ತಮಗೆ ಬೇಕಾದವರಿಗೆ ಅವಕಾಶ ನೀಡಿದರು. ಚುನಾವಣೆ ಸಂದರ್ಭದಲ್ಲಿ ಗೆಲ್ಲುವವರನ್ನು ನೋಡಿ ಪ್ರೋತ್ಸಾಹ ನೀಡಲಿಲ್ಲ ಎಂದು ಆಪಾದನೆ ಕೂಡ ಮಾಜಿ ಸಚಿವರ ಮೇಲಿದೆ.

ಅನ್ಯರಿಗೆ ಮಣೆ ನೀಡಿದ್ದು ಸಮಸ್ಯೆಗೆ ಕಾರಣ

ಸಂಸದರ ಸ್ಥಾನಕ್ಕೆ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೇರೆ ಜಿಲ್ಲೆಯಿಂದ ಬಂದ ನಾಯಕರಿಗೆ ಮಾಜಿ ಸಚಿವ ಆಂಜನೇಯ ಅವಕಾಶ ನೀಡಿದ್ದರು. ಇದರಿಂದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತ್ತು. ಈ ಕಾರಣಕ್ಕೆ ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲು ಹಿಂದೇಟು ಹಾಕಿದರು ಎಂಬ ಮಾತು ಕೇಳಿ ಬರುತ್ತಿವೆ.

Read This : ‘ಸೂಟು-ಬೂಟಿನ ಸರದಾರ’ನಂತೆ ಯೂರೋಪ್ ಪ್ರವಾಸಕ್ಕೆ ತೆರಳಿದ ಸಿದ್ದು..!

ಪ್ರಮುಖ ಮುಖಂಡರ ಕಡಗಣನೆ

ಮಾದಿಗ ಸಮುದಾಯದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಯಾದವ ಸಮುಯಾದ ಉಮಾಪತಿ, ಡಿ.ಟಿ.ವೆಂಕಟೇಶ್ ಹಾಗೂ ಇನ್ನಿತರ ಸಮುದಾಯಗಳಿಗೆ ಸೇರಿದ ಪ್ರಮುಖ ಮುಖಂಡರನ್ನು ಕಡೆಗಣಿಸಿದ್ದೂ ಕೂಡ ಕಾಂಗ್ರೆಸ್ ಈ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಇದರಿಂದ ಕೆಲವು ಮುಖಂಡರು ಬಹಿರಂಗವಾಗಿಯೇ ಮಾಜಿ ಸಚಿವ ಆಂಜನೇಯ ವಿರುದ್ಧ ಸಭೆ ನಡೆಸಿದ್ದುಂಟು.

ಲೋಕಸಭೆ ಸ್ಥಾನ ಕೈ ತಪ್ಪುವ ಭೀತಿ

ಸದ್ಯ ಜಿಲ್ಲೆಯಲ್ಲಿ ಐದು ವಿಧಾನಸಭೆ, ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‍ಗೆ ಈಗ ಲೋಕಸಭೆ ಸ್ಥಾನ ಕೈ ತಪ್ಪುವ ಭೀತಿ ಎದುರಾಗಿದೆ. ಹಾಲಿ ಸಂಸದರಿಗೆ ಟಿಕೆಟ್ ಪಕ್ಕಾ ಆಗಿದ್ದು, ಈ ಸಾರಿ ಗೆಲವು ಕಷ್ಟ ಎಂಬ ಮಾತು ಕೇಳಿಬರುತ್ತಿವೆ. ಒಟ್ಟಾರೆ ಮಾಜಿ ಸಚಿವ ಎಚ್.ಆಂಜನೇಯ ಅವರು ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷಕ್ಕೆ ಸಮರ್ಥವಾಗಿ ದುಡಿಸಿಮಕೊಳ್ಳದಿರುವುದಕ್ಕೆ ಇಂದು ಕೋಟೆನಾಡಿನಲ್ಲಿ ಮರೆಯಾಗುವ ಲಕ್ಷಣ ಗೋಚರಿಸುತ್ತಿವೆ.

Leave a Reply

Your email address will not be published. Required fields are marked *

Trending

Exit mobile version