ದಿನದ ಸುದ್ದಿ

ಧಾರವಾಡ-ಬೆಂಗಳೂರು ಸೇರಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ನಾಳೆ ಚಾಲನೆ

Published

on

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಭೂಪಾಲ್‌ನ ಕಮಲಾಪತಿ ರೈಲು ನಿಲ್ದಾಣದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.

ರಾಣಿ ಕಮಲಾಪತಿ-ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್, ಖಾಜೂರ್‌ರಾಹೋ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಡಗಾಂವ್-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್, ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಹತಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಾಳೆ ಹಸಿರು ನಿಶಾನೆ ತೋರಲಿದ್ದಾರೆ.
ಈ ರೈಲುಗಳ ಆರಂಭದಿಂದ ಗೋವಾ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಮೊದಲ ವಂದೇ ಭಾರತ್ ರೈಲು ಸಂಚಾರವಾಗಲಿದೆ.

ನಂತರ ಶಾದೂಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ರಕ್ತ ಹೀನತೆ ನಿರ್ಮೂಲನೆ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಿದ್ದಾರೆ.
ಕುಡಗೋಲು ಕಣ ರಕ್ತ ಹೀತನೆಗೆ ಸಂಬಂಧಿಸಿದ ಅಭಿಯಾನದ ಹಿನ್ನೆಲೆಯಲ್ಲಿ 2040ರ ವೇಳೆಗೆ ಈ ಮಾದರಿಯ ರಕ್ತ ಹೀನತೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ 3 ಕೋಟಿ 57 ಲಕ್ಷ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಗುರುತಿನ ಚೀಟಿ ವಿತರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ರಾಣಿ ದುರ್ಗಾವತಿ ಗೌರವ್ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಪ್ರದೇಶ ಸರ್ಕಾರ ರಾಣಿ ದುರ್ಗಾವತಿಯ ತ್ಯಾಗದ ಸಂಕೇತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.16ನೇ ಶತಮಾನದ ಮಧ್ಯಭಾಗದಲ್ಲಿ ಗೋಂದವನದ ರಾಣಿಯಾಗಿ ರಾಣಿ ದುರ್ಗಾವತಿ ಆಡಳಿತ ನಡೆಸಿದ್ದರು. ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version