ದಿನದ ಸುದ್ದಿ
ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮಗೆ ಜಾನಪದ ತಜ್ಞ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಜಾನಪದ ಹಾಡುಗಾರ್ತಿ, ಕಲಾವಿದೆ ವಡ್ಡಗೆರೆ ಕದರಮ್ಮ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿಗೆ ಆಯ್ಕೆಮಾಡಿದೆ.
ಇವರು ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ (ತುಮಕೂರು ವಿವಿ), ವೀಚಿ ಸಾಹಿತ್ಯ ಪ್ರಶಸ್ತಿ , ಬೆಂಗಳೂರು ಸೃಷ್ಟಿಕಲಾ ಮಂದಿರದ ಸೃಷ್ಟಿ ಕಲಾ ಗೌರವ ಪುರಸ್ಕಾರ ,18 ಮುಂತಾದ ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾರೆ.
ಅಕ್ಷರ ಕಲಿಯದೆಯೂ ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ( ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯ) ವಿದ್ಯಾರ್ಥಿಗಳಿಗೆ ವಡ್ಡಗೆರೆ ಕದರಮ್ಮ ಹಾಡಿರುವ “ವಡ್ಡಗೆರೆ ನಾಗಮ್ಮ; ಮಹಾಸತಿ ಕಾವ್ಯ” ಪಠ್ಯ ಪುಸ್ತಕವಾಗಿರುತ್ತದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ಇದೇ ಸೆ.30ರ ಭಾನುವಾರ ಬೆಳಗ್ಗೆ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕರಾದ ಜಾನಪದ ತಜ್ಞ – ನಾಡೋಜ ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿ ಮತ್ತು 10.000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401