ದಿನದ ಸುದ್ದಿ

ಕೋವಿಡ್ ಮಾರ್ಗಸೂಚಿಯನ್ವಯ ಸರಳ ಹಬ್ಬಗಳ ಆಚರಣೆಗೆ ಸೂಚನೆ

Published

on

ಸುದ್ದಿದಿನ,ದಾವಣಗರೆ : ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬಗಳನ್ನು ಆಚರಿಸಬೇಕಿರುವುದರಿಂದ ಯಾವುದೇ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಗುಂಪು ಸೇರಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ದಸರಾ, ದೀಪಾವಳಿ ಮತ್ತು ಈದ್ ಮಿಲಾದ್ ಆಚರಣೆ ಕುರಿತ ನಾಗರೀಕ ಶಾಂತಿ ಸೌಹಾರ್ಧ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಯಾಗಿದ್ದು, ವೈಯಕ್ತಿಕವಾಗಿ ತಮ್ಮ ಮನೆಗಳಲ್ಲಿಯೇ ಭಕ್ತಿಯಿಂದ ಆಚರಿಸೋಣ ಎಂದು ಕರೆ ನೀಡಿದರು.

ಕೋವಿಡ್ ಮಾರ್ಗಸೂಚಿಯನ್ವಯ ಹಗಲು, ರಾತ್ರಿ ಪ್ರವಚನ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ, ಸಭೆ, ಸಮಾರಂಭ ಮಾಡದಂತೆ ನಿಷೇಧಿಸಲಾಗಿದೆ. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಅವಕಾಶ ನೀಡಿದರೆ ನಮ್ಮ ಮೇಲೆ ಕ್ರಮ ಜರುಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ನಿಮ್ಮೊಂದಿಗೆ ಇವೆ. ನೀವು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ವಿವಿಧ ಸಮಾಜದ ಮುಖಂಡರಿಗೆ ಮನವಿ ಮಾಡಿದರು.

ಕೊರೊನಾ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದವರಿಗೆ ಮಾತ್ರ ಸಂಘ ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ಎನ್ನುವುದನ್ನು ಕಡ್ಡಾಯ ಎನ್ನುವ ನಿಯಮ ಜಾರಿ ಮಾಡಿದರೆ ಅಥವಾ ಪರೀಕ್ಷೆ ನಂತರ ಈ ತರಹದ ಸೌಲಭ್ಯ ನೀಡುತ್ತೇವೆ ಇಲ್ಲದಿದ್ದರೆ ಇಲ್ಲ ಎನ್ನುವ ನಿಯಮ ಮಾಡಿದರೆ ಸ್ವಾಭಾವಿಕವಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇದನ್ನು ನಾವು ಸರ್ಕಾರಿ ಆದೇಶವಾಗಿ ಹೊರಡಿಸಲು ಸಾಧ್ಯವಾಗದೇ ಇದ್ದರೂ ಕೂಡ ಎಲ್ಲ ಸಂಘ, ಸಂಸ್ಥೆಗಳಲ್ಲಿ ಈ ಪ್ರಯೋಗ ಮಾಡಿದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರಿಯಾಗುತ್ತದೆ ಎಂದ ಅವರು ಜನರು ಕೊರೊನಾ ಕುರಿತು ನಿರ್ಲಕ್ಷ್ಯ ಭಾವನೆಯಿಂದ ಹೊರಬರಬೇಕು ಎಂದು ತಿಳಿಸಿದರು.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಬರುತ್ತಿವೆ. ಇದು ಇನ್ನು ಮುಂದೆ ಕಡಿಮೆ ಆಗಲಿದೆ. ಹಾಗಾಗಿ ನಮ್ಮನ್ನು ಏನೂ ಮಾಡದು ಎಂದು ತಿಳಿದುಕೊಂಡಿದ್ದಾರೆ. ಆದರೆ ವಾಸ್ತವ ಸ್ಥಿತಿಯೇ ಬೇರೆ. ನಿತ್ಯ 3 ಸಾವಿರ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ನಿನ್ನೆ 900 ಮಾತ್ರ ಮಾಡಿದ್ದಾರೆ. ಹಾಗಾಗಿ ಕಡಿಮೆ ಪ್ರಕರಣಗಳು ದೃಢಪಟ್ಟಿವೆಯೇ ಹೊರತು ಕಡಿಮೆಯಾಗಿಲ್ಲ ಎಂದರು.

ಕಡಿಮೆ ಪ್ರಕರಣಗಳು ದೃಢಪಟ್ಟಾಕ್ಷಣ ಕೊರೊನಾ ಕಡಿಮೆಯಾಗುತ್ತಿದೆ ಎಂದು ಮೈ ಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕಿದೆ. ಪರೀಕ್ಷೆಗಾಗಿ 31 ಮೊಬೈಲ್ ತಂಡಗಳನ್ನು ಹಾಗೂ 23 ಸ್ಥಿರ ತಂಡಗಳನ್ನು ಗಂಟಲು ದ್ರವ ಸಂಗ್ರಹಕ್ಕೆ ನಿಯೋಜನೆ ಮಾಡಲಾಗಿದೆ. ಆದರೂ ಜನ ಪರೀಕ್ಷೆ ಮಾಡಿಸಲು ಮುಂದೆ ಬರುತ್ತಿಲ್ಲ. ಕೆಲವರು ನಮಗೆ ಏನೂ ಆಗಿಲ್ಲ ಎಂದು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮುಚ್ಚಿಟ್ಟರೆ ಅದು ನಮ್ಮನ್ನು ಬಿಡುವುದಿಲ್ಲ. ತನ್ನೊಂದಿಗೆ ಕರೆದೊಯ್ಯುತ್ತದೆ. ಆದ್ದರಿಂದ ಪರೀಕ್ಷಾ ತಂಡಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಮಾತನಾಡಿ, ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ತೆರಳುವ ಭಕ್ತರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ತಾಜ್ ಮಹಲ್ ಸೇರಿದಂತೆ ಇತರೆ ಐತಿಹಾಸಿಕ ಸ್ಮಾರಕಗಳನ್ನು ನೋಡಲು ಹೋಗವವರ ಕಾಲಿಗೆ ಬಟ್ಟೆಯ ಚೀಲ ನೀಡುವಂತೆ ನಮ್ಮಲ್ಲೂ ವ್ಯವಸ್ಥೆ ಆಗಬೇಕು ಎಂದರು.

ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಾಂಪ್ರಾದಾಯಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಳ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈದ್ ಮಿಲಾದ್ ಕಮಿಟಿ ಕಾರ್ಯದರ್ಶಿ ಯಾಸೀನ್ ಪೀರ್ ತಾಜ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯವೇ ಹಬ್ಬ ಆಚರಿಸಲು ಸಮಾಜದ ಬಾಂಧವರು ಮುಂದಾಗಿದ್ದು, ಈ ಸಂಬಂಧ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ಚಮನ್ ಸಾಬ್, ಶಿರಾಜ್ ಅಹಮದ್, ಹಿಂದೂಪರ ಸಂಘಟನೆಯ ಸತೀಶ್ ಪೂಜಾರ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಒಪ್ಪಿಕೊಂಡು ಮನೆಗಳಲ್ಲಿಯೇ ಸರಳವಾಗಿ ಹಬ್ಬಗಳನ್ನು ಆಚರಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version