ದಿನದ ಸುದ್ದಿ

ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬಿತ್ತನೆ ಬೀಜ ಕೊರತೆಯಾಗದಂತೆ ರಾಜ್ಯಾದ್ಯಂತ ಕ್ರಮ

Published

on

ಸುದ್ದಿದಿನ ಡೆಸ್ಕ್ : ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹೇಳಿದ್ದಾರೆ.

ಹಾವೇರಿಯಲ್ಲಿಂದು ಮಾತಾನಾಡಿದ ಅವರು, ಜಿಲ್ಲೆಯ ಯಾವುದೇ ಭಾಗದಲ್ಲಿ ಬೀಜ-ಗೊಬ್ಬರ ಲಭ್ಯತೆಯಲ್ಲಿ ಸಮಸ್ಯೆ ಉಂಟಾದರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಗಮನಕ್ಕೆ ತನ್ನಿ. ತಕ್ಷಣ ಸ್ಪಂದಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆ ಮುಂಗಾರು ಹಂಗಾಮು ಬಿತ್ತನೆಗೆ ಬೇಕಾದ ಬೀಜಗಳು, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರ ಸೇರಿದಂತೆ ಹೆಚ್ಚುವರಿ ಮಾರಾಟ ಕೇಂದ್ರ ತೆರೆದು ಬೀಜ ವಿತರಣೆ ಮಾಡಲಾಗುವುದು. ಸಭೆಯಲ್ಲಿ ರೈತರ ಬೇಡಿಕೆಯಂತೆ ಪರಿಶೀಲನೆ ನಡೆಸಿ, ಹೆಚ್ಚುವರಿ ಬಿತ್ತನೆ ಬೀಜ ಮಾರಾಟ ಕೇಂದ್ರ ಆರಂಭಿಸುವಂತೆ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಗೆ ಕೇಂದ್ರ ಕಚೇರಿಯಿಂದ ನಿಯೋಜನೆಯಾಗಿರುವ ರಸಗೊಬ್ಬರ ಸರಬರಾಜಿನಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯವಾಗದಂತೆ ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಮೇಲು ಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲು ಮತ್ತು ಎಲ್ಲಾ ರಸಗೊಬ್ಬರ ಸರಬರಾಜು ಮಾಡುವ ಕಂಪನಿ ಪ್ರತಿನಿಧಿಗಳಿಗೆ ಕಾಪು ದಾಸ್ತಾನಿನಲ್ಲಿ ಕೆ.ಎಸ್.ಎಸ್.ಸಿ. ಮತ್ತು ಮಾರ್ಕೆಟಿಂಗ್ ಫೆಡರೇಶನ್‌ಗೆ ನಿಯಮದಂತೆ ಶೇಕಡ 40ರಷ್ಟು ದಾಸ್ತಾನನ್ನು ಜೂನ್ ಅಂತ್ಯದೊಳಗೆ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.

ಕೃಷಿ ಪರಿಕರ ಮಾರಾಟಗಾರರು ನಿಗಧಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಹಾಗೂ ಗೊಬ್ಬರಗಳ ಜೊತೆ ಬೇರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡದೇ ರೈತರಿಗೆ ಅವಶ್ಯಕತೆಯಿರುವ ಕೃಷಿ ಪರಿಕರಗಳನ್ನು ವಿತರಿಸಲು ಸೂಚನೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಡಾ. ರಮೇಶ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು, ಯಾವುದೇ ವ್ಯತ್ಯಯವಾಗದಂತೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version