ದಿನದ ಸುದ್ದಿ
ತತಕ್ಷಣ ಕೆರೆಗಳಿಗೆ ನೀರು ತುಂಬಿಸಿ: ಸಿ.ಎಸ್.ಪುಟ್ಟರಾಜು
ಸುದ್ದಿದಿನ,ಮಂಡ್ಯ: ವಿಶ್ವೇಶ್ವರಯ್ಯ ನಾಲೆ ಹಾಗೂ ಹೇಮಾವತಿ ನಾಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳನ್ನು ತತಕ್ಷಣದಲ್ಲಿ ತುಂಬಿಸಲು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನೀರಾವರಿ ಇಲಾಖೆ ಹಾಗೂ ಇಂಧನ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದೆಲ್ಲೆಡೆ ಉತ್ತಮ ಮಳೆಯಾದರೂ ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೊನೆ ಭಾಗದ ಕೆರೆಗಳು ತುಂಬದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸದಂತಾಗಿದೆ ಎಂದರು.
ಕೃಷಿ ಚಟುವಟಿಕೆಗೆ, ನೀರೇ ಜೀವಾಳವಾಗಿದ್ದು, ಮಂಡ್ಯ ಜಿಲ್ಲೆಯ ರೈತರಿಗೆ ನೀರಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗೊಳಗಾಗಬಾರದು. ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕಿದ್ದು, ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿದ್ರ್ಯಾಕ್ಷಿಣ್ಯವಾಗಿ ಕ್ರಮವಹಿಸಲು ಮುಂದಾಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಲೆಗಳ ನಿರ್ಮಾಣಕ್ಕೆ ರೈತರಿಂದ ಪಡೆದಿರುವ ಭೂಮಿಗೆ ಪರಿಹಾರ ನೀಡಿಲ್ಲವೆಂದು ರೈತರಿಂದ ದೂರುಗಳು ಕೇಳಿಬಂದಿವೆ. ಅಭಿವೃದ್ಧಿ ಕಾರ್ಯಕ್ಕೆಂದು ರೈತರು ನೀಡಿರುವ ಭೂಮಿಗೆ ತತಕ್ಷಣದಲ್ಲಿ ಕಾವೇರಿ ನೀರಾವರಿ ನಿಗಮವು ಪರಿಹಾರವನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಕೈಗೊಳ್ಳಬೇಕಾಗುವ ಅಭಿವೃದ್ಧಿ ಕೆಲಸಗಳಿಗೆ ರೈತರು ಭೂಮಿಕೊಡಲು ಮುಂದಾಗುವುದಿಲ್ಲ. ವಿಷಯದ ಸೂಕ್ಷ್ಮತೆ ಅರಿತು ಅಧಿಕಾರಿಗಳು ಬಹಳ ಎಚ್ಚರ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ನೀರನ್ನು ನಿರ್ವಹಣೆ ಮಾಡುವ ಸವಡೆಗಳಿಗೆ ಸರಿಯಾಗಿ ಪತ್ರಿ ತಿಂಗಳು ಸಂಬಳವಾಗುತ್ತಿಲ್ಲ. ಕೋರ್ಟ್ ಆದೇಶವಿದ್ದರೂ ಕೆಲಸಕ್ಕೆ ಸರಿಯಾದ ಸಮಾನ ವೇತನ ನೀಡದಿರುವ, ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತ ಬರುತ್ತಿದ್ದಾರೆ ಎಂದು ಸವಡೆಗಳು ಅಳಲನ್ನು ತೋಡಿಕೊಂಡಿದ್ದಾರೆ ಎಂದ ಸಚಿವರು, ಯಾವುದೇ ಕಾರಣಕ್ಕೂ ರೈತರು ತೊಂದರೆ ಅನುಭವಿಸಬಾರದು. ನೀರು ನಿರ್ವಹಣೆ ಮಾಡುವುದು ಸವಡೆಗಳ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಸವಡೆಗಳ ಸಮಸ್ಯೆಗಳನ್ನು ಅರಿತಿರುವುದರಿಂದ, ಸದ್ಯದಲ್ಲೇ ಅವರ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಹಾಗೂ ಬಾರಿ ನೀರಾವರಿ ಸಚಿವರ ಗಮನಕ್ಕೆ ತಂದು, ಸವಡೆಗಳ ಸಮಸ್ಯೆಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ಹೇಳಿದರು.
ರೈತರಿಗೆ ವಿದ್ಯುತ್ ಬಹಳ ಅವಶ್ಯಕವಾಗಿದ್ದು, ಸೆಸ್ಕ್ ಅಧಿಕಾರಿಗಳು ಶಾಸಕರುಗಳೊಂದಿಗೆ ಚರ್ಚಿಸಿ, ವಿಧಾನಸಭಾ ಕ್ಷೇತ್ರವಾರು ಬೇಕಾಗುವ ಸಬ್ ಸ್ಟೇಷನ್‍ಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಶೀಘ್ರ ಸಲ್ಲಿಸಬೇಕು. ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ಕೊರತೆಯಾಗಬಾರದು ಎಂದು ಹೇಳಿದ ಸಚಿವರು ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿಯ ವೇಳೆ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ, ರೈತರು ರಾತ್ರಿಯ ವೇಳೆ ನಿದ್ರಿಸದೆ ವಿದ್ಯುತ್‍ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸೆಸ್ಕ್ ಅಧಿಕಾರಿಗಳು ನಿರಂತರ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಮುಂದಿನ 25 ವರ್ಷವನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಯೋಜನೆಯನ್ನು ರೂಪಿಸಿ ವರದಿಯನ್ನು ಸಲ್ಲಿಸಲು ತಿಳಿಸಿದರು.
ಮಂಡ್ಯ ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು, ಸೆಸ್ಕ್ ಅಧಿಕಾರಿಗಳು ವಿಶೇಷ ಯೋಜನೆಯನ್ನು ಸಿದ್ಧಪಡಿಸಬೇಕು. ಇಂಧನ ಖಾತೆ ಮುಖ್ಯಮಂತ್ರಿಯವರ ಬಳಿ ಇರುವುದರಿಂದ, ರೈತರ ಹಿತದೃಷ್ಟಿಯಿಂದ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸಲು ತುಂಬ ಸಮಯಾವಕಾಶ ಬೇಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಟ್ರಾನ್ಸ್‍ಫಾರ್ಮರ್ಸ್, ವಿದ್ಯುತ್ ಕಂಬ ಅಥವಾ ಯಾವುದೇ ವಸ್ತುಗಳ ಕೊರತೆ ನೆಪವನ್ನು ಸೆÀಸ್ಕ್ ಅಧಿಕಾರಿಗಳು ನೀಡದೆ, ನಿರಂತರ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಇಂಧನ ಇಲಾಖೆಯಲ್ಲಿ ಕಾರ್ಯೋನ್ಮಖರಾಗಬೇಕು ಎಂದು ತಿಳಿಸಿದರು.
ಶಾಸಕರುಗಳಾದ ಎಂ.ಶ್ರೀನಿವಾಸ್, ಅನ್ನದಾನಿ, ಸುರೇಶ್‍ಗೌಡ, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎನ್.ಅಪ್ಪಾಜಿಗೌಡ ಹಾಗೂ ಕೆ.ಟಿ.ಶ್ರೀಂಠೇಗೌಡ ಅವರುಗಳು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿರುವ ಬಹಳಷ್ಟು ನಾಲೆಗಳು ಇದ್ದೂ ಇಲ್ಲದಂತಾಗಿದೆ. ನಾಲೆಗಳಲ್ಲಿ ಗಿಡಗಂಟೆಗಳು ಬೆಳೆದುನಿಂತಿದ್ದು , ಹೂಳು ನಾಲೆಗಳನ್ನು ಆವರಿಸಿಕೊಂಡಿದೆ. ಮೊದಲು ಗಿಡÉಗಂಟೆಗಳು ಹಾಗೂ ಹೂಳನ್ನು ತೆರವುಗೊಳಿಸಬೇಕು. ನಾಲೆಗಳಿಗೆ ಸರಾಗವಾಗಿ ನೀರು ಬರದಿರಲು ಇದು ಒಂದು ಮುಖ್ಯ ಕಾರಣವಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು ಒಮ್ಮತದಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸನ್ನ, ಅಧೀಕ್ಷಕ ಇಂಜಿನಿಯರ್ ಅಮರ್‍ನಾಥ್,ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಯಾಲಕ್ಕಿಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401